ಶುಕ್ರವಾರ, ನವೆಂಬರ್ 22, 2019
20 °C
ಗ್ರಾಮೀಣ ಭಾಗದ ಸರ್ಕಾರಿ ಕಾನ್ವೆಂಟ್ ಶಾಲೆ

‘ಮಕ್ಕಳ ಮನೆ’ಗೆ ಬೇಕಿದೆ ನೆರವು

Published:
Updated:
Prajavani

ಕೊಲ್ಹಾರ: ಗ್ರಾಮೀಣ ಭಾಗದಲ್ಲಿ ಉತ್ತಮ ಗುಣಮಟ್ಟದ ಪೂರ್ವ ಪ್ರಾಥಮಿಕ ಶಿಕ್ಷಣಕ್ಕಾಗಿ ಸಮುದಾಯದ ಸಹಕಾರದೊಂದಿಗೆ ಸರ್ಕಾರಿ ಶಾಲೆಗಳೇ ಕಂಡುಕೊಂಡ ಅತ್ಯುತ್ತಮ ಪರಿಕಲ್ಪನೆ ‘ಮಕ್ಕಳ ಮನೆ’.

‘ಮಕ್ಕಳ ಮನೆ’ಯನ್ನು ಬೆಂಗಳೂರು ಗ್ರಾಮಾಂತರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳು ಸೇರಿ ದಕ್ಷಿಣ ಕರ್ನಾಟಕ ಭಾಗದ ವಿವಿಧ ಶಾಲೆಗಳು ಅಳವಡಿಸಿಕೊಂಡು ಪರಿಣಾಮಕಾರಿ ಬದಲಾವಣೆ ಕಂಡುಕೊಂಡಿವೆ. ಇದರಿಂದ ಪ್ರೇರಣೆಗೊಂಡು ತಾಲ್ಲೂಕಿನ ತೆಲಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಣ ಬಿ.ಎನ್.ಡಿಗ್ಗಾಂವಿ ಅವರು ಮೂರು ವರ್ಷಗಳ ಹಿಂದೆ ಶಾಲೆಯ ಮೇಲುಸ್ತುವಾರಿ ಸಮಿತಿ ಸಹಕಾರದೊಂದಿಗೆ ಶಾಲೆಯಲ್ಲಿ ‘ಮಕ್ಕಳ ಮನೆ’ ಪೂರ್ವ ಪ್ರಾಥಮಿಕ ಕಲಿಕಾ ಕೇಂದ್ರ ಆರಂಭಿಸಿ ಯಶಸ್ವಿಯಾಗಿದ್ದಾರೆ.

ಮೊದಲ ಎರಡು ವರ್ಷ ‘ಮಕ್ಕಳ ಮನೆ’ಗೆ 30 ಮಕ್ಕಳು ದಾಖಲಾದರು. ಮಕ್ಕಳಿಗೆ ಕಲಿಕಾ ಚಟುವಟಿಕೆಗಳು ಹಾಗೂ ಪರಿಣಾಮಕಾರಿ ಭೋದನಾ ಕ್ರಮದಿಂದಾಗಿ ಪ್ರಸ್ತುತ ಮೂರನೇ ವರ್ಷ 64 ಮಕ್ಕಳು ‘ಮಕ್ಕಳ ಮನೆ’ ಸೇರ್ಪಡೆಯಾಗಿದ್ದಾರೆ. ಮುಂದಿನ ತರಗತಿಗಳಿಗೆ ಇದೇ ಮಕ್ಕಳು ಮುಂದುವರಿಯುವುದರಿಂದ ಪ್ರಸ್ತುತ ಶಿಕ್ಷಣ ಇಲಾಖೆಗೆ ಸವಾಲಾಗಿರುವ ಸರ್ಕಾರಿ ಶಾಲೆಗಳ ಮುಚ್ಚುವಿಕೆ ಹಾಗೂ ಶಾಲೆಗಳಿಗೆ ಮಕ್ಕಳ ಹಾಜರಾತಿ ಕೊರತೆಗಳಂಥ ಸಮಸ್ಯೆಗಳಿಗೆ ‘ಮಕ್ಕಳ ಮನೆ’ ಪರಿಣಾಮಕಾರಿ ಮಾರ್ಗೋಪಾಯವಾಗಿದೆ. ತೆಲಗಿ ಶಾಲೆಯ ಈ ಕಾರ್ಯವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಶ್ಲಾಘಿಸಿದ್ದಾರೆ.

‘ಮಕ್ಕಳ ಮನೆ’ ಕಲಿಕಾ ಕೇಂದ್ರದಲ್ಲಿ ಒಂದು ಮಗುವಿಗೆ ವಾರ್ಷಿಕ ₹ 1,200 ಶುಲ್ಕ ನಿಗದಿಪಡಿಸಲಾಗಿದೆ. ಆ ಶುಲ್ಕದಲ್ಲಿ ₹ 250 ಸಮವಸ್ತ್ರ, ₹ 280 ಪಠ್ಯಪುಸ್ತಕಗಳಿಗೆ ಖರ್ಚು ಮಾಡಲಾಗುತ್ತಿದೆ. ಇನ್ನುಳಿದ ಹಣದಲ್ಲೇ ಶಿಕ್ಷಕರ ವೇತನ, ಮಕ್ಕಳ ಆಟಪಾಠದ ಸಾಮಗ್ರಿ ಸೇರಿ ಎಲ್ಲಾ ಖರ್ಚು ವೆಚ್ಚಗಳನ್ನು ಭರಿಸಲಾಗುತ್ತಿದೆ. ಶಾಲಾ ಶಿಕ್ಷಕರೂ ತಮ್ಮ ಕೈಲಾದ ಆರ್ಥಿಕ ಸಹಕಾರ ನೀಡುತ್ತಿದ್ದರೂ ಆರ್ಥಿಕ ಸಂಪನ್ಮೂಲಗಳ ಕ್ರೋಡೀಕರಣ ಸವಾಲಿನ ಕೆಲಸವಾಗಿದೆ.

‘ಮಕ್ಕಳ ಮನೆ’ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವುದರಿಂದ ಅಂಗನವಾಡಿ ಮಕ್ಕಳಿಗೆ ನೀಡುವ ಸೌಲಭ್ಯಗಳನ್ನು ಈ ಮಕ್ಕಳಿಗೂ ನೀಡುವಂತೆ ತಾಲ್ಲೂಕು ಅಧಿಕಾರಿಗಳಿಗೆ ಪತ್ರದ ಮೂಲಕ ಮನವಿ ಮಾಡಿದರೂ ಈವರೆಗೂ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ.

‘ಮಕ್ಕಳ ಮನೆ’ ಪೂರ್ವ ಪ್ರಾಥಮಿಕ ಕಲಿಕಾ ಕೆಂದ್ರಗಳನ್ನು ಉತ್ತೇಜಿಸಲು ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು. ಆ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರಬೇಕು’ ಎಂದು ಪೋಷಕರು ಒತ್ತಾಯಿಸುತ್ತಾರೆ.

ಪ್ರತಿಕ್ರಿಯಿಸಿ (+)