ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮರಸ್ಯಕ್ಕೆ ಸಾಮೂಹಿಕ ಮದುವೆ ಪೂರಕ

ಸರ್ವ ಧರ್ಮಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಹಸನಸಾಬ್ ದೋಟಿಹಾಳ ಅಭಿಮತ
Last Updated 5 ಮೇ 2022, 3:06 IST
ಅಕ್ಷರ ಗಾತ್ರ

ಕುಷ್ಟಗಿ: ಜಾತಿ, ಧರ್ಮಗಳ ಬೇಲಿಯನ್ನು ದಾಟಿ ಸರ್ವ ಸಮುದಾಯಗಳ ಜನರನ್ನು ಒಗ್ಗೂಡಿಸಿಕೊಂಡು ನಡೆಸುವ ಉಚಿತ ಸಾಮೂಹಿಕ ವಿವಾಹಗಳಿಂದ ಬಡವರಿಗೆ ಅನುಕೂಲವಾಗಿತ್ತದೆ. ಅದಕ್ಕಿಂತಲೂ ಹೆಚ್ಚಾಗಿ ಕಲುಷಿತಗೊಳ್ಳುತ್ತಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ಜನರು ಸಾಮರಸ್ಯದಿಂದ ಬದುಕುವುದಕ್ಕೆ ಪ್ರೇರೇಪಿಸುತ್ತವೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಸನಸಾಬ್ ದೋಟಿಹಾಳ ಹೇಳಿದರು.

ಇಲ್ಲಿಯ ಭಗತ್ ಸಿಂಗ್ ಕ್ರೀಡೆ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಸಂತೆ ಮೈದಾನದಲ್ಲಿನ ಬನ್ನಿ ಮಹಾಕಾಳಿ ದೇವಿಗೆ ಮಹಾಭಿಷೇಕ ಹಾಗೂ ಬಸವ ಜಯಂತಿ ನಿಮಿತ್ತ ಬುಧವಾರ ಇಲ್ಲಿ ಏರ್ಪಡಿಸಿದ್ದ ಸರ್ವ ಧರ್ಮಗಳ ಉಚಿತ ಸಾಮೂಹಿಕ ವಿವಾಹದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅನೇಕ ವರ್ಷಗಳಿಂದಲೂ ಭಗತ್‌ಸಿಂಗ್‌ ಸಂಸ್ಥೆಯವರು ಎಲ್ಲ ಜಾತಿಗಳಿಗೆ ಸೇರಿದ ಜನರ ಸಾಮೂಹಿಕ ವಿವಾಹ ನೆರವೇರಿಸುವ ಮೂಲಕ ಸಮಾಜಮುಖಿ ಕೆಲಸ ನಡೆಸುತ್ತ ಬಂದಿರುವುದು ಇತರರಿಗೂ ಮಾದರಿಯಾಗಿದೆ. 1982ನೇ ವರ್ಷದಲ್ಲಿ ತಾಲ್ಲೂಕಿನಲ್ಲಿ ಸಾಮೂಹಿಕ ವಿವಾಹ ಪರಿಕಲ್ಪನೆಗೆ ಚಾಲನೆ ದೊರೆತಿದೆ ಎಂಬುದನ್ನು ನೆನಪಿಸಿದರು.

ಸಾನಿಧ್ಯ ವಹಿಸಿದ್ದ ಮದ್ದಾನಿ ಹಿರೇಮಠದ ಕರಿಬಸವ ಸ್ವಾಮೀಜಿ, ಸಾಮೂಹಿಕ ವಿವಾಹಗಳು ಬಡವರ ಪಾಲಿಗೆ ವರದಾನವಾಗಿವೆ, ನಿಸ್ವಾರ್ಥದಿಂದ ಇಂಥ ಸಾಮಾಜಿಕ ಕಾರ್ಯಗಳನ್ನು ನೆರವೇರಿಸುತ್ತಿರುವುದು ಸಂಘಟಕರ ಜನಪರ ಚಿಂತನೆಗೆ ಸಾಕ್ಷಿ ಒದಗಿಸುತ್ತದೆ ಎಂದರು.

ಕುಕನೂರಿನ ಡಾ.ಮಹಾದೇವ ದೇವರು ಮಾತನಾಡಿ, ಸಮಾಜದಲ್ಲಿ ಶ್ರೀಮಂತರಿಗೆ ಕೊರತೆ ಇಲ್ಲ ಆದರೆ ಹೃದಯ ಶ್ರೀಮಂತಿಕೆ ಇರುವವರು ಬಹಳಷ್ಟು ಕಡಿಮೆ, ಸವೆಯದಷ್ಟು ಹಣ ಸಂಪಾದಿಸಿದರೂ ಅದರಲ್ಲಿ ಒಂದಷ್ಟು ಭಾಗವನ್ನು ಸಾಮಾಜಿಕ ಕೆಲಸಕಾರ್ಯಗಳಿಗೆ ಮತ್ತು ಬಡವರಿಗಾಗಿ ವಿನಿಯೋಗಿಸುವ ವಿವೇಚನೆ ಇಲ್ಲದವರೇ ಹೆಚ್ಚಾಗಿದ್ದಾರೆ. ಇಂಥ ಪರಿಸ್ಥಿತಿಯ ನಡುವೆಯೂ ವಜೀರ ಗೋನಾಳ ಮತ್ತವರ ಸಂಗಡಿಗರ ಸೇವೆ ಹಾಗೂ ಶ್ರಮ ಸಾರ್ಥಕ ಎಂದರು.

ಸಂಘಟಕ ವಜೀರ ಅಲಿ ಗೋನಾಳ ಮಾತನಾಡಿ, ಉತ್ತಮ ಕೆಲಸ ಮಾಡುವುದಕ್ಕೂ ಅಡ್ಡಗಾಲು ಹಾಕುವವರು ಇದ್ದೇ ಇರುತ್ತಾರೆ, ಒಳ್ಳೆ ಕೆಲಸ ಮಾಡದಿದ್ದರೂ ಸರಿ ಆದರೆ ಬೇರೆಯವರ ಮಾಡಿದ ಕೆಲಸಕ್ಕೆ ಕಲ್ಲುಹಾಕಬಾರದು ಎಂಬುದರಲ್ಲಿ ನಂಬಿಕೆ ಇಟ್ಟುಕೊಂಡು ಸಮಾಜದ ಋಣ ತೀರಿಸುವುದಕ್ಕೆ ಗುರುಗಳು, ಹಿರಿಯರ ಸಹಕಾರದಿಂದ ಈ ಕೆಲಸ ನಡೆಸುತ್ತ ಬರಲಾಗಿದೆ ಎಂದರು.

ಹನುಮಸಾಗರದ ಸಯ್ಯದ್‌ ಷಾ ಅಬ್ದುಲ್‌ಖಾದ್ರಿ ಪಾಷಾ ಸಾನಿಧ್ಯ ವಹಿಸಿದ್ದರು. ಮಲ್ಲಣ್ಣ ಪಲ್ಲೇದ, ರೆಹಮಾನಸಾಬ್‌ ದೊಡ್ಡಮನಿ, ಭಾರತಿ ನೀರಗೇರಿ, ಸಿದ್ದಪ್ಪ ಬಂಡಿ, ಅಗ್ನಿಶಾಮಕ ಠಾಣಾಧಿಕಾರಿ ರಾಜು ನರಸಪ್ಪ, ಪುರಸಭೆ ಉಪಾಧ್ಯಕ್ಷೆ ಹನಮವ್ವ ಕೋರಿ, ಉಮೇಶ ಮಂಗಳೂರು ಇದ್ದರು.

ಬೆಳಿಗ್ಗೆ ಬನ್ನಿಮಹಾಕಾಳಿ ದೇವ ಸ್ಥಾನದಲ್ಲಿ ಮಹಾಭಿಷೇಕ, ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ನಡೆದ ಸಾಮೂಹಿಕ ವಿವಾಹದಲ್ಲಿ 32 ಜೋಡಿ ವಧುವರರು ಶ್ರೀಗಳ ಸಾನಿಧ್ಯದಲ್ಲಿ ದಾಂಪತ್ಯ ಬದುಕಿಗೆ ಕಾಲಿರಿಸಿದರು. ಸಂಜೆ ನಡೆದ ಮನೋರಂಜನೆ, ಸಂಗೀತ ಕಾರ್ಯಕ್ರಮದಲ್ಲಿ ಅನೇಕ ಪ್ರಮುಖರು, ವಿವಿಧ ಕಲಾವಿದರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT