ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Womens Day: ನೂರಾರು ಬಾವಿ ತೋಡಿದ ಹೊರತಟ್ನಾಳ ಗ್ರಾಮದ ಸಾಹಸಿ ಮಹಿಳೆ

Published 8 ಮಾರ್ಚ್ 2024, 5:37 IST
Last Updated 8 ಮಾರ್ಚ್ 2024, 5:37 IST
ಅಕ್ಷರ ಗಾತ್ರ

ಕೊಪ್ಪಳ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹೊರವಲಯದ ಗಣೇಶನಗರದಲ್ಲಿ 57 ವರ್ಷದ ಗೌರಿ ನಾಯ್ಕ ಒಬ್ಬಂಟಿಯಾಗಿ ಬಾವಿ ತೋಡಿ, ನೀರು ಚಿಮ್ಮಿಸಿದ ವಿಷಯ ರಾಜ್ಯದಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಹೀಗೆ ಮೂರು ದಶಕಗಳ ಹಿಂದೆಯೇ ನೂರಾರು ಬಾವಿಗಳನ್ನು ತೋಡಿ ನೀರು ಹರಿಸಿದ ಜಿಲ್ಲೆಯ ಮಹಿಳೆ ಸಾಧನೆಯ ಕಥನವೂ ಇತರರಿಗೆ ಪ್ರೇರಣೆಯಾಗುವಂತಿದೆ.

ಕೊಪ್ಪಳ ತಾಲ್ಲೂಕಿನ ಹೊರತಟ್ನಾಳ ಗ್ರಾಮದ ಹುಲಿಗೆಮ್ಮ ಎಮ್ಮಿಯರ್ ಅವರಿಗೆ ಈಗ 78 ವರ್ಷ ವಯಸ್ಸು. ಅನಕ್ಷರಸ್ತೆಯಾದ ಹುಲಿಗೆಮ್ಮ ಹೊರತಟ್ನಾಳ ಅವರು ಇಲ್ಲಿನ ಬೈಪಾಸ್‌ ಹೆದ್ದಾರಿ ಭಾಗ, ಗುನ್ನಾಳ, ಚಿಕ್ಕಸಿಂಧೋಗಿ ಸೇರಿದಂತೆ ಕೊಪ್ಪಳ ಸುತ್ತಮುತ್ತಲಿನ ಊರುಗಳಲ್ಲಿ 100ಕ್ಕೂ ಹೆಚ್ಚು ಬಾವಿಗಳನ್ನು ತೋಡಿ ಸಾಹಸಿ, ಛಲವಂತೆ ಹಾಗೂ ಗಟ್ಟಿಗಿತ್ತಿ ಎನಿಸಿದ್ದಾರೆ.

ಇವರ ಪತಿ ದಿವಂಗತ ನಿಂಗಪ್ಪ ಎಮ್ಮಿಯರ್‌ 1960 ಹಾಗೂ 70ರ ದಶಕದಲ್ಲಿ ಗ್ರಾಮೀಣ ಕ್ರೀಡೆಗಳಾದ ಗುಂಡು ಎತ್ತುವುದು, ಬಂಡಿ ಚಕ್ರ ಬಿಚ್ಚಿ ಹಾಕುವದು ಹಾಗೂ ಎತ್ತುವ ಕೆಲಸವನ್ನು ಮಾಡುತ್ತಿದ್ದರು. ಅವರೂ 300ಕ್ಕೂ ಹೆಚ್ಚು ಬಾವಿಗಳನ್ನು ಕೊಪ್ಪಳ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ತೋಡಿದ್ದಾರೆ. ನಿಂಗಪ್ಪ ಅವರಿಗೆ ಮೊದಲಿನಿಂದಲೂ ನೂರಾರು ಎಕರೆ ಹೊಲವಿದ್ದ ಕಾರಣ ಸಾಕಷ್ಟು ನೀರಿನ ಅಗತ್ಯವೂ ಇತ್ತು. ನೀರು ಸಂಗ್ರಹಿಸಿಕೊಟ್ಟುಕೊಳ್ಳಲು ಆಗ ವ್ಯವಸ್ಥೆಯಿಲ್ಲದ ಕಾರಣ ಬಾವಿ ತೋಡಲಾಗುತ್ತಿತ್ತು. 

ಗಂಡನ ಜೊತೆಯಲ್ಲಿ ಬಾವಿ ತೋಡುವುದನ್ನು ರೂಢಿಸಿಕೊಂಡ ಹುಲಿಗೆಮ್ಮ ಗಟ್ಟಿಗಿತ್ತಿ. ಇವರು ತೋಡಿದ ನೂರಾರು ಬಾವಿಗಳಲ್ಲಿ ಬಹುತೇಕ ಬಾವಿಗಳು ಮುಚ್ಚಿ ಹೋಗಿದ್ದರೂ, ಈಗಲೂ ಕೆಲವು ಬಾವಿಗಳು ಇಂದಿಗೂ ರೈತರಿಗೆ ಉಪಯುಕ್ತವಾಗಿವೆ.

ಇವರು ತೋಡಿದ ಎಮ್ಮಿಯರ್‌ ತೋಟದ ಬಾವಿ ಈಗಲೂ ಪ್ರಸಿದ್ಧಿ ಪಡಿದಿದೆ. ಈ ಬಾವಿಯ ನೀರು ತಂಪು ಹಾಗೂ ಅತ್ಯಂತ ಸಿಹಿ. ಐದಾರು ದಶಕಗಳ ಹಿಂದೆ ಏಳು ಹಳ್ಳಿಗಳ ಜನ ಈ ಬಾವಿಯಿಂದ ನೀರು ಕುಡಿಯುತ್ತಿದ್ದರು. ಹೀಗಾಗಿ ಈಗಲೂ ಹಳ್ಳಿಯ ಜನರಲ್ಲಿ ಎಮ್ಮಿಯರ್‌ ತೋಟದ ಬಾವಿ ಎಂತಲೇ ಪ್ರಸಿದ್ಧಿ ಪಡೆದಿದೆ. ಜಿಲ್ಲಾ ಕೇಂದ್ರದ ಬೈಪಾಸ್‌ ರಸ್ತೆಯ ಹತ್ತಿರವಿರುವ ಜಿಲ್ಲಾ ಸ್ಕೌಟ್‌ ಮತ್ತು ಗೈಡ್ಸ್‌ ತರಬೇತಿ ಕೇಂದ್ರದ ಎದುರು ಇರುವ ಎಮ್ಮಿಯರ್‌ ತೋಟದಲ್ಲಿ ಈ ಬಾವಿ ಕಾಣಬಹುದು.

ಆಗ ನೀರಿನ ಸಮಸ್ಯೆ ವ್ಯಾಪಕವಾಗಿತ್ತು. ಬೋರ್‌ವೆಲ್‌ಗಳು ಇರಲಿಲ್ಲ. ಹೊಲಕ್ಕೆ ಬಳಸಲಾಗುತ್ತಿದ್ದ ತೋಟದ ನೀರು ಕೃಷಿ ಚಟುವಟಿಕೆ, ಬಳಕೆಗೆ ಹಾಗೂ ಕುಡಿಯಲು ಪ್ರಮುಖ ಆಧಾರವಾಗಿತ್ತು. ಹಲವು ದಶಕಗಳ ಹಿಂದೆ ಹುಲಿಗೆಮ್ಮ ಅವರು ಬಾವಿ ತೋಡುವ ಮೂಲಕ ಮಾಡಿದ ಸಾಧನೆಗಳೆಲ್ಲವೂ ಈಗ ಸಾಹಸದ ಕಥನ ಹೇಳುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT