ಶನಿವಾರ, ಜನವರಿ 18, 2020
20 °C
ಕುಪ್ಪಳಿಯಲ್ಲಿ ವಿಶ್ವಮಾನವ ದಿನಾಚರಣೆ

29 ರಂದು ಕುವೆಂಪು ರಾಷ್ಟ್ರೀಯ ಪುರಸ್ಕಾರ ಸಮಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೀರ್ಥಹಳ್ಳಿ: ಕುವೆಂಪು ಅವರ 115ನೇ ಜನ್ಮ ದಿನೋತ್ಸವ, ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರಧಾನ ಸಮಾರಂಭ ಹಾಗೂ ಕುವೆಂಪು ಸಾಹಿತ್ಯ ಅಧ್ಯಯನ ಶಿಬಿರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ವಿಶ್ವಮಾನವ ದಿನಾಚರಣೆ ಡಿ.29ರಂದು ಕುಪ್ಪಳಿಯಲ್ಲಿ ನಡೆಯಲಿದೆ ಎಂದು ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ತಿಳಿಸಿದ್ದಾರೆ.

ಅಂದು ಕುಪ್ಪಳಿಯ ಕವಿಶೈಲದಲ್ಲಿ ಬೆಳಿಗ್ಗೆ 9ಕ್ಕೆ ಕವಿನಮನ, 10.15ಕ್ಕೆ ಹೇಮಾಂಗಣದಲ್ಲಿ ನಡೆಯುವ ಕಾರ್ಯಕ್ರಮದ ಉದ್ಘಾಟನೆ, ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ ಸಮಾರಂಭವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೆರವೇರಿಸುವರು. ಪಂಜಾಬಿ ಸಾಹಿತಿಗಳಾದ ಡಾ. ಅಜೀತ್ ಕೌರ್, ಗುರುಬಚನ್ ಸಿಂಗ್ ಭುಲ್ಲರ್ ಅವರಿಗೆ ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

'ಗಾಂಧಿ-150' ಕುವೆಂಪು ಮತ್ತಿತರ ಕವಿಗಳ ಆಯ್ದ ಬರಹಗಳ ಪುಸ್ತಕ ಬಿಡುಗಡೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ನೆರವೇರಿಸುವರು. ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ 2020ರ ಕ್ಯಾಲೆಂಡರ್ ಬಿಡುಗಡೆ ಮಾಡಲಿರುವರು. ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ನಾಡೋಜ ಪ್ರೊ.ಹಂ.ಪ. ನಾಗರಾಜಯ್ಯ ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದ್ದಾರೆ.

ಮುಖ್ಯ ಅತಿಥಿಗಳಾಗಿ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ, ಮಾಜಿ ಸಂಸದ ಸಿ.ನಾರಾಯಣಸ್ವಾಮಿ ಪಾಲ್ಗೊಳ್ಳುವರು. ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಸಾಹಿತ್ಯ ಶಿಬಿರವನ್ನು ಸಾಹಿತಿ ಪ್ರೊ.ಓ.ಎಲ್.ನಾಗಭೂಷಣ ಸ್ವಾಮಿ ಉದ್ಘಾಟಿಸುವರು. ಸಂಜೆ 6ಕ್ಕೆ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಜನ ನಾಟ್ಯ ಕಲಾ ಅಕಾಡೆಮಿ ಕೋಲಾರ ತಂಡದಿಂದ 'ಶ್ರೀರಾಮಾಯಣ ದರ್ಶನಂ' ನೃತ್ಯ ರೂಪಕ, ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆಯವರಿಂದ ಕುವೆಂಪು ಅವರ 'ಬೆರಳ್ ಗೆ ಕೊರಳ್' ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದ್ದಾರೆ.
 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು