ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ: ಜಲಾಶಯದ ತೀರದಲ್ಲಿ ನೀರವ ಮೌನ

ಜನಜುಂಗುಳಿಯಿಂದ ತುಂಬಿರುತ್ತಿದ್ದ ತುಂಗಭದ್ರಾಕ್ಕೆ ಈಗ ಸಾರ್ವಜನಿಕರಿಗೆ ನಿರ್ಬಂಧ
ಪ್ರಮೋದ ಕುಲಕರ್ಣಿ
Published 15 ಆಗಸ್ಟ್ 2024, 7:46 IST
Last Updated 15 ಆಗಸ್ಟ್ 2024, 7:46 IST
ಅಕ್ಷರ ಗಾತ್ರ

ಕೊಪ್ಪಳ: ತಾಲ್ಲೂಕಿನ ಮುನಿರಾಬಾದ್‌ನಲ್ಲಿರುವ ತುಂಗಭದ್ರಾ ಜಲಾಶಯಕ್ಕೆ ನೀರು ಹರಿದು ಬರುತ್ತಿದ್ದರೆ ಆ ಸೊಬಗು ಕಣ್ತುಂಬಿಕೊಳ್ಳುವುದೇ ಆನಂದ. ಇಂಥದ್ದೊಂದು ಖುಷಿಗಾಗಿ ಪ್ರತಿವರ್ಷ ಅಪಾರ ಸಂಖ್ಯೆಯಲ್ಲಿ ಜನ ಜಲಾಶಯಕ್ಕೆ ಭೇಟಿ ನೀಡುತ್ತಿದ್ದರು.

ಆದರೆ ಈ ಬಾರಿ ಮಳೆರಾಯ ಕೈ ಹಿಡಿದರೂ ದುರದೃಷ್ಟ ಕಾಡಿದೆ. ಒಟ್ಟು 105.78 ಟಿಎಂಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಅವಧಿಗಿಂತ ಮೊದಲೇ ನೀರು ಬಂದಿತ್ತು. ಎಡದಂಡೆ, ಬಲದಂಡೆ, ರಾಯಬಸವಣ್ಣ ಹೀಗೆ ಜಲಾಶಯ ವ್ಯಾಪ್ತಿಯ ಎಲ್ಲ ಕಾಲುವೆಗಳಿಗೂ ಬೇಗನೆ ನೀರು ಹರಿಸಿ ರೈತರಿಗೆ ಅನುಕೂಲವೂ ಕಲ್ಪಿಸಲಾಗಿತ್ತು. ಸಾಕಷ್ಟು ಪ್ರಮಾಣದಲ್ಲಿ ಹರಿದು ಬಂದು ಒಳಹರಿವು ಜಲಾಶಯದ ಸೊಬಗು ಹೆಚ್ಚಿಸಿ ಜನರ ಕಣ್ಣಿಗೆ ಆನಂದ ಮೂಡಿಸಿತ್ತು.

ಕಣ್ಣು ಹಾಯಿಸಿದಷ್ಟೂ ದೂರ ನೀರು ಕಾಣುತ್ತಿದ್ದ ಜಲಾಶಯದ 19ನೇ ಗೇಟ್‌ ಆ. 10ರ ರಾತ್ರಿ ಕೊಚ್ಚಿ ಹೋಗಿದ್ದರಿಂದ ಈ ಗೇಟ್ ಮರಳಿ ಅಳವಡಿಸಲು ಸಾಕಷ್ಟು ಪ್ರಮಾಣದಲ್ಲಿ ನೀರು ಹರಿಬಿಡಲಾಗಿದೆ. ಹೀಗಾಗಿ ಈ ಬಾರಿ ಜನರಿಗೆ ಸ್ವಾತಂತ್ರ್ಯೋತ್ಸವದ ದಿನ ಜಲಾಶಯದ ಬಳಿ ಸಿಗುತ್ತಿದ್ದ ಖುಷಿ ಇಲ್ಲ.

ಪ್ರತಿ ವರ್ಷ ಅ. 15ರಂದು ತಾವಿದ್ದ ಸ್ಥಳದಲ್ಲಿ ಧ್ವಜಾರೋಹಣ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದ ಜನ ದೊಡ್ಡ ಮಟ್ಟದಲ್ಲಿ ಜಲಾಶಯಕ್ಕೆ ಬರುತ್ತಿದ್ದರು. ಜಲಾಶಯದ ದಡಕ್ಕೆ ಬಲವಾಗಿ ಅಪ್ಪಳಿಸುತ್ತ ಅಲೆಗಳು ಸೌಂದರ್ಯ ಮತ್ತು ನೀರು ಮೈಗೆ ಸೋಕಿಸಿಕೊಂಡು ಸಂಭ್ರಮಿಸುತ್ತಿದ್ದರು. ಅಲ್ಲಿಯೇ ತರಹೇವಾರಿ ತಿನಿಸುಗಳು, ಸೆಲ್ಫಿ ಸಂಭ್ರಮ, ಕಣ್ಣುದುರೇ ಲಕ್ಷಾಂತರ ಟಿಎಂಸಿ ಅಡಿ ನೀರು ಕಣ್ತುಂಬಿಸಿಕೊಳ್ಳಲು ಸಿಗುತ್ತಿತ್ತು.

ಈಗ ಗೇಟ್‌ ದುರಸ್ತಿ ಕಾರ್ಯ ಆರಂಭವಾಗಿರುವ ಕಾರಣ ಸಾರ್ವಜನಿಕರ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಮುನಿರಾಬಾದ್‌ನ ಪಂಪಾವನದ ಮುಂಭಾಗದ ಪ್ರವೇಶಕ್ಕೂ ಅವಕಾಶವಿಲ್ಲ. ಹೀಗಾಗಿ ಸೀಮಿತ ಸಂಖ್ಯೆಯಲ್ಲಿ ಅಧಿಕಾರಿಗಳು, ಪೊಲೀಸರಿಗೆ ಮಾತ್ರ ಒಳಗಡೆ ಪ್ರವೇಶ ನೀಡಲಾಗುತ್ತಿದೆ. ನೀರಿನಿಂದ ಮೈ ತುಂಬಿಕೊಂಡು ಸೌಂದರ್ಯದ ಗಣಿಯಂತೆ ಐದು ದಿನಗಳ ಹಿಂದೆ ಕಂಗೊಳಿಸುತ್ತಿದ್ದ ಜಲಾಶಯ ಈಗ ಸೊರಗಿದಂತಿದೆ. ಲೇಕ್‌ ವಿವ್‌ ಮುಂಭಾಗದಲ್ಲಿ ಜಲಾಶಯದಲ್ಲಿ ಅಡಿಯಲ್ಲಿನ ಕಲ್ಲುಗಳು ಕಣ್ಣಿಗೆ ರಾಚುತ್ತಿವೆ. ಅಲ್ಲಿ ನೀರವ ಮೌನ ಆವರಿಸಿದ್ದು ಜನರಲ್ಲಿ ಬೇಸರ ಉಂಟು ಮಾಡಿದೆ.

ಸ್ವಾತಂತ್ರ್ಯ ದಿನದಂದು ಜಲಾಶಯದ ಬಹುತೇಕ ಎಲ್ಲ ಗೇಟ್‌ಗಳಿಂದ ನೀರು ಹರಿಸಿ ರಾಷ್ಟ್ರಧ್ವಜ ಬಣ್ಣದ ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳ ವಿದ್ಯುತ್‌ ಬೆಳಕಿನ ದೀಪಗಳನ್ನು ನೀರಿನ ಮೇಲೆ ಹರಿಸಲಾಗುತ್ತಿತ್ತು. ಈ ಬಾರಿ ಯಾವ ಸಂಭ್ರಮವೂ ಅಲ್ಲಿಲ್ಲದಂತಾಗಿದೆ.

ಶೃಂಗಾರಗೊಂಡ ಕೊಪ್ಪಳ

ಸ್ವಾತಂತ್ರ್ಯ ದಿನದ ಅಂಗವಾಗಿ ಕೊಪ್ಪಳದ ನಗರವನ್ನು ಶೃಂಗರಿಸಲಾಗಿದೆ. ಅಶೋಕ ಸರ್ಕಲ್‌ನಿಂದ ಬಸ್‌ ನಿಲ್ದಾಣದ ಸಮೀಪದ ತನಕದ ಬೀದಿಬದಿಯ ವಿದ್ಯುತ್‌ ಕಂಬಗಳಿಗೆ ಕೇಸರಿ ಬಿಳಿ ಹಾಗೂ ಹಸಿರು ಬಣ್ಣಗಳ ವಿದ್ಯುತ್‌ ದೀಪಗಳನ್ನು ಅಳವಡಿಸಿ ಅಲಂಕಾರ ಮಾಡಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಿಸುವರು. 10 ಗಂಟೆಗೆ ತೋಟಗಾರಿಕಾ ಇಲಾಖೆ ಆವರಣದಲ್ಲಿ ಆಯೋಜನೆಯಾಗಿರುವ ವಿದೇಶಿ ಸಸಿಗಳ ಪರಿಚಯ ಮತ್ತು ಮಾರಾಟ ಪ್ರದರ್ಶನಕ್ಕೆ ಚಾಲನೆ ನೀಡುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT