ಭಾನುವಾರ, ಜೂನ್ 20, 2021
26 °C
ಅವಶ್ಯ ಇಲ್ಲದೆ ಓಡಾಡಿದರೆ ವಾಹನ ಜಪ್ತಿ, ಲಾಠಿ ಪ್ರಹಾರಕ್ಕೂ ಹಿಂಜರಿಯಲ್ಲ; ಎಸ್ಪಿ ಎಚ್ಚರಿಕೆ

ಜಿಲ್ಲೆಯ ಗಡಿಯಲ್ಲಿ 11 ಚೆಕ್‌ಪೋಸ್ಟ್‌ ಸ್ಥಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಸೋಮವಾರದಿಂದ ಮೇ 24ರವರೆಗೂ ಕಟ್ಟುನಿಟ್ಟಿನ ಲಾಕ್‌ಡೌನ್‌ ಜಾರಿಗೊಳ್ಳಲಿದ್ದು, ಅಂತರ ಜಿಲ್ಲೆಗಳ ವಾಹನ ಓಡಾಟ ನಿರ್ಬಂಧಕ್ಕಾಗಿ ಜಿಲ್ಲೆಯ ಗಡಿಯಲ್ಲಿ 11 ಚೆಕ್‌ಪೋಸ್ಟ್‌ ಸ್ಥಾಪಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅಶ್ವಿನಿ ಭಾನುವಾರ ತಿಳಿಸಿದರು.

‘ಜಿಲ್ಲೆಯ ಒಳಭಾಗದಲ್ಲೂ ಹಲವು ಚೆಕ್‌ಪೋಸ್ಟ್‌ ಸ್ಥಾಪನೆ ಮಾಡಲಾಗಿದೆ. ಕಂದಾಯ ಇಲಾಖೆ ಸಿಬ್ಬಂದಿಯೊಂದಿಗೆ ಪೊಲೀಸರು ಕರ್ತವ್ಯ ನಿರ್ವಹಣೆ ಮಾಡುವರು. ಜಿಲ್ಲೆಯಾದ್ಯಂತ ವಾಹನ ಓಡಾಟ ನಿರ್ಬಂಧಿಸಲಾಗಿದೆ. ಅನವಶ್ಯಕವಾಗಿ ವಾಹನ ರಸ್ತೆಗಿಳಿದರೆ ಅವುಗಳನ್ನು ಜಪ್ತಿ ಮಾಡಲಾಗುವುದು. ಜಪ್ತಿ ಮಾಡಲಾದ ವಾಹನಗಳನ್ನು ನ್ಯಾಯಾಲಯದಲ್ಲಿಯೇ ಬಿಡಿಸಿಕೊಳ್ಳಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಔಷಧಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗಾಗಿ ಜನರು ನಡೆದುಕೊಂಡೇ ಹೋಗಬೇಕು. ಬೆಳಿಗ್ಗೆ 6 ಗಂಟೆಯಿಂದ 10ಗಂಟೆಯವರೆಗೆ ಅಗತ್ಯ ವಸ್ತುಗಳ ಅಂಗಡಿಗಳು ತೆರೆಯಲಿವೆ. ಹಾಲಿನ ಬೂತ್‌ಗಳು ಬೆಳಿಗ್ಗೆ 6 ರಿಂದ ಸಂಜೆ 6ರವರೆಗೂ ತೆರೆಯಲಿವೆ. ಜನರು ಅನಗತ್ಯ ಓಡಾಟ ನಿಲ್ಲಿಸಬೇಕು. ಜನರು ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಓಡಾಡಿದರೆ ಲಾಠಿ ಪ್ರಹಾರ ನಡೆಸಲೂ ಹಿಂಜರಿಯುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

‘ಜನರ ಓಡಾಟ ನಿಯಂತ್ರಿಸಲು ನಗರ, ಪಟ್ಟಣ ಪ್ರದೇಶಗಳ ಒಳ ರಸ್ತೆಗಳನ್ನು ಬಂದ್‌ ಮಾಡಲಾಗುವುದು. ಕೇವಲ ಮುಖ್ಯರಸ್ತೆಗಳನ್ನು ಮಾತ್ರ ತೆರೆಯಲಾಗುವುದು. ಎಲ್ಲಾ ಕಡೆ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿ ಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ರಸ್ತೆ ಬಂದ್ ಮಾಡಲಾಗುವುದು. ಸದ್ಯ 90 ಕಡೆಗಳಲ್ಲಿ ನಿಷೇಧಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಮುಂದೆ ಇದರ ಸಂಖ್ಯೆ ಹೆಚ್ಚಾಗಬಹುದು. ಹೀಗಾಗಿ ಜನರು ಎಚ್ಚರಿಕೆಯಿಂದ ಇರಬೇಕು’ ಎಂದರು.

‘ಇಲ್ಲಿಯವರೆಗೂ ಮಾಸ್ಕ್‌ ಧರಿಸದ 16,776 ಮಂದಿಗೆ ದಂಡ ವಿಧಿಸಲಾಗಿದೆ. 310 ಮಂದಿಯ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. 713 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಅನಗತ್ಯವಾಗಿ ಓಡಾಡುವ ಯಾವುದೇ ವಾಹನಗಳನ್ನು ಮುಂದೆ ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಲಾಗುವುದು. ಸಾರ್ವಜನಿಕರು ವಾಹನ ಬಿಡುವಂತೆ ಪೊಲೀಸರನ್ನು ಮನವಿ ಮಾಡಬಾರದು’ ಎಂದರು.

‘ಮದುವೆ ಮಾಡುವವರು ಆಯಾ ತಾಲ್ಲೂಕು ತಹಶೀಲ್ದಾರ್‌ರಿಂದ ಅನು ಮತಿ ಪಡೆದು ಪಾಸ್‌ ಪಡೆಯಬೇಕು. ಮದುವೆಯಲ್ಲಿ ಕೇವಲ 40 ಮಂದಿ ಭಾಗವಹಿಸಬೇಕು. ಪೊಲೀಸರು ತಪಾಸಣೆಗೆ ಬಂದಾಗ ಎಲ್ಲರೂ ಕಡ್ಡಾಯವಾಗಿ ಪಾಸ್‌ ತೋರಿಸಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದರು.

‘ಜನರು ಅಗತ್ಯ ವಸ್ತುಗಳ ಖರೀದಿ ನೆಪದತ್ತ ಹೊರಗೆ ಬರಬಾರದು. ತಳ್ಳುವ ಗಾಡಿಗಳು ಮನೆ ಮುಂದಕ್ಕೆ ಬರಲಿದ್ದು ಅಲ್ಲಿಯೇ ಖರೀದಿ ಮಾಡಬಹುದು. ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅಗತ್ಯ ವಸ್ತುಗಳ ಕಾರ್ಖಾನೆಗಳ ಕಾರ್ಯನಿರ್ವಹಣೆಗೆ ಅವಕಾಶ ನೀಡಲಾಗಿದೆ’ ಎಂದರು.

ಲಸಿಕೆ ನಂತರ ಕುಗ್ಗಿದ ರೋಗ ಲಕ್ಷಣ

‘ಪೊಲೀಸ್‌ ಇಲಾಖೆಯ ಬಹುತೇಕ ಸಿಬ್ಬಂದಿ ಈಗಾಗಲೇ 2 ಡೋಸ್ ಕೋವಿಡ್‌ ಲಸಿಕೆ ಪಡೆದಿದ್ದಾರೆ. ಹೀಗಾಗಿ ಕೋವಿಡ್‌ ದೃಢಪಟ್ಟಿದ್ದರೂ ಹೆಚ್ಚಿನ ರೋಗ ಲಕ್ಷಣ ಕಂಡುಬಂದಿಲ್ಲ’ ಎಂದು ಡಾ.ಅಶ್ವಿನಿ ತಿಳಿಸಿದರು.

‘ವೈದ್ಯಕೀಯ ಕಾರಣಕ್ಕೆ 33 ಸಿಬ್ಬಂದಿ ಮೊದಲ ಡೋಸ್‌ ಲಸಿಕೆ ಪಡೆದಿಲ್ಲ. 166 ಮಂದಿ ಮಾತ್ರ 2ನೇ ಡೋಸ್‌ ಪಡೆಯಬೇಕು. ನಿಗದಿತ ಅವಧಿಯಲ್ಲಿ ಅವರಿಗೂ ಲಸಿಕೆ ಪೂರ್ಣಗೊಳಿಸಲಾಗುವುದು. 88 ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿದ್ದು, 22 ಮಂದಿ ಗುಣಮುಖರಾಗಿದ್ದಾರೆ. 62 ಮಂದಿ ಮನೆಯಲ್ಲೇ ಪ್ರತ್ಯೇಕವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 62 ಸಿಬ್ಬಂದಿಯ ಕುಟುಂಬ ಸದಸ್ಯರಿಗೆ ಸೋಂಕು ಬಂದಿದೆ. ಅವರಲ್ಲಿ 23 ಮಂದಿ ಗುಣಮುಖರಾಗಿದ್ದು, 38 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು