ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ ನೌಕರರಿಂದ ಮುತ್ತಿಗೆ

Last Updated 3 ಫೆಬ್ರುವರಿ 2011, 7:05 IST
ಅಕ್ಷರ ಗಾತ್ರ

ಕೊಪ್ಪಳ: ಅಂಗನವಾಡಿ ನೌಕರರು ಮುಂದಿಟ್ಟಿರುವ ಸ್ಥಳೀಯ ಮಟ್ಟದಲ್ಲಿ ಪರಿಹಾರ ಒದಗಿಸಬಹುದಾದ ಬೇಡಿಕೆಗಳನ್ನು ಕುರಿತು ಚರ್ಚಿಸಲು ಫೆ. 17ರಂದು ಸಭೆ ನಡೆಯಲಿದೆ.ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಬುಧವಾರ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಸದಸ್ಯರು ಜಿಲ್ಲಾ ಪಂಚಾಯಿತಿಗೆ ಮುತ್ತಿಗೆ ಹಾಕಲು ಯತ್ನಿಸಿದ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಮೂರ್ತಿ ಈ ಭರವಸೆ ನೀಡಿದರು.

ಅಲ್ಲದೆ, ಸರ್ಕಾರದ ಮಟ್ಟದಲ್ಲಿ ಪರಿಹಾರ ಸಿಗುವಂತಹ ಬೇಡಿಕೆಗಳ ಬಗ್ಗೆ ಮೇಲಧಿಕಾರಿಗಳ ಗಮನ ಸೆಳೆಯುವುದಾಗಿಯೂ ಅವರು ಭರವಸೆ ನೀಡಿದರು.
ತಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಂಘದ ಸದಸ್ಯರು ಬುಧವಾರ ಇಲ್ಲಿನ ಸಾರ್ವಜನಿಕ ಮೈದಾನದಿಂದ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿದರು. ಆದರೆ, ಜಿಲ್ಲಾಡಳಿತ ಭವನ ಪ್ರವೇಶಿಸಿ, ಜಿಲ್ಲಾ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕುವ ಪ್ರತಿಭಟನಾಕಾರರ ಪ್ರಯತ್ನವನ್ನು ಪೊಲೀಸರು ತಡೆದರು.

ಈ ಹಿನ್ನೆಲೆಯಲ್ಲಿ ಸುಮಾರು 400ಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ಮುಖ್ಯದ್ವಾರದ ಮುಂದೆಯೆ ಧರಣಿ ಆರಂಭಿಸಿದರು. ಇದರಿಂದಾಗಿ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಜಿಲ್ಲಾಡಳಿತ ಭವನ ಪ್ರವೇಶ ದ್ವಾರ ಬಂದ್ ಆಗಿದ್ದರಿಂದ, ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದ ಜನರು ತೊಂದರೆ ಅನುಭವಿಸಬೇಕಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅಂಗನವಾಡಿ ನೌಕರರ ಸಂಘದ ಮುಖಂಡರು, ಫಲಾನುಭವಿಗಳಿಗೆ ಅನುಗುಣವಾಗಿ ಆಯಾ ಅಂಗನವಾಡಿ ಕೇಂದ್ರಗಳಲ್ಲಿಯೇ ಆಹಾರ ದಾಸ್ತಾನು ಮಾಡಬೇಕು. ಪ್ರತಿ ತಿಂಗಳು 5ನೇ ತಾರೀಖಿನ ಒಳಗಾಗಿ ಗೌರವ ಧನ ನೀಡಬೇಕು. ಕುಷ್ಟಗಿ ತಾಲ್ಲೂಕಿನ ಸಹಾಯಕಿಯರಿಗೆ 7 ತಿಂಗಳ ಹೆಚ್ಚುವರಿ ಗೌರವಧನ ಬಿಡುಗಡೆ ಮಾಡಬೇಕು ಎಂಬುದು ಸೇರಿದಂತೆ 9 ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ನಂತರ, ಈ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಮೂರ್ತಿ ಅವರಿಗೆ ಸಲ್ಲಿಸಿದರು.
ನಿವೃತ್ತಿ ವೇತನ, ಕನಿಷ್ಠ ಕೂಲಿ ಜಾರಿ, ಹೆಚ್ಚುವರಿ ಗೌರವಧನ, ಸೌದೆ ಹಣ, ಕೇಂದ್ರದ ಬಾಡಿಗೆ, ಹೆಚ್ಚುವರಿ ಕೆಲಸದ ಹಣ ಪಾವತಿ ಮಾಡುವ ಬೇಡಿಕೆಗಳ ಬಗ್ಗೆ ಮೇಲಧಿಕಾರಿಗಳ ಗಮನ ಸೆಳೆಯುವುದಾಗಿ ಜಿಪಂ ಸಿಇಒ ಭರವಸೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವೈ.ಬಿ.ಶಿಂಧೆ ಸಹ ಧರಣಿ ಸ್ಥಳಕ್ಕೆ ಆಗಮಿಸಿದ್ದರು.ಸಂಘದ ಜಿಲ್ಲಾ ಅಧ್ಯಕ್ಷೆ ಶಿವಮ್ಮ ವೈ.ಹುಡೇದ, ಜಿಲ್ಲಾ ಕಾರ್ಯದರ್ಶಿ ಪದ್ಮಾವತಿ ದೇಸಾಯಿ, ಕಲಾವತಿ ಮೆಣೆಧಾಳ, ಜುವೇದಾ ಬೇಗಂ, ಕಾಶಮ್ಮ, ಅಂಜನಾದೇವಿ, ಮಹಾಂತಮ್ಮ, ಗೀತಾ ಅರಮನಿ, ಡಿ.ವೈ.ಎಫ್.ಐ.ನ ಸುಂಕಪ್ಪ ಗದಗ, ಎಸ್.ಎಫ್.ಐ. ಜಿಲ್ಲಾ ಅಧ್ಯಕ್ಷ ಗುರುರಾಜ ದೇಸಾಯಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT