ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮಿಶ್ರ ಸರ್ಕಾರ ನೀಡಿದ್ದ ಅನುದಾನ ಸ್ಥಗಿತ:ಕೆರೆ ಅಭಿವೃದ್ಧಿಗೆ ಆರಂಭದಲ್ಲೇ ಗ್ರಹಣ

ಶೌಚ ನೀರಿನ ತೊಟ್ಟಿಯಂತಾಗಿರುವ ಚಿಕ್ಕಬಾಣಾವರ ಕೆರೆ: ಮಂಜೂರಾದ ಅನುದಾನಕ್ಕೆ ಹೊಸ ಸರ್ಕಾರ ಕೊಕ್ಕೆ
Last Updated 9 ಅಕ್ಟೋಬರ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಶೌಚ ನೀರಿನ ತೊಟ್ಟಿ ಯಾಗಿರುವ ಚಿಕ್ಕಬಾಣಾವರ ಕೆರೆ ಇನ್ನೇನು ಅಭಿವೃದ್ಧಿಯಾಗಲಿದೆ ಎಂದು ಸಂಭ್ರಮಿಸಿದ್ದವರಿಗೆ ನಿರಾಸೆ ಉಂಟಾಗಿದೆ.

ಈ ಕೆರೆಯ ಅಭಿವೃದ್ಧಿಗೆ ಜೆ.ಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ₹ 30 ಕೋಟಿ ಅನುದಾನ ಮಂಜೂರು ಮಾಡಿದಾಗ ಈ ಕೆರೆ ಚೊಕ್ಕವಾಗುವ ಭರವಸೆ ಮೂಡಿತ್ತು. ಆದರೆ, ಈಗಿನ ಸರ್ಕಾರವು ಈ ಕೆರೆ ಅಭಿವೃದ್ಧಿಗೆ ಸಮ್ಮಿಶ್ರ ಸರ್ಕಾರ ನೀಡಿದ್ದ ಆಡಳಿತಾತ್ಮಕ ಅನುಮೋದನೆ ಯನ್ನು ತಡೆ ಹಿಡಿದಿದೆ. ಹಾಗಾಗಿ ಈ ಯೋಜನೆಗೆ ಆರಂಭದಲ್ಲೇ ಗ್ರಹಣ ಹಿಡಿದಂತಾಗಿದೆ.

ಬೆಂಗಳೂರು ನಗರ ಉತ್ತರ ತಾಲ್ಲೂಕಿನ ಚಿಕ್ಕಬಾಣಾವರ ಕೆರೆ 110 ಎಕರೆಯಷ್ಟು ವಿಸ್ತಾರವಾದುದು. ಇದರ ನೀರನ್ನು ಜನರು ಕುಡಿಯುವುದಕ್ಕೂ ಬಳಸುತ್ತಿದ್ದ ಕಾಲವೂ ಇತ್ತು. ಈ ಕೆರೆಗೆ ಬ್ರಿಟನ್, ಬೆಲ್ಜಿಯಂ, ಫ್ರಾನ್ಸ್‌ನಿಂದಲೂ ಪಕ್ಷಿಗಳೂ ಪ್ರತಿವರ್ಷವೂ ವಲಸೆ ಬರುತ್ತಿದ್ದವು ಎಂದು ಸ್ಮರಿಸುತ್ತಾರೆ ಸ್ಥಳೀಯರು.

ತಗ್ಗು ಪ್ರದೇಶದಲ್ಲಿರುವ ಈ ಕೆರೆಯ ಒಡಲಿಗೆ, ಸುತ್ತಮುತ್ತಲ ಚಿಕ್ಕಸಂದ್ರ, ಮಲ್ಲಸಂದ್ರ, ಕಮ್ಮಗೊಂಡನಹಳ್ಳಿ,
ಶೆಟ್ಟಿಹಳ್ಳಿ ಗ್ರಾಮಗಳ ಒಳಚರಂಡಿ ನೀರು ಸೇರುತ್ತಿದೆ.

ಗ್ರಾಮಗಳಲ್ಲಿ ತಲೆ ಎತ್ತಿರುವ ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ಶೌಚಾಲಯಗಳ ನೀರು ಕೂಡ ಇದೇ ಕೆರೆಯನ್ನು ತುಂಬಿಕೊಳ್ಳುತ್ತಿದೆ. ಇದೀಗ ಈ ಕೆರೆ ಅಕ್ಷರಶಃ ಮಲದ ಗುಂಡಿಯಾಗಿದೆ.

‘ಸಂಸ್ಕರಣೆಗೊಳ್ಳದ ಶೌಚ ನೀರು ಸೇರಿ ಕೆರೆ ಸಂಪೂರ್ಣ ಕಲುಷಿತ ಗೊಂಡಿದೆ. ಕಟ್ಟಡದ ಅವಶೇಷ, ಕೋಳಿ ಮತ್ತು ಮಾಂಸದಂಗಡಿಯ ತ್ಯಾಜ್ಯವನ್ನೂ ಈ ಜಲಾಶಯಕ್ಕೆ ಬಿಸಾ ಡುತ್ತಾರೆ. ಇದರಿಂದಾಗಿ ಕೆರೆಯ ಅಕ್ಕ ಪಕ್ಕ ಮಾತ್ರವಲ್ಲ, ಊರಿಗೆ ಊರೇ ದುರ್ನಾತ ಬೀರುತ್ತಿದೆ’ ಎಂದು ಗ್ರಾಮದ ಲಿಂಗರಾಜು ಆಕ್ರೋಶ ವ್ಯಕ್ತಪಡಿಸಿದರು.

‘ಚಿಕ್ಕಬಾಣಾವರ ಮತ್ತು ಸುತ್ತ ಮುತ್ತಲ ನಿವಾಸಿಗಳ ಆರೋಗ್ಯದ ಮೇಲೂ ಇದರಿಂದ ದುಷ್ಪರಿಣಾಮ ಉಂಟಾಗುತ್ತಿದೆ. ಅಂತರ್ಜಲದ ನೀರು ಕೂಡ ಗಡುಸಾಗಿದೆ’ ಎಂದು ಸುರೇಶ್‌ ಹೇಳಿದರು.

ಕಾಯಕಲ್ಪಕ್ಕೆ ಯೋಜನೆ: ಈ ಕೆರೆಯ ಕಾಯಕಲ್ಪಕ್ಕೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಯೋಜನೆಯೊಂದನ್ನು ರೂಪಿಸಿತ್ತು. ಕೆರೆಯ ನೀರನ್ನೆಲ್ಲಾ ಖಾಲಿ ಮಾಡಿ ಸ್ವಚ್ಛಗೊಳಿಸುವುದು, ಶೌಚನೀರು ಕೆರೆಗೆ ಸೇರುವುದನ್ನು ತಪ್ಪಿಸುವುದು‌ ಮತ್ತು ಇದನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವುದು ಯೋಜನೆಯ ಉದ್ದೇಶವಾಗಿತ್ತು.

ಇದಕ್ಕಾಗಿ ₹30 ಕೋಟಿ ಮೊತ್ತದ ಯೋಜನೆಯ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು.

2019ರ ಜುಲೈನಲ್ಲಿ ಇದಕ್ಕೆ ಸಚಿವ ಸಂಪುಟದ ಅನುಮೋದನೆಯೂ ಸಿಕ್ಕಿತ್ತು. ಜುಲೈ 18ರಂದು ಆಡಳಿತಾತ್ಮಕ ಅನುಮೋದನೆ ನೀಡಿ ಸರ್ಕಾರ ಆದೇಶ ವನ್ನೂ ಹೊರಡಿಸಿತ್ತು. ಆದರೆ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಈ ಯೋಜನೆಗೆ ತಡೆ ನೀಡಲಾಗಿದೆ.

