ಸಿದ್ದರಾಮಯ್ಯ ಕ್ಷಮೆಯಾಚನೆಗೆ ಆಗ್ರಹ; ಬಿಜೆಪಿ ಎಸ್‌ಸಿ ಮೋರ್ಚಾ ಪ್ರತಿಭಟನೆ

ಕೊಪ್ಪಳ: ‘ಕಾಂಗ್ರೆಸ್‌ನ ಘಟಾನುಘಟಿ ನಾಯಕರನ್ನು ಚುನಾವಣೆಯಲ್ಲಿ ಸೋಲಿಸುವ ತಂತ್ರ ಹೂಡಿ ಈಗ ಹೊಟ್ಟೆಪಾಡಿಗೆ ದಲಿತರು ಬಿಜೆಪಿ ಸೇರುತ್ತಾರೆ ಎಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆ ಖಂಡನೀಯ‘ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ಅಸಮಾಧನ ವ್ಯಕ್ತಪಡಿಸಿತು.
ಬಿಜೆಪಿ ಎಸ್‌ಸಿ ಮೋರ್ಚಾ ನೇತೃತ್ವದಲ್ಲಿ ಮಂಗಳವಾರ ನಗರದ ಅಶೋಕ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ದಲಿತ ಮುಖಂಡರು ಪಾಲ್ಗೊಂಡು ಆಕ್ರೋಶ ಪಡಿಸಿದರು.
ಎಸ್‌ಸಿ ಮೋರ್ಚಾದ ಜಿಲ್ಲಾ ಅಧ್ಯಕ್ಷ ಸಣ್ಣ ಕನಕಪ್ಪ ಚಲವಾದಿ ಮಾತನಾಡಿ, ಸಿಂದಗಿ ಉಪ ಚುನಾವಣೆಯಲ್ಲಿ ದಲಿತ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ತಮ್ಮ ಪ್ರೌಢಿಮೆ ಪ್ರದರ್ಶನ ಮಾಡಿದ್ದಾರೆ. ಮೀಸಲಾತಿಗೆ ಆಗ್ರಹಿಸಿ ನಡೆದ ಸಂದರ್ಭದಲ್ಲಿ ಸಮುದಾಯದ ಮುಖಂಡ ಎಚ್. ಆಂಜನೇಯ ಅವರನ್ನು ಬೃಹತ್ ವೇದಿಕೆಯಿಂದ ತಳ್ಳಿದ್ದು ಈ ರಾಜ್ಯದ ಜನ ನೋಡಿದ್ದಾರೆ. ಇದರ ಮೇಲೆಯೇ ಅವರಿಗೆ ದಲಿತರ ಮೇಲೆ ಎಷ್ಟೊಂದು ಪ್ರೀತಿ ಇದೆ ಎಂಬುವುದನ್ನು ತಿಳಿಯಬೇಕು. ಸಿದ್ದರಾಮಯ್ಯ ಕೂಡಲೇ ಕ್ಷಮೆಯಾಚಿಸಿ, ಹೇಳಿಕೆ ಹಿಂಪಡೆಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದರು.
ರಾಜ್ಯ ಕಾರ್ಯಕಾರಣಿ ಸದಸ್ಯ ಕನಕಮೂರ್ತಿ ಚಲವಾದಿ ಮಾತನಾಡಿ, ಸಿದ್ದರಾಮಯ್ಯನವರ ಹೇಳಿಕೆ ಸಂವಿಧಾನ ವಿರೋಧಿ. ದಲಿತ ಸಮುದಾಯದವರ ಬೆಂಬಲದಿಂದಲೇ ಮುಖ್ಯಮಂತ್ರಿ, ವಿರೋಧಪಕ್ಷದ ನಾಯಕರಾಗಿದ್ದೇವೆ ಎಂಬುದನ್ನು ಮರೆಯಬಾರದು. ಇದನ್ನು ಡಾ.ಬಿ.ಆರ್. ಅಂಬೇಡ್ಕರ್ ಕೂಡಾ ಕ್ಷಮಿಸುವುದಿಲ್ಲ ಎಂದರು.
ಪ್ರಧಾನ ಕಾರ್ಯದರ್ಶಿ ಗಣೇಶ ಹೊರತಟ್ನಾಳ ಮಾತನಾಡಿ, 'ಸಿದ್ದರಾಮಯ್ಯ ಅವರೇ ನೀವು 2006ರಲ್ಲಿ ಜೆ.ಡಿ.ಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ರಲ್ಲ ಯಾವ ಉದ್ದೇಶಕ್ಕೆ ಹೋದ್ರಿ ಎನ್ನುವುದನ್ನು ಮೊದಲು ಬಹಿರಂಗ ಪಡಿಸಬೇಕು' ಎಂದು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷದ ದಲಿತ ಸಮುದಾಯದ ಘಟಾನುಘಟಿ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ಡಾ.ಜಿ.ಪರಮೇಶ್ವರ ಅವರನ್ನು ವ್ಯವಸ್ಥಿತವಾಗಿ ಸೋಲಿಸಿ ದಲಿತರಿಗೆ ಯಾರು ಅನ್ಯಾಯ ಮಾಡಿದ್ದಾರೆ ಎಂಬುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಪ್ರತಿಭಟನೆಯಲ್ಲಿ ನಗರ ಘಟಕದ ಅಧ್ಯಕ್ಷ ಸುನೀಲ್ ಹೆಸರೂರ, ಎಸ್.ಸಿ ಮೋರ್ಚಾ ಉಸ್ತುವಾರಿ ವೀಣಾ ಬನ್ನಿಗೋಳ, ಪಂಪಯ್ಯ ಹಿರೇಮಠ, ಶೇಖರ ಪಾಟೀಲ್, ಗವಿಸಿದ್ದಪ್ಪ ಗಿಣೀಗೇರಿ, ಮಂಜುನಾಥ ಮುಸಲಾಪುರ, ಸುಭಾಸ್ ಮದಕಟ್ಟಿ, ಸಂಗಪ್ಪ ಜೋಗಣ್ಣನವರ, ಜಮದಗ್ನಿ ಚೌಡ್ಕಿ, ಪ್ರಕಾಶ ಹಿರೇಮನಿ, ಹನುಮಂತ ಬಸರಿಗಿಡದ, ಗವಿ ಭಜಂತ್ರಿ, ಮಹೇಶ ಕಂದಾರಿ, ಗೀತಾ ಮುತ್ತಾಳ, ರಾಧಾ ಕನಕಮೂರ್ತಿ, ನಿಂಗರಾಜ ಕಟ್ಟಿಮನಿ, ಬಸವರಾಜ ಗಂಗಾವತಿ, ಹಾಗೂ ವಿವಿಧ ಮೋರ್ಚಾದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.