ತಾವರಗೇರಾ: ಪರೀಕ್ಷೆಗಳು ಸಮೀಪಿಸಿದಾಗ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ವಿಶೇಷ ತರಗತಿಗಳನ್ನು ಆಯೋಜಿಸುವುದು ಹೊಸದೇನಲ್ಲ. ಆದರೆ, ವರ್ಷವಿಡೀ ವಿಶೇಷ ತರಗತಿಗಳನ್ನು ನಡೆಸಿ ವಿದ್ಯಾರ್ಥಿಗಳ ಪಾಲಿಗೆ ‘ಕಬ್ಬಿಣದ ಕಡಲೆ’ಯಾದ ಗಣಿತ ಕಲಿಕೆ ಸುಲಭ ಮಾಡುವ ಕೆಲಸವನ್ನು ಸಮೀಪದ ನವಲಹಳ್ಳಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಪರಶುರಾಮ ಎಂ ಮಾಡುತ್ತಿದ್ದಾರೆ.
ಗಣಿತ ವಿಷಯ ಬೋಧಿಸುವ ಪರಶುರಾಮ ಈ ಶಾಲೆಗೆ 2016ರಲ್ಲಿ ವರ್ಗವಾಗಿ ಬಂದರು. ಗ್ರಾಮೀಣ ಭಾಗದವರು ‘ಕಬ್ಬಿಣದ ಕಡಲೆ’ ಎಂದೇ ಭಾವಿಸುವ ಗಣಿತ ಕಲಿಸಲು ವಿಶೇಷ ತರಗತಿಗಳನ್ನು ಏರ್ಪಡಿಸಲು ಶುರು ಮಾಡಿದರು. ಆಗಿನಿಂದಲೂ ಶಾಲೆಯ ಫಲಿತಾಂಶದ ದಿಕ್ಕು ಕೂಡ ಬದಲಾಗಿದೆ.
ಆ ವರ್ಷ ಗಣಿತದಲ್ಲಿ ಶಾಲೆಯು ಶೇ 90.12ರಷ್ಟು ಫಲಿತಾಂಶ ಪಡೆಯಿತು. 2017ರಲ್ಲಿ ಶೇ 88.15ರಷ್ಟು ಫಲಿತಾಂಶ ದಾಖಲಿಸಿತು. ಪರಶುರಾಮ ಅವರು ಹೆಚ್ಚುವರಿ ತರಗತಿಯ ಶ್ರಮ ಮಾತ್ರ ಬಿಡಲಿಲ್ಲ. ಇದರ ಫಲವಾಗಿ 2018ರಲ್ಲಿ ಶೇ100 ಫಲಿತಾಂಶ ಪಡೆಯಿತು. ಅಲ್ಲಿಂದ ಇಲ್ಲಿಯ ತನಕ ಗಣಿತದಲ್ಲಿ ಶೇ100ರಷ್ಟು ಫಲಿತಾಂಶ ದಾಖಲಿಸಿರುವುದು ವಿಶೇಷ. 2016ರಲ್ಲಿ ಎಸ್ಸೆಸ್ಸೆಲ್ಸಿಗೆ 81 ವಿದ್ಯಾರ್ಥಿಗಳು ಇದ್ದರು. ಪ್ರಸ್ತುತ 10ನೇ ತರಗತಿಯಲ್ಲಿ 110 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.
ಹಿಂದಿನ ಐದು ವರ್ಷಗಳ ಅವಧಿಯಲ್ಲಿ ಶಾಲೆ ಒಟ್ಟಾರೆಯಾಗಿ ಎರಡು ಬಾರಿ ಶೇ 100ರಷ್ಟು ಫಲಿತಾಂಶ ಪಡೆದಿರುವ ಶಾಲೆ, ಮೂರು ಬಾರಿ ಶೇ 98ರಷ್ಟು ಫಲಿತಾಂಶ ಪಡೆದಿದೆ. ಗಣಿತ ವಿಷಯದ ಉತ್ತಮ ಫಲಿತಾಂಶಕ್ಕೆ ಪರಶುರಾಮ ಬಲ ತುಂಬಿದರೆ, ಉಳಿದ ವಿಷಯಗಳಲ್ಲಿ ಮಕ್ಕಳ ಉತ್ತಮ ಓದಿಗೆ ಶಾಲೆಯ ಬೇರೆ ಶಿಕ್ಷಕರೂ ನೆರವಾಗಿದ್ದಾರೆ.
ಹೆಚ್ಚುವರಿ ಪಾಠ: ಪ್ರತಿನಿತ್ಯ ಬೆಳಿಗ್ಗೆ 8 ಗಂಟೆಯಿಂದ ಶಾಲೆ ಆರಂಭದವರೆಗೆ ಮತ್ತು ಶಾಲೆ ಬಿಟ್ಟಾಗಿನಿಂದ ಸಂಜೆ 6 ಗಂಟೆವರೆಗೆ ವಿಶೇಷ ತರಗತಿ ನಡೆಸಿ ಗಣಿತವನ್ನು ಪರಶುರಾಮ ಅವರು ಬೋಧಿಸುತ್ತಾರೆ. ಇದರೊಂದಿಗೆ ವಿವಿಧ ಸಂಶೋಧನೆ, ಚಟುವಟಿಕೆ ಮೂಲಕ ವಿದ್ಯಾರ್ಥಿಗಳ ಕಲಿಕೆ ನಡೆಯುತ್ತದೆ.
‘ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಶಿಕ್ಷಕ ಪರಶುರಾಮ ಕಾಳಜಿಯೊಂದಿಗೆ ವಿಶೇಷ ತರಗತಿ ನಡೆಸಿ ಅವರ ಕಲಿಕಾ ಗುಣಮಟ್ಟ ಸುಧಾರಣೆಗೆ ಶ್ರಮಿಸುತ್ತಾರೆ. ಮಕ್ಕಳಿಗೆ ವಿಜ್ಞಾನ, ಗಣಿತ, ತಂತ್ರಜ್ಞಾನ ಕಲಿಸಲು ವಿವಿಧ ಚಟುವಟಿಕೆಗಳನ್ನು ಆಯೋಜಿಸುವುದರಲ್ಲೂ ಅವರು ಮುಂಚೂಣಿಯಲ್ಲಿದ್ದಾರೆ’ ಎನ್ನುತ್ತಾರೆ ಮುಖ್ಯಶಿಕ್ಷಕ ಬಸವರಾಜ ಮಡಿವಾಳರ.
ಶಿಕ್ಷಕ ಪರಶುರಾಮ ಅವರು ಬೆಳಿಗ್ಗೆ ಬೇಗ ಬಂದು ವಿಶೇಷ ತರಗತಿ ನಡೆಸಿದ್ದರಿಂದ ಶಾಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿದ್ದು. ಅವರ ಕಾಳಜಿ ಮೆಚ್ಚುವಂಥದ್ದುಬಸಮ್ಮ ಕಡೆಕೊಪ್ಪ ಎಸ್‌ಡಿಎಂಸಿ ಅಧ್ಯಕ್ಷೆ ಸರ್ಕಾರಿ ಪ್ರೌಢಶಾಲೆ ನವಲಹಳ್ಳಿ
ಶಿಕ್ಷಕ ಪರಶುರಾಮ ಗಣಿತ ಪ್ರಯೋಗಾಲಯ ಚಟುವಟಿಕೆ ಸ್ಮಾರ್ಟ್‌ಕ್ಲಾಸ್ ಸಾಮಗ್ರಿ ಬಳಸಿ ವಿದ್ಯಾರ್ಥಿಗಳಿಗೆ ಬೋಧಿಸುತ್ತಾರೆ. ನಿತ್ಯವೂ ವಿಶೇಷ ತರಗತಿ ನಡೆಸಿರುವುದು ಮಾದರಿ ಕಾರ್ಯ ಬಿಇಒಸುರೇಂದ್ರ ಕಾಂಬ್ಳೆ ಕುಷ್ಟಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.