***

ಎರಡೂ ಕೆರೆಗಳ ಅಭಿವೃದ್ಧಿಗೆ ₹43 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿತ್ತು. ಹಣ ಬಿಡುಗಡೆಗೆ ಈಗಿನ ಸರ್ಕಾರ ಮೀನಮೇಷ ಎಣಿಸುತ್ತಿದೆ. ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸುತ್ತೇನೆ
- ಆರ್. ಮಂಜುನಾಥ್, ದಾಸರಹಳ್ಳಿ ಕ್ಷೇತ್ರದ ಶಾಸಕ

***

ಗಾಣಿಗರಹಳ್ಳಿ ಕೆರೆ ಅಭಿವೃದ್ಧಿಯೂನನೆಗುದಿಗೆ: ಕೆರೆ ಅಂಗಳ ಒತ್ತುವರಿ ಗಾಣಿಗರಹಳ್ಳಿ ಕೆರೆ ಅಭಿವೃದ್ಧಿ ಯೋಜನೆಯೂ ನನೆಗುದಿಗೆ ಬಿದ್ದಿದೆ. 14.28 ಹೆಕ್ಟೇರ್ ವಿಸ್ತೀರ್ಣದ ಈ ಕೆರೆ 35 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ.

ಕೆರೆಯ ಅಂಗಳದಲ್ಲಿ ಸುಮಾರು 5 ಹೆಕ್ಟೇರ್‌ನಷ್ಟು ಒತ್ತುವರಿಯಾಗಿದೆ. ಸರ್ವೆ ಮಾಡಿಸಿ, ಒತ್ತುವರಿ ತೆರವುಗೊಳಿಸಿ ಬೇಲಿ ನಿರ್ಮಿಸಲು ಹಾಗೂ ಇದನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಸಣ್ಣ ನೀರಾವರಿ ಇಲಾಖೆ ಯೋಜನೆ ರೂಪಿಸಿತ್ತು.

₹13 ಕೋಟಿ ಮೊತ್ತದ ಈ ಯೋಜನೆಗೂ ಹಿಂದಿನ ಸರ್ಕಾರದ ಸಚಿವ ಸಂಪುಟ ಅನುಮೋದನೆ ನೀಡಿತ್ತು.

‘ಶೀಘ್ರ ಅನುದಾನ ಬಿಡುಗಡೆ ನಿರೀಕ್ಷೆ’

ಎರಡೂ ಕೆರೆಗಳ ಅಭಿವೃದ್ಧಿ ಯೋಜನೆಗೆ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಲು ಪ್ರಯತ್ನ ಮುಂದುವರಿದಿದೆ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇನ್ನೇನು ಕಾಮಗಾರಿ ಆರಂಭಿಸಬೇಕು ಎನ್ನುವಷ್ಟರಲ್ಲಿ ಹೊಸ ಸರ್ಕಾರ ತಡೆ ನೀಡಿತು. ಯೋಜನೆಯ ಅಗತ್ಯವನ್ನು ಸರ್ಕಾರಕ್ಕೆ ಮನವರಿಕೆ ಮಾಡಿಸುವ ಪ್ರಯತ್ನ ಮಾಡಿದ್ದೇವೆ. ಸದ್ಯದಲ್ಲೇ ಅನುದಾನ ಬಿಡುಗಡೆಯಾಗುವ ವಿಶ್ವಾಸವಿದೆ’ ಎಂದು ಅವರು ಹೇಳಿದರು.

ಯೋಜನೆಯಲ್ಲಿ ಏನೇನಿದೆ?

lಕೆರೆಗೆ ಸೇರುತ್ತಿರುವ ಕೊಳಚೆ ನೀರನ್ನು ಪೈಪ್‌ಲೈನ್ ಮೂಲಕ ದೊಡ್ಡ ಕಾಲುವೆಗೆ ಸೇರುವಂತೆ ಮಾಡುವುದು

lಪೋಷಕ ನಾಲೆ ಅಭಿವೃದ್ಧಿ

lಕೆರೆಯ ಸುತ್ತಲು ದಂಡೆ ನಿರ್ಮಿಸುವುದು, ಬೇಲಿ ನಿರ್ಮಿಸುವುದು

lಕೆರೆ ಅಂಗಳದ ಹೂಳು ತೆಗೆದು ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸುವುದು

lಸೋಪಾನ ಕಟ್ಟೆ ನಿರ್ಮಾಣ

lಕೆರೆಯ ಕಚ್ಚಾ ಕಾಲುವೆ ಅಭಿವೃದ್ಧಿ

lಕೆರೆ ಏರಿ ಮೇಲೆ ಪಾದಚಾರಿ ಮಾರ್ಗ ನಿರ್ಮಿಸಿ, ದೀಪ ಅಳವಡಿಸುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT