ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಆರ್‌ಟಿಸಿಯಲ್ಲೂ ಇವೆ ‘ಡಕೋಟ ಎಕ್ಸ್‌ಪ್ರೆಸ್‌’

ಗ್ರಾಮೀಣ ಭಾಗಗಳಿಗೆ ಬಹುತೇಕ ಹಳೆಯ ವಾಹನಗಳ ಬಳಕೆ: ಪ್ರಯಾಣಿಕರಿಗೆ ಕಿರಿಕಿರಿ
Last Updated 18 ಜನವರಿ 2019, 12:34 IST
ಅಕ್ಷರ ಗಾತ್ರ

ರಾಮನಗರ: ನೆರೆಯ ಮಂಡ್ಯ ಜಿಲ್ಲೆಯಲ್ಲಿ ಬಸ್ ದುರಂತ ನಡೆದು ತಿಂಗಳುಗಳು ಕಳೆದಿದ್ದರೂ ಇಲ್ಲಿನ ಕೆಎಸ್ಆರ್‌ಟಿಸಿ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಗ್ರಾಮೀಣ ಭಾಗಗಳಲ್ಲಿ ಈಗಲೂ ‘ಡಕೋಟಾ ಬಸ್‌’ಗಳೇ ಓಡುತ್ತಿದ್ದು, ಜನರು ಭಯದಲ್ಲಿಯೇ ಪ್ರಯಾಣಿಸುವಂತಾಗಿದೆ.

ಗುರುವಾರವಷ್ಟೇ ರಾಮನಗರ ತಾಲ್ಲೂಕಿನ ಪಾಲಬೋವಿದೊಡ್ಡಿ ಗ್ರಾಮದ ಬಳಿ ದುರಂತವೊಂದು ಅಲ್ಪದರಲ್ಲಿ ತಪ್ಪಿದೆ. ಇದೇ ದಿನ ರಾಯರದೊಡ್ಡಿ ವೃತ್ತದ ಬಳಿ ಮತ್ತೊಂದು ಬಸ್‌ ಕೆಟ್ಟು ನಿಂತಿದೆ. ಸುಗ್ಗನಹಳ್ಳಿ ಮಾರ್ಗದಲ್ಲಿ ಪ್ರಯಾಣ ಕೈಗೊಂಡಿದ್ದ ಬಸ್ ಸಂಪೂರ್ಣ ಕೆಟ್ಟಿದ್ದು, ಅದನ್ನು ಕ್ರೇನ್ ವಾಹನ ಬಳಸಿ ಎಳೆತರಲಾಗಿದೆ. ಒಂದೇ ದಿನ ಅಲ್ಪ ಅಂತರದಲ್ಲಿಯೇ ಹೀಗೆ ಸಾಲು ಸಾಲಾಗಿ ವಾಹನಗಳು ಕೈಕೊಟ್ಟಿರುವುದು ಕೆಎಸ್‌ಆರ್‌ಟಿಸಿ ಬಸ್‌ಗಳ ಶೋಚನೀಯ ಸ್ಥಿತಿಗೆ ಹಿಡಿದ ಕನ್ನಡಿಯಂತಿದೆ.

ರಾಮನಗರ ವಿಭಾಗದ ವ್ಯಾಪ್ತಿಯಲ್ಲಿ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ, ಆನೇಕಲ್ ಒಳಗೊಂಡಂತೆ ಆರು ಬಸ್‌ ಘಟಕಗಳಿವೆ. ನಿತ್ಯ ನೂರಾರು ಮಾರ್ಗಗಳಲ್ಲಿ ಈ ಬಸ್‌ಗಳು ಓಡಾಡುತ್ತಿವೆ. ಇಲ್ಲಿ ಘಟಕ ಆರಂಭಗೊಂಡ ಸಂದರ್ಭ ನೀಡಲಾದ ಬಸ್‌ಗಳೇ ಇನ್ನೂ ಸಾಕಷ್ಟು ಸಂಖ್ಯೆಯಲ್ಲಿ ಸಂಚಾರ ಕೈಗೊಂಡಿವೆ. ಹಳೆಯ ಬಸ್‌ಗಳನ್ನು ಗುರುತಿಸಿ ಅವುಗಳಿಗೆ ಮುಕ್ತಿ ಕಾಣಿಸುವ ಕಾರ್ಯ ಸರಾಗವಾಗಿ ನಡೆದಿಲ್ಲ. ಹೀಗಾಗಿ ನಿತ್ಯದ ಸಂಚಾರ ದುಸ್ತರವಾಗಿದೆ.

ಕೆಎಸ್‌ಆರ್‌ಟಿಸಿಯಲ್ಲಿ ಸಾಮಾನ್ಯವಾಗಿ 8 ಲಕ್ಷ ಕಿಲೋಮೀಟರ್ ಕ್ರಮಿಸಿದ ಬಸ್‌ಗಳನ್ನು ಸೇವೆಯಿಂದ ಹಿಂಪಡೆದು ಸ್ಕ್ರಾಪ್‌ಗೆ ಕಳುಹಿಸಲಾಗುತ್ತದೆ. ಆದರೆ ರಾಮನಗರ ಘಟಕದಲ್ಲಿ ಇನ್ನೂ 9–10 ಲಕ್ಷ ಕಿ.ಮೀ. ಓಡಿದ ಹತ್ತಾರು ವಾಹನಗಳು ಸೇವೆಯಲ್ಲಿವೆ. ಹೊಸ ಬಸ್‌ಗಳು ಬಂದ ಮೇಲಷ್ಟೇ ಇವುಗಳ ಬಳಕೆಯನ್ನು ನಿಲ್ಲಿಸಲಾಗುತ್ತದೆ. ಸಾರಿಗೆ ನಿಗಮವು ಅಗತ್ಯಕ್ಕೆ ತಕ್ಕಂತೆ ಹೊಸ ವಾಹನಗಳನ್ನು ನೀಡದೇ ಇರುವ ಕಾರಣ ಇವುಗಳ ಸೇವೆಯು ಮುಂದುವರಿದಿದ್ದು, ಪ್ರಯಾಣಿಕರ ಸುರಕ್ಷತೆಯ ವಿಷಯದಲ್ಲಿ ಸಾರಿಗೆ ಸಂಸ್ಥೆಯು ರಾಜಿ ಮಾಡಿಕೊಂಡಿದೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ಚಾಲಕರಿಗೆ ಕಿರಿಕಿರಿ: ಎಷ್ಟೋ ಸಂದರ್ಭಗಳಲ್ಲಿ ಸುಸ್ಥಿತಿಯಲ್ಲಿ ಇಲ್ಲದ ವಾಹನಗಳನ್ನು ಸೇವೆಗೆ ಬಳಸಿಕೊಳ್ಳಲಾಗುತ್ತಿದೆ. ಈ ವಿಚಾರವನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಅದೇ ವಾಹನಗಳನ್ನು ಓಡಿಸುವಂತೆ ಸೂಚಿಸುತ್ತಾರೆ ಎಂದು ಚಾಲಕರು ಹಾಗೂ ನಿರ್ವಾಹಕರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಅದರಲ್ಲಿಯೂ ಗ್ರಾಮೀಣ ಭಾಗಗಳಿಗೆ ಹೆಚ್ಚಾಗಿ ಹಳೆಯ ಬಸ್‌ಗಳನ್ನು ಬಳಸಲಾಗುತ್ತಿದೆ. ಬಸ್ ಹಳೆಯದಾಗುತ್ತಲೇ ಅದನ್ನು ಹಳ್ಳಿಗಾಡಿನ ಪ್ರದೇಶಗಳ ಸಾರಿಗೆಗೆ ನೀಡಲಾಗುತ್ತದೆ. ಮೊದಲೇ ಹದಗೆಟ್ಟ ರಸ್ತೆಗಳಿದ್ದು, ಅವುಗಳ ನಡುವೆ ಬಸ್ ಓಡಿಸುವುದು ಸವಾಲಿನ ಕೆಲಸವಾಗಿದೆ. ಅಲ್ಲಲ್ಲಿ ವಾಹನ ಕೆಟ್ಟು ನಿಲ್ಲುವುದು ಸಾಮಾನ್ಯವಾಗಿದೆ. ಈ ಸಂದರ್ಭಗಳಲ್ಲಿ ಪ್ರಯಾಣಿಕರಿಂದ ಮಾತು ಕೇಳಬೇಕಿದೆ. ನಾವು ಅಲ್ಲಿಯೇ ಉಳಿದು ರಿಪೇರಿ ಆಗುವ ತನಕ ಕಾಯಬೇಕಾಗುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

15 ವರ್ಷ ಮೀರಿದ ಯಾವುದೇ ಬಸ್ ಅನ್ನು ಸೇವೆಯಲ್ಲಿ ಉಳಿಸಿಕೊಳ್ಳುವಂತೆ ಇಲ್ಲ ಎಂದು ಪ್ರಾದೇಶಿಕ ಸಾರಿಗೆ ಇಲಾಖೆಯು ನಿರ್ಬಂಧ ಹೇರಿದೆ. ಆದರೆ ಗ್ರಾಮೀಣ ಭಾಗಗಳಲ್ಲಿ, ಕಚ್ಚಾ ರಸ್ತೆಗಳಲ್ಲಿ ಪ್ರಯಾಣಿಸುವ ಬಸ್‌ಗಳಿಗೆ 10–12 ವರ್ಷಕ್ಕೆಲ್ಲ ‘ಮುಪ್ಪು’ ಬರುತ್ತಿದೆ. ನಿಯಮದಂತೆ ಅದರ ಆಯಸ್ಸು ಮುಗಿದ ಮೇಲೆಯೇ ಅಧಿಕಾರಿಗಳು ಬದಲಾವಣೆಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಇದರಿಂದಾಗಿ ಹಳೆಯ ಬಸ್‌ಗಳ ಓಡಾಟ ತಪ್ಪುತ್ತಿಲ್ಲ.

ಒಂದೂ ಇಲ್ಲ ಅಂತಾರೆ ಅಧಿಕಾರಿಗಳು ‘ತಾಂತ್ರಿಕ ಕಾರಣಗಳಿಂದಾಗಿ ಕೆಲವು ವಾಹನಗಳು ಮಾರ್ಗ ಮಧ್ಯೆಯೇ ಕೆಟ್ಟು ನಿಲ್ಲುತ್ತಿವೆ. ಆದರೆ 15 ವರ್ಷ ಅವಧಿ ಮೀರಿದ ಯಾವೊಂದು ಬಸ್‌ ಸೇವೆಯಲ್ಲಿ ಇಲ್ಲ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಮಹೇಶ್‌ ಹೇಳುತ್ತಾರೆ.

‘ಕೆಲವೊಂದು ಬಸ್‌ಗಳನ್ನು 8–9 ಲಕ್ಷ ಕಿ.ಮೀ. ವರೆಗೆ ಓಡಿಸಲಾಗುತ್ತದೆ. ಅದನಂತರ ಇಲ್ಲಿಯೇ ಅವುಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಈ ವರ್ಷ ಹೊಸ ಬಸ್‌ಗಳು ಬರುತ್ತಲೇ ಅತ್ಯಂತ ಹಳೆಯ ವಾಹನಗಳನ್ನು ಗುಜರಿಗೆ ಹಾಕಲಾಗುವುದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT