ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಮಹಿಳೆಯರ ಸ್ವಾವಲಂಬಿ ಜೀವನ

ಇತಿಹಾಸ ಪ್ರಸಿದ್ಧ ಊರಿನಲ್ಲಿ ಕಸದಿಂದ ರಸ ತೆಗೆಯುವ ಕಾಯಕದತ್ತ ಚಿತ್ತ
Last Updated 31 ಮೇ 2015, 10:38 IST
ಅಕ್ಷರ ಗಾತ್ರ

ಕೊಪ್ಪಳ: ದಿನ ಬಳಕೆಗೆ ಅಗತ್ಯವಾಗುವ ವಸ್ತುಗಳನ್ನು ಪ್ಲಾಸ್ಟಿಕ್ ಬಳಸಿ ಕಾರ್ಖಾನೆಗಳಲ್ಲಿ ತಯಾರಿಸುವುದು ಸಾಮಾನ್ಯ. ಆದರೆ, ಈ ಮಹಿಳೆಯರು ಕೃಷಿ ಬೆಳೆಯಲ್ಲಿ ದೊರೆಯುವ ಕಚ್ಚಾವಸ್ತುಗಳನ್ನು ಬಳಸಿಕೊಂಡು ದಿನ ಬಳಕೆಯ ಸಾಮಾನುಗಳನ್ನು ತಯಾರಿಸಿ ಸೈ ಎನಿಸಿಕೊಂಡಿದ್ದಾರೆ.

ಗಂಗಾವತಿ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಆನೆಗೊಂದಿ ಗ್ರಾಮದ ಮಹಿಳೆಯರು ಸ್ವಂತ ದುಡಿಮೆಯಿಂದ ಸ್ವಾವಲಂಬಿ ಜೀವನ ಕಂಡುಕೊಂಡಿದ್ದಾರೆ. ಶಮಾ ಪವಾರ್ ಎಂಬುವರು ಕಿಷ್ಕಿಂದ ಟ್ರಸ್ಟ್ ಎಂಬ ಸ್ವಂತ ಸಂಸ್ಥೆ ಕಟ್ಟಿ ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ಒದಗಿಸಿದ್ದಾರೆ.

ಕಸದಿಂದ ರಸ ತೆಗೆಯುವ ಕಾಯಕದಲ್ಲಿ ಈ ಮಹಿಳೆಯರು ಕಮ್ಮಿ ಇಲ್ಲ. 1997ರಲ್ಲಿ ಈ ಸಂಸ್ಥೆ ಸ್ಥಾಪನೆಯಾಯಿತು. 15 ವರ್ಷಗಳಿಂದ ಸುಮಾರು 400 ಜನ ಮಹಿಳೆಯರು ಇಲ್ಲಿ ತರಬೇತಿ ಪಡೆದು ಸ್ವಉದ್ಯೋಗಿಗಳಾಗಿದ್ದಾರೆ. ಸದ್ಯ 25 ಮಹಿಳೆಯರು ಕೆಲಸ ನಿರ್ವ­ಹಿಸುತ್ತಿದ್ದಾರೆ. ಗ್ರಾಮದಲ್ಲಿ ಸುಮಾರು 200 ಕುಟುಂಬಗಳು ಈ ಸಂಸ್ಥೆಗೆ ಸಂಬಂಧಿಸಿದ ಪೂರಕ ಕಾರ್ಯ ಮಾಡುತ್ತಿವೆ.

ಏನೇನು ತಯಾರಿಕೆ?: ಕ್ಯಾಟ್ ಬ್ಯಾಗ್, ವಾಟರ್ ಬ್ಯಾಗ್, ಮೊಬೈಲ್ ಪಾಕೆಟ್, ಮೇಕಪ್ ಕಿಟ್, ಹ್ಯಾಂಡ್ ಬ್ಯಾಂಡ್ ವಸ್ತುಗಳನ್ನು ತಯಾರಿಸಿ ಅವುಗಳಿಗೆ ಆಧುನಿಕ ಸ್ಪರ್ಶ ನೀಡಲಾಗುತ್ತದೆ. ಅಲ್ಲದೆ ಗೃಹ ಬಳಕೆಯ ಮ್ಯಾಟ್, ವಾಲ್ ಡಿಸೈನ್ಸ್, ಟೇಬಲ್ ಮ್ಯಾಟ್, ಪೆನ್ಸಿಲ್ ಬಾಕ್ಸ್, ಬುಟ್ಟಿ,  ಶೋಕೆಸ್ ಗೊಂಬೆಗಳು ಜತೆಗೆ ಮಕ್ಕಳಿಗೆ ಪ್ರಿಯವಾದ ತುಣುಕು ಆಟಿಕೆ ಸಾಮಾನುಗಳನ್ನು ಇಲ್ಲಿ ಬಾಳೆಗಿಡದ ನಾರಿನಿಂದ  ತಯಾರಿಸಲಾಗುತ್ತದೆ.

ತಯಾರಿಕೆ ಹೀಗೆ: ಬಾಳೆಗಿಡದ ಬೊಂಬು(ಹಾಳೆ) ತೆಗೆದುಕೊಂಡು ನೀರಿನಲ್ಲಿ ನೆನೆಸಿ ಸ್ವಲ್ಪ ಸಮಯದ ನಂತರ ಒಂದೊಂದೇ ನಾರು ತೆಗೆದು ನೂಲಿನ ರೂಪಕ್ಕೆ ತಂದು, ನಂತರ ಸೂಜಿಯಿಂದ ಅವಶ್ಯಕತೆಗೆ ತಕ್ಕಂತೆ ವಸ್ತುಗಳ ಗಾತ್ರಕ್ಕೆ ಅನುಗುಣವಾಗಿ ಕೈಗಳಿಂದ ಹೆಣೆಯಲಾಗುತ್ತದೆ.

ಮಾರುಕಟ್ಟೆ: ಈ ವಸ್ತುಗಳಿಗೆ ಬೆಲೆ ಹೆಚ್ಚು. ಆದರೆ, ಬೇಡಿಕೆ ಕಡಿಮೆ. ಇಲ್ಲಿ ತಯಾರಿಸಿದ ವಸ್ತುಗಳು ಜರ್ಮನಿ, ಅಮೆರಿಕ, ಫಿನ್ಲೆಂಡ್‌ ಹಾಗೂ ದೇಶದ ಪುಣೆ, ದೆಹಲಿ, ಮುಂಬೈ, ಗೋವಾ, ಬೆಂಗಳೂರು, ಧಾರವಾಡದಂತಹ ಮಹಾನಗರಗಳ ಮಾರುಕಟ್ಟೆ
ಗಳಲ್ಲಿ ಮಾರಾಟವಾಗುತ್ತವೆ.

ಸಂಸ್ಥೆಯಲ್ಲಿ ಕೆಲಸ ಮಾಡುವ ಮೈಬೂಬಿ ಅವರ ಪ್ರಕಾರ, ಇಲ್ಲಿ ಸುಮಾರು 12 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಮೊದಲಿಗೆ ₨25 ಕೂಲಿ ನೀಡಲಾಗುತ್ತಿತ್ತು. ಈಗ ₨100 ನೀಡುತ್ತಿದ್ದಾರೆ. ಮನೆಯ ಕೆಲಸದ ಜತೆಗೆ ಇದನ್ನು ಮಾಡಿಕೊಂಡು ಹೋಗುತ್ತೇನೆ. ಈ ಕೆಲಸ ಕುಟುಂಬ ನಿರ್ವಹಣೆಗೆ ತುಂಬಾ ಸಹಾಯವಾಗಿದೆ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT