ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷದ ಅಭ್ಯರ್ಥಿಗಳ ವಿರುದ್ಧ ಕೆಲಸ: ಜಿಲ್ಲಾ ಘಟಕದ ಅಧ್ಯಕ್ಷರಿಗೆ ದೂರು

Last Updated 7 ಜನವರಿ 2022, 12:57 IST
ಅಕ್ಷರ ಗಾತ್ರ

ಕುಕನೂರು: ‘ಈಚೆಗೆ ನಡೆದ ಪಟ್ಟಣದ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ವಿರುದ್ಧ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಗುಳಗಣ್ಣವರ ಕೆಲಸ ಮಾಡಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಕಾರಣರಾಗಿದ್ದಾರೆ’ ಎಂದು ಆರೋಪಿಸಿ ಸೋತ ಅಭ್ಯರ್ಥಿಗಳು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡನಗೌಡ ಪಾಟೀಲ್ ಅವರಿಗೆ ದೂರು ನೀಡಿದ್ದಾರೆ.

ಸಚಿವರ ಸ್ವ- ಕ್ಷೇತ್ರದಲ್ಲಿಯೇ ಭಿನ್ನಮತ ಸ್ಫೋಟಗೊಂಡಿದ್ದರಿಂದ ಪಕ್ಷದ ಕಾರ್ಯಕರ್ತರಲ್ಲಿ ಮುಜುಗರ ಉಂಟು ಮಾಡಿದೆ. ಮಾತ್ರವಲ್ಲದೇ ಜಿಲ್ಲಾ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಬಹಿರಂಗವಾಗಿದೆ.

ಪಟ್ಟಣದ ಚುನಾವಣೆಯಲ್ಲಿ ನವೀನ್ ಕುಮಾರ ಗುಳಗಣ್ಣವರ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿಲ್ಲ. ತಮ್ಮ ಹಿಂಬಾಲಕರ ಮೂಲಕ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಿದ್ದಾರೆ. ಹೀಗಾಗಿ ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಪಟ್ಟಣದ 19 ವಾರ್ಡ್‌ಗಳಲ್ಲಿಯೂ ಗುಳಗಣ್ಣವರ್ ಮತ್ತು ಅವರ ಹಿಂಬಾಲಕರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದರಿಂದ ಕೆಲವು ವಾರ್ಡ್‍ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಅಲ್ಪ ಮತಗಳಿಂದ ಸೋಲು ಅನುಭವಿಸಿದ್ದಾರೆ. ನೇರವಾಗಿ ಚುನಾವಣೆಯಲ್ಲಿ ಭಾಗವಹಿಸದೇ, ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷ ವಿರೋಧಿ ಪೋಸ್ಟ್ ಹಾಕುವ ಮೂಲಕ ಪಕ್ಷದ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ನಾಯಕರಲ್ಲಿ ಶೀತಲ ಸಮರ: ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಭಿನ್ನಮತ ಸಾಮಾನ್ಯ. ಮೊದಲನಿಂದಲೂ ಹಾಲಪ್ಪ ಆಚಾರ್ ಹಾಗೂ ಗುಳಗಣ್ಣವರ್ ಕುಟುಂಬದ ನಡುವೆ ರಾಜಕೀಯ ನಂಟು ಅಷ್ಟಕಷ್ಟೆ. ಹಾಲಪ್ಪ ಆಚಾರ್ ಅವರು ಶಾಸಕರಾದ ಬಳಿಕ ನವೀನಕುಮಾರ ಗುಳಗಣ್ಣವರ್ ಹೆಚ್ಚಾಗಿ ಶಾಸಕರ ಜೊತೆ ಕಾಣಿಸಿಕೊಂಡಿಲ್ಲ. ಹೀಗಾಗಿ ಇವರಿಬ್ಬರ ನಡುವೆ ಆಂತರಿಕವಾಗಿ ರಾಜಕೀಯ ಶೀತಲ ಸಮರ ನಡೆಯುತ್ತಿದೆ.

ಪ್ರಾಮಾಣಿಕ ಕೆಲಸ:ಯಾರೋ ಮಾಡಿದ ತಪ್ಪಿಗೆ ನನ್ನ ಮೇಲೆ ಗೂಬೆ ಕೂರಿಸುವುದು ಬೇಡ. ಪಕ್ಷ ನನಗೆ ಏನು ಜವಾಬ್ದಾರಿ ಕೊಟ್ಟಿದೆ ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ. ನನ್ನ ಬಗ್ಗೆ ದೂರು ಕೊಟ್ಟಿರುವುದು ನನಗೆ ಗೊತ್ತಿಲ್ಲ. ಇದು ಪಕ್ಷದ ಆಂತರಿಕ ವಿಚಾರವಾಗಿದ್ದರಿಂದ ಅದನ್ನು ಪಕ್ಷದ ವೇದಿಕೆಯಲ್ಲಿಯೇ ಚರ್ಚಿಸುತ್ತೇನೆ’ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನವೀನ್ ಗುಳಗಣ್ಣವರ್ ಹೇಳುತ್ತಾರೆ.

ಪಕ್ಷ ವಿರೋಧಿ ಚಟುವಟಿಕೆ: ‘7ನೇ ವಾರ್ಡಿನಲ್ಲಿ ಸತತವಾಗಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾ ಬಂದಿದ್ದಾರೆ. ನಾನು ಸ್ಪರ್ಧಿಸಿರುವ 9 ನೇ ವಾರ್ಡಿನಲ್ಲೂ ಅವರು ನನ್ನ ವಿರುದ್ಧ ಕೆಲಸ ಮಾಡಿದ್ದಾರೆ. 8ನೇ ವಾರ್ಡಿನಲ್ಲೂ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದರಿಂದ ಈ ಮೂರು ವಾರ್ಡಿನಲ್ಲಿ ಬಿಜೆಪಿ ಸೋತಿದೆ. ಹೀಗಾಗಿ ನಾವು ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್‌ ಕಟೀಲ್ ಸೇರಿದಂತೆ ಪಕ್ಷದ ಪ್ರಮುಖರಿಗೆ ದೂರು ನೀಡಿದ್ದೇವೆ‘ ಎಂದು ಪರಾಜಿತ ಅಭ್ಯರ್ಥಿ ಗಂಗಾಧರ್ ನಾರಾಯಣಿ ಹೇಳಿದರು.

ಸೋತ ಅಭ್ಯರ್ಥಿ ಬಸಪ್ಪ ಅಮಾಜಪ್ಪ ಕುರಿ, ಅಶೋಕ ಜಗ್ಗಲ್, ಮಹಾಂತೇಶ ಹೂಗಾರ್, ರಾಮಣ್ಣ ಮುಂದಲಮನಿ, ಸಿದ್ದಪ್ಪ ಸಬರದ, ಲಕ್ಷ್ಮಣ ಕಂಬಳಿ, ರಾಮಣ್ಣ ಕರಿಗಾರ, ರಾಮಣ್ಣ ಯಡ್ಡೋಣಿ, ಬಸವರಾಜ ಈಬೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT