ಶುಕ್ರವಾರ, ಮೇ 27, 2022
22 °C
ಗಂಗಾವತಿ ತಾಲ್ಲೂಕಿನಲ್ಲಿ ಎರಡನೇ ಮಾದರಿ ಮೈದಾನ; ₹16 ಲಕ್ಷ ವೆಚ್ಚದಲ್ಲಿ ನಿರ್ಮಾಣ

‘ನರೇಗಾ’ ಶ್ರಮದಿಂದ ಚೆಂದದ ಕ್ರೀಡಾಂಗಣ

ಎನ್.ವಿಜಯ್ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ತಾಲ್ಲೂಕಿನ ಶ್ರೀರಾಮನಗರ ಸರ್ಕಾರಿ ಪದವಿ ಕಾಲೇಜಿನ ಎದುರು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಸುಂದರ ಹಾಗೂ ಮಾದರಿ ಕ್ರೀಡಾಂಗಣ ನಿರ್ಮಿಸಲಾಗಿದೆ.

ಈಗಾಗಲೇ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಉದ್ಯೋಗ ಖಾತ್ರಿ ಯೋಜನೆಯಡಿ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ, ಕೃಷಿ ಹೊಂಡ, ಬದು ನಿರ್ಮಾಣ, ಕೊಟ್ಟಿಗೆ ಗೊಬ್ಬರ ತೊಟ್ಟಿಗಳನ್ನು ನಿರ್ಮಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಇದೀಗ ಶ್ರೀರಾಮನಗರ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ದೈಹಿಕ ಸದೃಢತೆ ಕಾಪಾಡಿಕೊಳ್ಳಲು ಅನುಕೂಲವಾಗುವಂತೆ ಮೈದಾನ ಅಭಿವೃದ್ಧಿ ಪಡಿಸಿರುವುದು ವಿಶೇಷ.

ನರೇಗಾ ಯೋಜನೆಯಡಿ ನಿರ್ಮಾಣವಾದ ಜಿಲ್ಲೆಯ ಎರಡನೇ ಕ್ರೀಡಾಂಗಣ ಇದಾಗಿದ್ದು, ಇದಕ್ಕೆ 2 ಎಕರೆ ಸ್ಥಳ ಕಾಯ್ದಿರಿಸಲಾಗಿತ್ತು. ಆದರೆ, ಸದ್ಯ 1 ಎಕರೆ ಸ್ಥಳದಲ್ಲಿ ಮೈದಾನ ನಿರ್ಮಿಸಲಾಗಿದೆ. ಇದರ ಸುತ್ತ ಗಿಡಗಳನ್ನು ನೆಟ್ಟು, ಪರಿಸರ ಸಂರಕ್ಷಣೆಗೆ ಒತ್ತು ನೀಡಲಾಗಿದೆ. ಈ ಹಿಂದೆ ಆರ್ಹಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮೊದಲ ಕ್ರೀಡಾಂಗಣ ನಿರ್ಮಿಸಲಾಗಿತ್ತು.

ಇಲ್ಲಿ 225 ಮೀಟರ್ ನಡಿಗೆ ಪಥ, ಬಾಸ್ಕೆಟ್ ಬಾಲ್ ಅಂಕಣ, ಬ್ಯಾಡ್ಮಿಂಟನ್ ಕೋರ್ಟ್, ವಾಲಿಬಾಲ್ ಅಂಕಣ, ಕಬಡ್ಡಿ ಅಂಕಣ ನಿರ್ಮಿಸಲಾಗಿದೆ.

‘ಮಹಿಳೆಯರು, ಹಿರಿಯ ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ವಾಕಿಂಗ್ ಮಾಡಲು ಅನುಕೂಲವಾಗಲಿಯೆಂದೇ ನಡಿಗೆ ಪಥ ಸಿದ್ಧಪಡಿಸಲಾಗಿದೆ. ಬಾಸ್ಕೆಟ್‌ಬಾಲ್ ಅಂಕಣವು ಗ್ರಾಮೀಣ ಭಾಗದ ಮಕ್ಕಳಿಗೂ ಸಿಗಲಿ ಎಂಬ ಉದ್ದೇಶದಿಂದ ನಿರ್ಮಿಸಲಾಗಿದೆ’ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಡಿ.ಮೋಹನ್.

ಈ ಮೈದಾನ ನಿರ್ಮಾಣಕ್ಕೆ ₹16 ಲಕ್ಷ ವೆಚ್ಚ ತಗುಲಿದ್ದು, 27 ಮಂದಿ ಕಾರ್ಮಿಕರು 16 ದಿನ ಕೆಲಸ ಮಾಡಿ ದ್ದಾರೆ. ನರೇಗಾದಡಿ 432 ಮಾನವ ದಿನಗಳನ್ನು ಸೃಜಿಸಿ, ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣ ಮಾಡಲಾಗಿದೆ.

ಇಲ್ಲಿ ಮಾತ್ರವಲ್ಲದೆ ಗಂಗಾವತಿ ತಾಲ್ಲೂಕಿನ ಕೆಸರಹಟ್ಟಿ, ಚಿಕ್ಕಬೆಣಕಲ್, ಅಯೋಧ್ಯಾ, ಮಲ್ಲಾಪುರ, ಉಡಮಕಲ್ ಗ್ರಾಮದ ಶಾಲೆಗಳಲ್ಲಿ ಸುಸಜ್ಜಿತ ಬೃಹತ್ ಮೈದಾನ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

ಶ್ರೀರಾಮನಗರ ಸರ್ಕಾರಿ ಪದವಿ ಕಾಲೇಜಿನಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶ್ರೀರಾಮನಗರ, ನರಸಾಪುರ, ಗುಂಡೂರು, ಹೆಬ್ಬಾಳ ಕ್ಯಾಂಪ್, ಕೋಟಯ್ಯ ಕ್ಯಾಂಪ್, ಮುಸ್ಟೂರ್ ಕ್ಯಾಂಪ್, ಸಿದ್ದಾಪುರ, ಸಾಲುಂಚಿಮರ, ಬರಗೂರು, ಉಳೆನೂರು, ಮರಳಿ ಗ್ರಾಮದಿಂದ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ.

‘ಸರ್ಕಾರಿ ಪದವಿ ಕಾಲೇಜಿನ ಎದುರು ಮೈದಾನ ನಿರ್ಮಾಣವಾಗಿದ್ದು, ಮಹಿಳೆಯರು, ವೃದ್ಧರು ವಾಯುವಿಹಾರ ಮಾಡಲು ಸಹಕಾರಿಯಾಗಲಿದೆ‘ ಎನ್ನುತ್ತಾರೆ ಶ್ರೀರಾಮನಗರ ಗ್ರಾ.ಪಂ
ಪಿಡಿಒ ಅಧಿಕಾರಿ ವತ್ಸಲಾ.

*ಸರ್ಕಾರದ ಆಸ್ತಿಒತ್ತುವರಿ ಮಾಡಿ, ಭತ್ತ ಬೆಳೆಯ ಲಾಗುತ್ತಿತ್ತು. ಆಸ್ತಿಯ ದಾಖಲೆಗಳು ಪರಿಶೀಲಿಸಿ, ಬೆಳೆ ತೆರವುಗೊಳಿಸಿ, ಆಸ್ತಿಯನ್ನು ಪಡೆದು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಮೈದಾನ ನಿರ್ಮಿಸಲಾಗುತ್ತಿದೆ

- ಡಾ.ಡಿ.ಮೋಹನ್, ತಾ.ಪಂ ಇಒ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.