ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ನಾಯಕರ ಬರುವಿಕೆಗೆ ಕಾಯುವುದಿಲ್ಲ'

ಕುರುಬ ಸಮುದಾಯ ಎಸ್‌ಟಿ ಪಟ್ಟಿಗೆ ಸೇರ್ಪಡೆ ಹೋರಾಟದ ವಿಚಾರ: ವಿರೂಪಾಕ್ಷಪ್ಪ ಹೇಳಿಕೆ
Last Updated 18 ಡಿಸೆಂಬರ್ 2020, 14:57 IST
ಅಕ್ಷರ ಗಾತ್ರ

ಕುಷ್ಟಗಿ: ‘ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬೇಡಿಕೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಯಾವುದೇ ನಾಯಕರು ಬರಲಿ ಬರದೆ ಇರಲಿ, ಬೆಂಬಲ ನೀಡಲಿ ನೀಡದೆ ಇರಲಿ ಅವರಿಗಾಗಿ ಕಾಯುವುದಿಲ್ಲ’ ಎಂದು ಹೋರಾಟ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ, ಮುಖಂಡ ಕಾಂತೇಶ್ ಸ್ಪಷ್ಟಪಡಿಸಿದರು.

ಹೋರಾಟ ಪಕ್ಷಾತೀತವಾಗಿರುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಬೇಡಿಕೆಗೆ ಹೇಗೆ ಸ್ಪಂದಿಸುತ್ತವೆ ಎಂಬುದರ ಆಧಾರದ ಮೇಲೆ ಹೋರಾಟದ ಸ್ವರೂಪ ಯಾವ ರೀತಿ ಇರುತ್ತದೆ ಎಂಬುದು ತೀರ್ಮಾನಿಸಲಾಗುತ್ತದೆ. ಡಿ.31 ರಂದು ಬೆಳೋಡಿಯಲ್ಲಿ ಕಾಗಿನೆಲೆ ಶ್ರೀ ಸಾನ್ನಿಧ್ಯದಲ್ಲಿ ‘ಒಡೆಯರ’ ಸಮಾವೇಶ ನಡೆಯುವುದು. ಈಗಾಗಲೇ ಬೆಳಗಾವಿ ವಿಭಾಗ ಮಟ್ಟದ ಸಮಾವೇಶ ನಡೆದಿದ್ದು, ಜ.4 ರಂದು ಸಿಂಧನೂರಿನಲ್ಲಿ ಕಲಬುರ್ಗಿ ವಿಭಾಗ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಜ.6 ರಂದು ದಾವಣಗೆರೆಯಲ್ಲಿ, 7 ಕ್ಕೆ ಶಿಕಾರಿಪುರದಲ್ಲಿ ಸಮಾವೇಶಗಳು ನಡೆಯಲಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜ.15 ರ ಮಕರ ಸಂಕ್ರಾಂತಿಯಂದು ನಾಲ್ವರು ಸ್ವಾಮೀಜಿಗಳ ನೇತೃತ್ವದಲ್ಲಿ ಕಾಗಿನೆಲೆಯಿಂದ ಬೆಂಗಳೂರು ವರೆಗೆ ಪಾದಯಾತ್ರೆ ಆರಂಭಗೊಳ್ಳಲಿದ್ದು, ಪ್ರತಿ ದಿನ ಒಂದೊಂದು ಜಿಲ್ಲೆಯವರು ಭಾಗವಹಿಸುವರು. ಫೆ. 7 ರಂದು ಬೆಂಗಳೂರಿನಲ್ಲಿ ನಡೆಯುವ ಬೃಹತ್‌ ಸಮಾವೇಶದಲ್ಲಿ ರಾಜ್ಯದ ಎಲ್ಲ ಕುರುಬ ಸಮುದಾಯದವರು ಪಾಲ್ಗೊಳ್ಳುವರು ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹೋರಾಟಕ್ಕೆ ತಮ್ಮನ್ನು ಆಹ್ವಾನಿಸದಿರುವ ಕುರಿತು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು,‘ನಾಲ್ವರು ಶ್ರೀಗಳು ಸ್ವತಃ ಸಿದ್ದರಾಮಯ್ಯ ಅವರ ಮನೆಗೆ ಹೋಗಿ ಭೇಟಿ ಮಾಡಿ ಚರ್ಚಿಸಿದ್ದಾರೆ. ಸಿದ್ದರಾಮಯ್ಯ ಅವರೂ ಹೋರಾಟದಲ್ಲಿ ಮುಂದುವರಿಯುವಂತೆ ಒಪ್ಪಿಗೆ ಸೂಚಿಸಿದ ನಂತರವಷ್ಟೆ ಸಮಿತಿ ರಚನೆಯಾಗಿದೆ. ಸಚಿವ ಈಶ್ವರಪ್ಪ ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ. ಇಷ್ಟಾದ ನಂತರವೂ ತಮ್ಮನ್ನು ಆಹ್ವಾನಿಸಿಲ್ಲ ಎಂದು ಸಿದ್ದರಾಮಯ್ಯ ಹೇಳಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಹೋರಾಟ ಇಂದಿನದಲ್ಲ ಹಲವು ದಶಕಗಳಿಂದಲೂ ನಡೆದುಬಂದಿದೆ. ದಕ್ಷಿಣ ಭಾರತದಲ್ಲಿ ವಿವಿಧ ಸಮಾನಾಂತರ ಹೆಸರುಗಳಿಂದ ಕರೆಯಲ್ಪಡುವ ಕುರುಬರು ಬುಡುಕಟ್ಟು ಜನಾಂಗಕ್ಕೆ ಸೇರಿದ್ದು, ಅವರು ಈ ದೇಶದ ಮೂಲ ನಿವಾಸಿಗಳು ಎಂಬುದನ್ನು ಹಲವಾರು ಸಂಶೋಧನೆಗಳು ತಿಳಿಸಿವೆ ಎಂದು ಹೇಳಿದರು.

ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇರುವುದರಿಂದ ನಮ್ಮ ಹೋರಾಟಕ್ಕೆ ಸ್ಪಂದನೆ ದೊರೆಯುವ ಆಶಾಭಾವನೆ ಇದೆ. ರಾಜ್ಯ ಸರ್ಕಾರ ಈ ವಿಷಯದಲ್ಲಿ ಬೆಂಬಲ ವ್ಯಕ್ತಪಡಿಸಬಹುದು. ರಾಜಕೀಯ ನಾಯಕರೂ ಬೆಂಬಲ ನೀಡದಿದ್ದರೂ ಸರಿ ಶ್ರೀಗಳ ನೇತೃತ್ವದಲ್ಲಿ ಬೇಡಿಕೆ ಈಡೇರುವವರೆಗೆ ಎಷ್ಟೇ ವರ್ಷಗಳು ಕಳೆದರೂ ಹೋರಾಟ ಮುಂದುವರೆಯಲಿದೆ ಎಂದು ವಿವರಿಸಿದರು.

ಪರಿಶಿಷ್ಟ ಪಂಗಡದವರು ಮೀಸಲಾತಿ ಹೆಚ್ಚಿಸುವಂತೆ ನಡೆಸುತ್ತಿರುವ ಹೋರಾಟದ ಕುರಿತು ಪ್ರತಿಕ್ರಿಯಿಸಿದ ವಿರುಪಾಕ್ಷಪ್ಪ,‘ಮೀಸಲಾತಿ ಶೇ 50 ಮೀರದಂತೆ ಸರ್ಕಾರ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ. ಕುರುಬ ಸಮುದಾಯವನ್ನು ಪ.ಪಂ ಕ್ಕೆ ಸೇರಿಸಿದ ನಂತರ ಎಸ್‌ಟಿ ಮೀಸಲಾತಿ ಹೆಚ್ಚಳದ ಹೋರಾಟದಲ್ಲಿ ಸಕ್ರಿಯವಾಗಿ ತೊಡಗುವುದಾಗಿ’ ಸ್ಪಷ್ಟಪಡಿಸಿದರು.

ಪ್ರಮುಖರಾದ ತೇಜಯ್ಯ ಗುರುವಿನ, ಶಿವಾನಂದಯ್ಯ, ಮಲ್ಲಣ್ಣ ಪಲ್ಲೇದ, ವಕೀಲ ಫಕೀರಪ್ಪ ಚಳಗೇರಿ, ಹನುಮಂತಪ್ಪ ಚೌಡ್ಕಿ, ಪರಸಪ್ಪ ಕತ್ತಿ, ಕಲ್ಲೇಶ ತಾಳದ, ಮಹಾಲಿಂಗಪ್ಪ ದೋಟಿಹಾಳ, ವಿನಯಕುಮಾರ ಮೇಲಿನಮನಿ ಹಾಗೂ ಚಂದ್ರಕಾಂತ ವಡಗೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT