ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ನಿಯಂತ್ರಣ: ವಿಜಯಪುರ ಮಾದರಿ

ಜಿಲ್ಲಾಡಳಿತದ ಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜೆ. ರವಿಶಂಕರ್‌ ಪ್ರಶಂಸೆ
Last Updated 4 ಏಪ್ರಿಲ್ 2020, 11:29 IST
ಅಕ್ಷರ ಗಾತ್ರ

ವಿಜಯಪುರ: ಕೊರೊನಾ ಬಾಧಿತ ರಾಜ್ಯ ಮತ್ತು ಜಿಲ್ಲೆಗಳಿಂದ ಜಿಲ್ಲೆಗೆ ಮರಳಿರುವ 36 ಸಾವಿರ ಜನರ ಮಾಹಿತಿ ಸಂಗ್ರಹಿಸಿ, ತೀವ್ರ ನಿಗಾ ವಹಿಸಿರುವ ಜಿಲ್ಲಾಡಳಿತದ ಕ್ರಮವು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜೆ. ರವಿಶಂಕರ ಪ್ರಶಂಶೆ ವ್ಯಕ್ತಪಡಿಸಿದರು.

ಕೋವಿಡ್-19 ನಿಯಂತ್ರಣಕ್ಕೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಕುರಿತು ಶನಿವಾರ ನಡೆದ ಪರಿಶೀಲನಾ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕೊರೊನಾ ಸೋಂಕು ಹರಡದಂತೆ ತಡೆಯಲು ದೇಶದಾದ್ಯಂತ ಲಾಕ್‌ಡೌನ್‌ ಆದ ಬಳಿಕ ಜಿಲ್ಲೆಗೆ ವಿವಿಧೆಡೆಯಿಂದ ಬಂದಿರುವ 36 ಸಾವಿರ ಜನರನ್ನು ಗುರುತಿಸಿರುವ ರಾಜ್ಯದ ಏಕೈಕ ಜಿಲ್ಲೆ ವಿಜಯಪುರವಾಗಿದೆ. ಈ ಕಾರ್ಯ ಕೇವಲ ರಾಜ್ಯಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಮಾದರಿಯಾಗುವಂತಿದೆ. ಈ ಕುರಿತು ಡಾಕ್ಯುಮೆಂಟರಿ ಮಾಡುವಂತೆ ಜಿಲ್ಲಾಧಿಕಾರಿಗೆ ತಿಳಿಸಿದರು.

ಜಿಲ್ಲೆಯ ಗಡಿಭಾಗಗಳಲ್ಲಿ ಕಟ್ಟೆಚ್ಚರ ವಹಿಸುವ ಮೂಲಕ ಕೊರೊನಾ ಬಾಧಿತ ಜಿಲ್ಲೆ ಮತ್ತು ರಾಜ್ಯಗಳ ಪ್ರಯಾಣಿಕರ ಮೇಲೆ ತೀವ್ರ ನಿಗಾ ವಹಿಸಿರುವುದು ಹಾಗೂ ದೆಹಲಿ ನಿಜಾಮುದ್ದೀನ್‌ ತಬ್ಲೀಗ್‌ ಸಾಮೂಹಿಕ ಪ್ರಾರ್ಥನೆಯಿಂದ ಮರಳಿರುವವರನ್ನು ಜಿಲ್ಲಾಡಳಿತವೇ ನೇರವಾಗಿ ಗುರುತಿಸಿರುವುದು ಸೇರಿದಂತೆ ನಿರಂತರ ಕಣ್ಗಾವಲು ಮೂಲಕ ಕೊರೊನಾ ಸೋಂಕು ಜಿಲ್ಲೆ ಪ್ರವೇಶಿಸದಂತೆ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳು ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.

ಜಿಲ್ಲೆಯಾದ್ಯಂತ ಲಾಕ್‍ಡೌನ್ ಮತ್ತು ನಿಷೇಧಾಜ್ಞೆ ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಗುರುತಿನ ಚೀಟಿ ವಿತರಣಾ ಪ್ರಕ್ರಿಯೆ ಮತ್ತು ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಬೇಕು ಎಂದು ಅವರು ಸೂಚಿಸಿದರು.

ಕೋವಿಡ್-19 ತಡೆಯುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಜಿಲ್ಲೆಯ ಆರೋಗ್ಯ, ಪೊಲೀಸ್, ಕರ್ತವ್ಯದಲ್ಲಿರುವ ಇತರೆ ಸಿಬ್ಬಂದಿ ಮತ್ತು ಮಾಧ್ಯಮದವರು ಅವಶ್ಯಕ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವಂತೆ ಅವರು ಮನವಿ ಮಾಡಿದರು.

ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯ ನಿರ್ವಾಹಣಾಧಿಕಾರಿ ಗೋವಿಂದರೆಡ್ಡಿ, ಗ್ರಾಮಾಂತರ ಪ್ರದೇಶದಲ್ಲಿ ಗುರುತಿಸಲಾದ ಹೋಂ ಕ್ವಾರಂಟೈನ್ ಜನರ ಮೇಲೆ ತೀವ್ರ ನಿಗಾ ಇಡಲು ಮತ್ತು ನೆರವಾಗಲು ಆಯಾ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಪಿಡಿಒ, ಗ್ರಾಮ ಲೆಕ್ಕಾಧಿಕಾರಿ, ಬೀಟ್ ಪೊಲೀಸ್ ಅವರನ್ನು ನಿಯೋಜಿಸಲಾಗಿದೆ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹೇಂದ್ರ ಕಾಪ್ಸೆ, ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಡಾ.ಮುಕುಂದ ಗಲಗಲಿ, ಜಿಲ್ಲಾಸ್ಪತ್ರೆ ಡಾ.ಸರ್ಜನ್ ಶರಣಪ್ಪ ಕಟ್ಟಿ, ಆಹಾರ ಇಲಾಖೆ ಜಂಟಿ ನಿರ್ದೇಶಕಿ ಸುರೇಖಾ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ಮಲ್ಲನಗೌಡ ಬಿರಾದಾರ, ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಪ್ರಾಣೇಶ ಜಾಹಗೀರದಾರ ಇದ್ದರು.

ಐಸೋಲೇಷನ್‌ನಲ್ಲಿ ಇಬ್ಬರು

ವಿಜಯಪುರ: ಕೋವಿಡ್‌–19ನಿಂದ ಮೃತಪಟ್ಟಿರುವ ಬಾಗಲಕೋಟೆಯ ವೃದ್ಧನ ಪುತ್ರನೊಂದಿಗೆ ಬೆಂಗಳೂರಿನಿಂದ ಇಳಕಲ್‌ ವರೆಗೆ ಕಾರಿನಲ್ಲಿ ಬಂದಿದ್ದ ಮುದ್ದೇಬಿಹಾಳದ ಇಬ್ಬರನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಐಸೋಲೇಷನ್‌ನಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ತಿಳಿಸಿದರು.

ಅಲ್ಲದೇ, ಈ ಇಬ್ಬರ ಜೊತೆ ಸಂಪರ್ಕಕ್ಕೆ ಬಂದಿದ್ದ ಮುದ್ದೇಬಿಹಾಳದ ಆರು ಜನರನ್ನು ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ ಎಂದು ಹೇಳಿದರು.

48 ವರದಿ ನೆಗೆಟಿವ್:

ಜಿಲ್ಲೆಯಿಂದ ಈ ವರೆಗೆ ಕಳುಹಿಸಲಾದ 50 ಜನರ ಗಂಟಲು ದ್ರವ ಮಾದರಿ ವೈದ್ಯಕೀಯ ಪರೀಕ್ಷೆಗಳಲ್ಲಿ 48 ಜನರ ಮಾದರಿ ನೆಗೆಟಿವ್ ಬಂದಿದ್ದು, ಇನ್ನೂ ಇಬ್ಬರ ವೈದ್ಯಕೀಯ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಚಿಕಿತ್ಸೆಗೆ ಸನ್ನದ್ಧ: ವೈ.ಎಸ್‌.ಪಾಟೀಲ

ವಿಜಯಪುರ: ಜಿಲ್ಲೆಯಲ್ಲಿ ಕೋವಿಡ್-19 ರೋಗಿಗಳ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯ 40 ವೆಂಟಿಲೇಟರ್, ಸರ್ಕಾರಿ ಆಸ್ಪತ್ರೆಯ 7 ವೆಂಟಿಲೇಟರ್ ಸಿದ್ಧವಾಗಿಟ್ಟುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಹೇಳಿದರು.

ಜಿಲ್ಲಾಸ್ಪತ್ರೆ ಕೋವಿಡ್-19 ಆಸ್ಪತ್ರೆಯಾಗಿ ಪರಿವರ್ತಿಸಲು ಸೂಚಿಸಿದ್ದು, ಜಿಲ್ಲಾ ತರಬೇತಿ ಕೇಂದ್ರವನ್ನು ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ ಎಂದರು.

ಪಿ.ಪಿ.ಇ ಗುಣಮಟ್ಟದ ಕಿಟ್‍ಗಳನ್ನು ಗದಗದಿಂದ ಪಡೆಯಲು ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ್ದಾರೆ. ಅದರಂತೆ 13 ಫೀವರ್ ಆಸ್ಪತ್ರೆ ಸಿದ್ಧಪಡಿಸಲಾಗಿದೆ. ಇಂಡಿ, ಬಾಗೇವಾಡಿಗಳಲ್ಲಿ ಕೋವಿಡ್-19 ಆಸ್ಪತ್ರೆ ಸ್ಥಾಪಿಸಲಾಗಿದೆ. ಜಿಲ್ಲಾ ಕಂಟಿಂಜನ್ಸಿ ಪ್ಲಾನ್ ಮಾಡಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT