ರಡ್ಡಿಗೆ ಒಲಿದ ಅದೃಷ್ಟ: ಗೋನಾಳಗೆ ಮುಂದಿನ ಅವಕಾಶ

7
ಕುತೂಹಲ ಮೂಡಿಸಿದ ಉಪಾಧ್ಯಕ್ಷರ ಆಯ್ಕೆ: ಅಲ್ಪಸಂಖ್ಯಾತರಿಗೆ ಇಲ್ಲ ಮಣೆ

ರಡ್ಡಿಗೆ ಒಲಿದ ಅದೃಷ್ಟ: ಗೋನಾಳಗೆ ಮುಂದಿನ ಅವಕಾಶ

Published:
Updated:
Prajavani

ಕೊಪ್ಪಳ: ತೀವ್ರ ಕೂತೂಹಲ ಮೂಡಿಸಿದ್ದ ಇಲ್ಲಿನ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ವಿಶ್ವನಾಥರಡ್ಡಿ ಅವರು ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ತೆರೆ ಬಿದ್ದಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ಶಾಸಕ ರಾಘವೇಂದ್ರ ಹಿಟ್ನಾಳ ಅವರ ಸಹೋದರ ಕೆ.ರಾಜಶೇಖರ ಹಿಟ್ನಾಳ ಅವರು ಹಳೆಯ ಒಪ್ಪಂದದಂತೆ ತಮ್ಮ ಸ್ಥಾನಕ್ಕೆ ಒಲ್ಲದ ಮನಸ್ಸಿನಿಂದಲೇ ರಾಜೀನಾಮೆ ನೀಡಿದ್ದರು. ಹಳೆಯ ಒಪ್ಪಂದ ಪ್ರಕಾರ ರಾಜೀನಾಮೆ ಪಡೆಯಲಾಗಿದೆ ಎಂದು ಪಕ್ಷದ ಮುಖಂಡರು ಹೇಳಿದ್ದರು.

ಆದರೆ 'ಯಾವ ಒಪ್ಪಂದವೂ ಇಲ್ಲ' ಎಂದು ಹೇಳುತ್ತಿದ್ದ ಹಿಟ್ನಾಳ ಕುಟುಂಬದ ಸದಸ್ಯರು, ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಿವರಾಜ ತಂಗಡಗಿ ಅವರು ರಾಜಶೇಖರ ಹಿಟ್ನಾಳ್ ಅವರಿಗೆ ಒಪ್ಪಂದವನ್ನು ನೆನಪಿಸಿ ರಾಜೀನಾಮೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕನಕಗಿರಿ ವಿಧಾನಸಭಾ ಕ್ಷೇತ್ರದಿಂದ ಪರಾಭವಗೊಂಡ ತಂಗಡಗಿ ಅವರಿಗೆ ಈ ಚುನಾವಣೆ ಪ್ರತಿಷ್ಠೆಯಾಗಿತ್ತು. ಸರಣಿ ಸಭೆಗಳ ಮೂಲಕ ತಮ್ಮ ಕ್ಷೇತ್ರದ ಹಾಗೂ ಬೆಂಬಲಿಗರಿಗೆ ಸ್ಥಾನ ಪಡೆದುಕೊಳ್ಳುವ ನಿಟ್ಟಿನಲ್ಲಿ ತೀವ್ರ ಪೈಪೋಟಿ ನಡೆಸಿದ್ದರು.

ಆದರೆ, ತಂಗಡಗಿ ಅವರ ಬೆಂಬಲಿಗ ಹೇರೂರ ಕ್ಷೇತ್ರದ ಸದಸ್ಯ ಅಮರೇಶ ಗೋನಾಳ ಅವರಿಗೆ ಸ್ಥಾನ ಕಲ್ಪಿಸಕೊಡಲು ಒಲವು ತೋರಿದ್ದಾರೆ ಎನ್ನಲಾಗಿತ್ತು. ಅಲ್ಲದೆ ಕಟ್ಟಾ ಕಾಂಗ್ರೆಸ್‌ ಬೆಂಬಲಿಗ ವಿಶ್ವನಾಥ ರಡ್ಡಿ ಅವರು ಅಧ್ಯಕ್ಷ ಸ್ಥಾನಕ್ಕೆ ಹಕ್ಕು ಮಂಡಿಸುತ್ತಿದ್ದಾರೆ ಎಂದು ಇಬ್ಬರಲ್ಲಿಯೇ ಪೈಪೋಟಿ ಏರ್ಪಟ್ಟಿತ್ತು. ಈ ಪೈಪೋಟಿಯನ್ನು ಸ್ವತಃ ಪಕ್ಷದ ಅಧ್ಯಕ್ಷ ತಂಗಡಗಿ ಅವರೇ ಸೃಷ್ಟಿಸಿದ್ದರು. ಯಾರಿಗೇ ಸ್ಥಾನ ದೊರೆತರೂ ತಮ್ಮ ಕ್ಷೇತ್ರದವರೇ ಆಗುತ್ತಾರೆ ಎಂಬ ಅನಿವಾರ್ಯತೆಯನ್ನು ಸೃಷ್ಟಿಸಿದರು ಎಂದು ರಾಜಕೀಯ ಮೂಲಗಳು ವಿಶ್ಲೇಷಿಸಲಾಗುತ್ತಿದೆ.

ಐದು ವರ್ಷದ ಅವಧಿಯ ಜಿಲ್ಲಾ ಪಂಚಾಯಿತಿಯಲ್ಲಿ ಉಳಿದ 2.5 ವರೆ ವರ್ಷವನ್ನು ಗೋನಾಳ ಮತ್ತು ರಡ್ಡಿ ಅವರಿಗೆ ಹಂಚಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಒಪ್ಪಂದವನ್ನು ಪಕ್ಷದ ಮುಖಂಡರು ಬಹಿರಂಗಪಡಿಸಿಲ್ಲ. ಎಲ್ಲ ಲೆಕ್ಕಾಚಾರ ಮತ್ತು ಪೂರ್ವ ನಿರ್ಧಾರದಂತೆ ರಾಜಕೀಯ ಬಲೆ ಹೆಣೆಯುವಲ್ಲಿ ತಂಗಡಗಿ ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ.

ಅಲ್ಪಸಂಖ್ಯಾತರಿಗೆ ಇಲ್ಲ ಸ್ಥಾನ: ಉಪಾಧ್ಯಕ್ಷ ಸ್ಥಾನಕ್ಕೆ ಹಿಟ್ನಾಳ ಕ್ಷೇತ್ರದ ಸದಸ್ಯೆ ಬಿನಾ ಗೌಸ್ ಆಯ್ಕೆಯಾಗುತ್ತಾರೆ ಎಂದು ಬಹುತೇಕ ಖಚಿತವಾಗಿತ್ತು. ಅಲ್ಪಸಂಖ್ಯಾತ ಸಮಾಜಕ್ಕೆ ಸೇರಿದ ಇವರಿಗೆ ಸ್ಥಾನ ನೀಡಿದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ 'ಓಟ್ ಬ್ಯಾಂಕ್' ಇನ್ನೂ ಗಟ್ಟಿಗೊಳಿಸುವ ಆಶೆ ಹೊಂದಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಬೀನಾ ಗೌಸ್ ಅವರು ಉಪಾಧ್ಯಕ್ಷ ಸ್ಥಾನ ಬೇಡ ಎಂದು ತಿರಸ್ಕರಿಸಿದ್ದಾರೆ ಎಂದು ಪಕ್ಷದ ಮುಖಂಡರು ಹೇಳುತ್ತಾರೆ. ಗುರುವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಬದಲಾದದ್ದು, ಅಚ್ಚರಿ ಮೂಡಿಸಿದೆ.

 'ಅಲ್ಪಸಂಖ್ಯಾತ ಸಮಾಜದವರನ್ನು ಕೈಬಿಟ್ಟರೆ ಅವರು ಬೇರೆಲ್ಲೂ ಹೋಗಲ್ಲ. ಹೋದರೆ ಬೇರೆ ಪಕ್ಷದವರು ಅವರನ್ನು ಕರೆದುಕೊಳ್ಳುವುದಿಲ್ಲ' ಎಂಬ ಧೈರ್ಯದ ಮೇಲೆ ಬದಲಾವಣೆ ಮಾಡಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.  ಆದರೆ, ಅಳವಂಡಿ ಕ್ಷೇತ್ರದ ಸದಸ್ಯೆ ಕುರುಬ ಸಮಾಜಕ್ಕೆ ಸೇರಿದ ರತ್ನವ್ವ ನಗರ ಅವರ ಆಯ್ಕೆ ಪಕ್ಷದ ವಲಯದಲ್ಲಿಯೇ ಅಚ್ಚರಿ ಮೂಡಿಸಿದೆ. 

29 ಸದಸ್ಯ ಬಲದ ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್ 17, ಬಿಜೆಪಿ 11 ಹಾಗೂ ಒಬ್ಬ ಪಕ್ಷೇತರ ಸದಸ್ಯರು ಇದ್ದರು. ಬಿಜೆಪಿಗೆ ಸಂಖ್ಯಾಬಲ ಕೊರತೆ ಇದ್ದ ಕಾರಣ ಮತ್ತು ಕಾಂಗ್ರೆಸ್‌ನಲ್ಲಿ ಎಲ್ಲವೂ ಮೊದಲೇ ನಿರ್ಧಾರವಾದ ನಿಮಿತ್ತ ಅವಿರೋಧ ಆಯ್ಕೆ ನಡೆಯಿತು.

ಉಳಿದ 28 ತಿಂಗಳ ಅವಧಿಯಲ್ಲಿ ವಿಶ್ವನಾಥ ರಡ್ಡಿ 14 ತಿಂಗಳು ಹಾಗೂ 14 ತಿಂಗಳು ಹೇರೂರು ಕ್ಷೇತ್ರದ ಸದಸ್ಯ ಅಮರೇಶ ಗೋನಾಳ ಅಧಿಕಾರ ನಡೆಸುವ ಒಳ ಒಪ್ಪಂದವನ್ನು ಕಾಂಗ್ರೆಸ್ ನಾಯಕರು ಮಾಡಿಕೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !