ಸೋಮವಾರ, ಅಕ್ಟೋಬರ್ 18, 2021
27 °C
ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಬಿಇಒ ಸೋಮಶೇಖರ ಗೌಡ ಅಭಿಮತ

ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ದೊಡ್ಡದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ‘ಒಂದು ದೇಶದ ಅಭಿವೃದ್ದಿ ಶೈಕ್ಷಣಿಕ ಗುಣಮಟ್ಟ ಆಧರಿಸಿರುತ್ತದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ ಗೌಡ ಅಭಿಪ್ರಾಯಪಟ್ಟರು.

ಶ್ರೀರಾಮನಗರ ಸ್ವಾಮಿ ವಿವೇಕಾನಂದ ಸೇವಾ ಸಂಘದ ವತಿಯಿಂದ ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಭಾನುವಾರ ನಡೆದ ಶಿಕ್ಷಕರ ದಿನಾಚರಣೆ ಹಾಗೂ ಜನ ಮೆಚ್ಚಿದ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಯಾವ ದೇಶ ಗುಣಮಟ್ಟದ ಶಿಕ್ಷಣ ಹೊಂದಿರುತ್ತದೋ, ಆ‌ ದೇಶ ಮಾತ್ರ ವೇಗವಾಗಿ ಅಭಿವೃದ್ಧಿ ಹೊಂದಲು ಸಾಧ್ಯ. ಆದ್ದರಿಂದ ಭಾರತ‌ ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ ಎಂದರು.

ಪ್ರತಿ ವರ್ಷ ಸರ್ಕಾರ ಸೇರಿದಂತೆ ವಿವಿಧ ಸಂಘಟನೆಗಳು ಶಿಕ್ಷಕರ ಸೇವೆಯನ್ನು ಗುರುತಿಸಿ, ಉನ್ನತ ಮಟ್ಟದ ಪ್ರಶಸ್ತಿಗಳನ್ನು ನೀಡುತ್ತವೆ. ಇದರಿಂದ ಶಿಕ್ಷಕರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಜವಾಬ್ದಾರಿ ಹೆಚ್ಚಾಗುತ್ತದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ವಿ.ಗೊಂಡಬಾಳ ಮಾತನಾಡಿ,‘ಶಿಕ್ಷಕರಿಂದಲೇ ಈ ದೇಶದ ಅಭಿವೃದ್ಧಿ ಸಾಧ್ಯ. ಕೋವಿಡ್ ಸಂದರ್ಭದಲ್ಲಿ ಶಿಕ್ಷಕರು ಜೀವದ ಹಂಗು ತೊರೆದು, ವಿದ್ಯಾಗಮ, ಆನ್‌ಲೈನ್‌ ಸೇರಿದಂತೆ ವಿವಿಧ ರೀತಿಯಲ್ಲಿ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ’ ಎಂದರು.

ಲಿಟಲ್ ಹಾರ್ಟ್ ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯಸ್ಥ ಜಗನ್ನಾಥ ಅಲಂಪಲ್ಲಿ ಮಾತನಾಡಿ,‘ಸ್ವಾಮಿ ವಿವೇಕಾನಂದ ಸೇವಾ ಸಂಘದ ಅಧ್ಯಕ್ಷ ಜಿ.ರಾಮಕೃಷ್ಣ ಅವರು ರಕ್ತ ಭಂಡಾರ, ಸಾಮೂಹಿಕ ಮದುವೆ, ಮಕ್ಕಳಿಗೆ ನೋಟ್‌ಬುಕ್‌ ವಿತರಣೆ, ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸೇರಿದಂತೆ ಹಲವು ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ. ಇವರ ಸಾಮಾಜಿಕ ಸೇವೆಗಳನ್ನು ಮೆಚ್ಚಿ ಆಂಧ್ರಪ್ರದೇಶ ಸರ್ಕಾರ ಗವರ್ನರ್ ಪ್ರಶಸ್ತಿ ನೀಡಿ ಸತ್ಕಾರ ಮಾಡಿದೆ’ ಎಂದರು.

ಮಕ್ಕಳಿಗೆ ನೋಟ್‌ಬುಕ್‌ ವಿತರಿಸಲಾಯಿತು. ಶಿಕ್ಷಕರಿಗೆ ಜನ ಮೆಚ್ಚಿದ ಶಿಕ್ಷಕ ರತ್ನ ಪ್ರಶಸ್ತಿ, ಕಲಾವಿದರಿಗೆ ಕಲಾವಿದರ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸ್ವಾಮಿ ವಿವೇಕಾನಂದ ಸೇವಾ ಸಂಘದ ಅಧ್ಯಕ್ಷ ಜಿ.ರಾಮಕೃಷ್ಣ, ರಾಜೇಶ್ ರೆಡ್ಡಿ, ಸುದರ್ಶನ್, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಚಾಂದ್ ಪಾಷ, ಪ್ರೀಯಾಕುಮಾರಿ, ಸೈಯದ್ ಮಹ್ಮದ್ ಗುತ್ತಿ, ಶಿಕ್ಷಕಿಯರು ಭಾಗ್ಯಮ್ಮ, ಬುಡ್ಡಮ್ಮ, ಶಕುಂತಲಾ ಹಾಗೂ ನಿರ್ಮಾಲದೇವಿ ಸೇರಿ ಹಲವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.