ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಲಕ್ಷ್ಯಕ್ಕೀಡಾದ ‘ಭೀಮಜ್ಜ’ರ ತಪೋಭೂಮಿ

Last Updated 17 ಸೆಪ್ಟೆಂಬರ್ 2013, 6:56 IST
ಅಕ್ಷರ ಗಾತ್ರ

ಕುಷ್ಟಗಿ: ಹೈದರಾಬಾದ್‌ ಪ್ರಾಂತ್ಯದ ವಿಮೋಚನೆಗಾಗಿ ನಡೆದ ಚಳವಳಿಯಲ್ಲಿ ಮುರುಡಿ ಭೀಮಜ್ಜ ಅವರ ಹೆಸರು ಅತ್ಯಂತ ಪ್ರಮುಖವಾದುದು. ಸ್ವಾತಂತ್ರ್ಯ ಸೇನಾನಿ ಅಷ್ಟೇ ಅಲ್ಲ ಚಳವಳಿಯಲ್ಲಿ ಪಾಲ್ಗೊಂಡಿದ್ದ  ಸೇನಾನಿಗಳಿಗೆ ರಾಜಕೀಯ ಮಾರ್ಗದರ್ಶಕ ಮತ್ತು ಆಧಾ್ಯತಿ್ಮಕ ಗುರು ಆಗಿ ಸಮಾಜ ಸೇವೆಗಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟ ತಪಸ್ವಿ ಅವರಾಗಿದ್ದರು.

ಭೀಮಜ್ಜ ಕೇವಲ  ಅಧ್ಯಾತ್ಮವನ್ನು ಬೋಧಿಸುವ ಸಂತನಾಗಿರದೇ ಚಳ ವಳಿಯ ಶಕ್ತಿಯಾಗಿದ್ದರು. ಮಹಾತ್ಮ ಗಾಂಧೀಜಿ ತತ್ವ ಆದರ್ಶಗಳನ್ನೇ ಉಸಿರಾಗಿಸಿಕೊಂಡು ಗಾಂಧೀಜಿ ಅವರ ಸತ್ಯಾಗ್ರಹ ಮಾದರಿಯಲ್ಲಿ ಸ್ವಾತಂತ್ರ್ಯ ಚಳವಳಿಗೆ ಪ್ರಮುಖ ಪ್ರೇರಣಾ ಶಕಿ್ತಯಾಗಿದ್ದರು.

1915ರಲ್ಲಿ ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ ಅವರ ಮನಸ್ಸು ಮಾತ್ರ ಸಮಾಜ ಸೇವೆಯತ್ತ ತುಡಿಯುತ್ತಿತ್ತು. ದೇಶದಲ್ಲಿ ಬ್ರಿಟಿಷರ ವಿರುದ್ಧ ಚಲೇಜಾವ್‌ ಚಳವಳಿ ನಡೆಯುತ್ತಿದ್ದ ಸಂದರ್ಭದಲ್ಲೇ ಹೈದರಾಬಾದ್‌ನಲ್ಲಿ ರಮಾನಂದ ತೀರ್ಥರ ಸಮೀಪವರ್ತಿ ಯಾಗಿ ಅವರ ಮಾರ್ಗದರ್ಶನದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮಿಕಿದ್ದರು. ಕಪ್ಪತಗುಡ್ಡದಲ್ಲಿ ತಪಸ್ಸು ಮಾಡಿ, ನಂತರ ಸನ್ಯಾಸ ಸ್ವೀಕರಿಸಿದ ಅವರು ಮುರುಡಿ ಗ್ರಾಮದಲ್ಲೇ  ಆಶ್ರಮ ಸ್ಥಾಪಿಸಿದರು.

ಹೈದರಾಬಾದ್‌ ವಿಮೋಚನೆಗಾಗಿ ನಡೆದ ಹೋರಾಟ ತೀವ್ರತೆ ಪಡೆದದ್ದೇ 1947ರ ನಂತರ. ಕುಷ್ಟಗಿ ಮತ್ತು ಯಲಬುರ್ಗಾ ತಾಲ್ಲೂಕುಗಳನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡಿದ್ದ ಮುರುಡಿ ಭೀಮಜ್ಜ ಅವರು ಸ್ವಾಂತ್ರ್ಯ ಸೇನಾನಿಗಳಿಗೆ ಆಧಾ್ಯತ್ಮಿಕ ಚೇತನ ವಾಗಿದ್ದರು ಎಂಬುದನ್ನು ವಿಮೋಚನಾ ದಿನಾಚರಣೆ ಸಂದರ್ಭದಲ್ಲಿ ಅವರ ಸೇನಾನಿ ಶಿಷ್ಯರು ನನೆಪಿಸಿಕೊಳ್ಳುತ್ತಾರೆ.

ರಾಷ್ಟ್ರಭಕ್ತಿ ಮೆರೆದ ಸ್ವಾತಂತ್ರ್ಯ ಸೇನಾನಿ ಸಂತ ಭೀಮಜ್ಜನವರನ್ನು ಸರ್ಕಾರ ಅಥವಾ ಸಮಾಜ ನೆನಪಿಸಿ ಕೊಂಡಿದ್ದು ಕಡಿಮೆ. ಸಹಸ್ರಾರು ಸ್ವಾತಂತ್ರ್ಯ ಸೇನಾನಿಗಳಿಗೆ ಪ್ರೇರಣಾ ತಾಣವಾಗಿ  ಭವಿಷ್ಯದ ಪೀಳಿಗೆಗೆ ಇತಿಹಾಸವನ್ನು ತಿಳಿಸಿಕೊಡುವುದಕ್ಕೆ ಉತ್ತಮ ಸ್ಮಾರಕವಾಗುವ ಎಲ್ಲ ಅರ್ಹತೆ ಹೊಂದಿರುವ ಮುರುಡಿಯ ಭೀಮಜ್ಜ ನವರ ಆನಂದ ಆಶ್ರಮದ ಸ್ಥಳ ದಿಕ್ಕಿಲ್ಲದಂತಾಗಿದೆ.

ಅಳಿಲು ಸೇವೆ: ಭೀಮಜ್ಜ ಅವರ ಸ್ಮರಣೆಗಾಗಿ ಪುರಸಭೆ ಮಾಜಿ ಸದಸ್ಯ ವೀರೇಶ ಬಂಗಾರಶೆಟ್ಟರ ಅವರು ರೂ. 50 ಸಾವಿರ ವೆಚ್ಚದಲ್ಲಿ ಭೀಮಜ್ಜನವರ ಸಮಾಧಿ ಸ್ಥಳವನ್ನು ಅಭಿವೃದ್ಧಿ ಪಡಿಸುವ ಅಳಿಲು ಸೇವೆಗೆ ಮುಂದಾಗಿದ್ದಾರೆ. ಕಲ್ಲಿನ ಫಲಕದಲ್ಲಿ  ಭೀಮಜ್ಜನವರ ರೇಖಾಚಿತ್ರ ಮತ್ತು ಅವರ ಉಕ್ತಿಯನ್ನು ಕೆತ್ತಿಸಿದ್ದು, ವಿಮೋಚನಾ ದಿನಾಚರಣೆಯ ದಿನ (ಸೆ.17) ಅನಾವರಣಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT