ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ: ದುರಸ್ತಿಗೆ ಕಾದಿರುವ 1,971 ಶಾಲಾ ಕೊಠಡಿ

ಬಿರುಕು ಬಿಟ್ಟ ಗೋಡೆ, ಸೋರುವ ಚಾವಣಿ: ಆತಂಕದ ವಾತಾವರಣದಲ್ಲೇ ಮಕ್ಕಳ ಕಲಿಕೆ
Published 17 ಜೂನ್ 2024, 7:01 IST
Last Updated 17 ಜೂನ್ 2024, 7:01 IST
ಅಕ್ಷರ ಗಾತ್ರ

ಮಂಡ್ಯ: ಹಾರಿ ಹೋದ ಶೀಟುಗಳು, ಕುಸಿದು ಬಿದ್ದ ಕಟ್ಟಡಗಳು, ಬಿರುಕು ಬಿಟ್ಟ ಗೋಡೆಗಳು, ಸೋರುವ ಚಾವಣಿಗಳು, ನೇತಾಡುವ ಮರದ ತೀರುಗಳು, ಒಡೆದು ಹೋದ ಹೆಂಚುಗಳು, ಉದುರುತ್ತಿರುವ ಸಿಮೆಂಟ್‌... ಹೀಗೆ ನಾನಾ ತರಹದ ಸಮಸ್ಯೆಗಳಿಗೆ ಜಿಲ್ಲೆಯ ಸರ್ಕಾರಿ ಶಾಲಾ ಕೊಠಡಿಗಳು ತುತ್ತಾಗಿವೆ. ದುರಸ್ತಿ ಮತ್ತು ಮರುನಿರ್ಮಾಣದ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿರುವುದು ಪಾಲಕರು ಮತ್ತು ಮಕ್ಕಳ ಬೇಸರಕ್ಕೆ ಕಾರಣವಾಗಿದೆ. 

ಮಳೆಗಾಲದಲ್ಲಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಕಿರಿಕಿರಿ ತಪ್ಪಿದ್ದಲ್ಲ. ಮೂಲಸೌಕರ್ಯ ವಂಚಿತ ಮತ್ತು ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳಲ್ಲಿ ಆತಂಕದ ವಾತಾವರಣದಲ್ಲೇ ಮಕ್ಕಳ ಆಟ–ಪಾಠ ನಡೆಯುತ್ತಿದೆ. ಶಿಥಿಲಾವಸ್ಥೆ ತಲುಪಿದ ಕೊಠಡಿಯಲ್ಲಿ ಬೋಧಿಸಲು ಶಿಕ್ಷಕರು ಹಿಂದೇಟು ಹಾಕುತ್ತಾರೆ. ಹೀಗಾಗಿ ಶಾಲೆಗೆ ಸಮೀಪದ ಸಭಾ ಭವನ, ದೇವಸ್ಥಾನ ಅಂಗಳಗಳು ಶಾಲೆಯಾಗಿ ಮಾರ್ಪಡುವುದು ಅನಿವಾರ್ಯವಾಗುತ್ತದೆ.

ಮಂಡ್ಯ ಜಿಲ್ಲೆಯಲ್ಲಿ 1756 ಸರ್ಕಾರಿ ಶಾಲೆಗಳಿದ್ದು, ಅವುಗಳಲ್ಲಿ 647 ಶಾಲೆಗಳು ದುರಸ್ತಿಗೆ ಕಾದಿವೆ. 600 ಶಾಲಾ ಕೊಠಡಿಗಳು ಸಣ್ಣ ಪ್ರಮಾಣದ ದುರಸ್ತಿಗೆ ಕಾದಿದ್ದರೆ, 1371 ಕೊಠಡಿಗಳಿಗೆ ದೊಡ್ಡ ಪ್ರಮಾಣದಲ್ಲಿ ದುರಸ್ತಿ ಕಾರ್ಯ ನಡೆಯಬೇಕಿದೆ. ಈ ದುರಸ್ತಿ ಕಾರ್ಯಕ್ಕೆ ಅಂದಾಜು ₹38.09 ಕೋಟಿ ಅನುದಾನ ಅಗತ್ಯವಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ದುರಸ್ತಿಗೆ ಇಲಾಖೆಗೆ ಪತ್ರ:

ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಕರಡಹಳ್ಳಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ ನಾಗಮಂಗಲ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಚೊಟ್ಟಕ್ಯಾತನಹಳ್ಳಿ, ಬುರುಡುಗುಂಟೆ, ಸಂಕನಹಳ್ಳಿ, ಜಟ್ಟನಹಳ್ಳಿ ಮತ್ತು ತೊಂಡಹಳ್ಳಿ ಶಾಲೆಗಳಲ್ಲಿ ಶಿಥಿಲವಾಗಿರುವ ಕಟ್ಟಡಗಳಿದ್ದು, ದುರಸ್ತಿಗೆ ಇಲಾಖೆಗೆ ಪತ್ರ ಬರೆಯಲಾಗಿದೆ.

ತಾಲ್ಲೂಕಿನಲ್ಲಿರುವ ಹಲವು ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲೂ ಹಳೆಯ ಕೊಠಡಿಗಳಲ್ಲಿ ತರಗತಿಯನ್ನು ನಡೆಸಲಾಗುತ್ತಿದೆ. ಜೊತೆಗೆ ತಾಲ್ಲೂಕಿನ ಬಹುತೇಕ ಶಾಲೆಗಳಲ್ಲಿ ಶೌಚಾಲಯಗಳಿದ್ದರೂ ನಿರ್ವಹಣೆಯಿಲ್ಲದೇ ವಿದ್ಯಾರ್ಥಿಗಳಿಗೆ ಬಳಕೆಗೆ ಬಾರದಂತಾಗಿದೆ. ವಿದ್ಯಾರ್ಥಿಗಳು ಬಯಲು ಶೌಚಕ್ಕೆ ಹೋಗುವುದು ಅನಿವಾರ್ಯವಾಗಿದೆ.

ಇಲಾಖೆಯಿಂದ ತಾಲ್ಲೂಕಿನಲ್ಲಿ ವಿವಿಧ ಶಾಲೆಗಳಿಗೆ ನರೇಗಾದಡಿಯಲ್ಲಿ 55 ಹೆಚ್ಚುವರಿ ಶೌಚಾಲಯಗಳ ನಿರ್ಮಾಣಕ್ಕೆ ಕ್ರಿಯಾ ಯೋಜನೆಯನ್ನು ಸಲ್ಲಿಸಲಾಗಿದೆ. ಜೊತೆಗೆ ಹಲವು ಕಡೆ ಶಿಥಿಲಗೊಂಡಿರುವ ಕಟ್ಟಡಗಳು ಅಪಾಯದ ಮುನ್ಸೂಚನೆಯಿದ್ದರೂ ನೆಲಸಮ ಮಾಡದೇ ಇಲಾಖೆಯ ನಿಯಮಗಳಿಂದ ಹಾಗೆಯೇ ಉಳಿಸಲಾಗಿದೆ.

ಖಾಸಗಿ ಮನೆಯೇ ವಿದ್ಯಾಲಯ:

ಮದ್ದೂರು ತಾಲ್ಲೂಕಿನ ಅಗರಲಿಂಗನದೊಡ್ಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯು ಮೈಸೂರು-ಬೆಂಗಳೂರು ಹೆದ್ದಾರಿ ವಿಸ್ತರಣೆ ಕಾಮಗಾರಿಯ ವೇಳೆ ರಸ್ತೆಗೆ ಒಳಪಟ್ಟಿದೆ. ನಂತರದ ದಿನಗಳಲ್ಲಿ ನೂತನ ಶಾಲೆಯನ್ನು ನಿರ್ಮಿಸುವ ವಿಷಯದಲ್ಲಿ ಜಾಗವನ್ನು ನಿರ್ಧರಿಸುವ ಬಗ್ಗೆ ಗ್ರಾಮಸ್ಥರು ಹಾಗೂ ಶಿಕ್ಷಣ ಇಲಾಖೆಯ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಸುಮಾರು ಎರಡು ವರ್ಷಗಳಿಂದ ಸರ್ಕಾರಿ ಶಾಲೆಯು ಅಗರಲಿಂಗನದೊಡ್ಡಿ ಗ್ರಾಮದ ಖಾಸಗಿ ಮನೆಯೊಂದನ್ನು ಬಾಡಿಗೆಗೆ ಪಡೆದುಕೊಂಡು ಅಲ್ಲಿ ತರಗತಿಗಳನ್ನು ನಡೆಸುತ್ತಿದ್ದಾರೆ.

ಒಂದೇ ಮನೆಯಲ್ಲಿ ತರಗತಿಗಳನ್ನು ನಡೆಸುವುದರಿಂದ ವಿದ್ಯಾರ್ಥಿಗಳಿಗೆ ಕೊಠಡಿಗಳ, ಶೌಚಾಲಯ ಸೇರಿದಂತೆ ಹಲವು ತೊಂದರೆಯಾಗುತ್ತಿರುವ ಬಗ್ಗೆ ಗ್ರಾಮಸ್ಥರು ಶಿಕ್ಷಣ ಇಲಾಖೆಯ ಗಮನಕ್ಕೆ ತಂದು ಕೂಡಲೇ ನೂತನ ಕಟ್ಟಡ ನಿರ್ಮಾಣಕ್ಕೆ ಕ್ರಮ ವಹಿಸಲು ಒತ್ತಡ ಹಾಕಿದರು.

ಕದಲೂರು ಉದಯ್ ಅವರು ನೂತನ ಶಾಸಕರಾಗಿ ಆಯ್ಕೆಯಾದ ಕೆಲವು ತಿಂಗಳುಗಳಲ್ಲಿ ಗ್ರಾಮದಲ್ಲಿ ಶಾಲೆಗಾಗಿ ಶಿಕ್ಷಣ ಇಲಾಖೆಯಿಂದ ಜಾಗವನ್ನು ಖರೀದಿ ಮಾಡುವಂತೆ ಮಾಡಿದರು. ಆದರೆ, ಶಾಸಕರು ಶಂಕುಸ್ಥಾಪನೆಯನ್ನು ಮಾಡಿ ನಾಲ್ಕೈದು ತಿಂಗಳುಗಳೇ ಕಳೆದಿದ್ದರೂ ಶಾಲಾ ಕಟ್ಟಡದ ಕಾಮಗಾರಿಯು ತೆವಳುತ್ತಾ ಸಾಗಿದೆ. ಈ ಶೈಕ್ಷಣಿಕ ಸಾಲಿನ ಆರಂಭಕ್ಕೂ ಮುನ್ನ ಕಾಮಗಾರಿಯು ಮುಗಿದು, ನೂತನ ಕಟ್ಟಡ ಉದ್ಘಾಟನೆಯಾಗಬೇಕಿತ್ತು. 

300 ಕೊಠಡಿಗಳು ಶಿಥಿಲ:

ಮಳವಳ್ಳಿ ತಾಲ್ಲೂಕಿನ ಎಲ್ಲ ಶಾಲೆಗಳು ಸರ್ಕಾರಿ ಕಟ್ಟಡದಲ್ಲಿ ನಡೆಯುತ್ತಿದ್ದು, 323 ಶಾಲೆಗಳಲ್ಲಿ ಸುಮಾರು 130 ಶಾಲೆಗಳಲ್ಲಿನ 300ಕ್ಕೂ ಹೆಚ್ಚು ಕೊಠಡಿಗಳು ಸಣ್ಣಪುಟ್ಟ ದುರಸ್ತಿ ಕಾಣಬೇಕಿವೆ. ಮೇಗಳಾಪುರ, ಬ್ಯಾಡರಹಳ್ಳಿ, ತೊರೆಕಾಡನಹಳ್ಳಿ, ಯತ್ತಂಬಾಡಿ, ಚನ್ನಪಿಳ್ಳೆಕೊಪ್ಪಲು, ಬೊಪ್ಪೇಗೌಡನಪುರ(ಬಿಜಿಪುರ), ಬೆಳಕವಾಡಿ, ಬೆಂಡರವಾಡಿ, ಕ್ಯಾತೇಗೌಡನದೊಡ್ಡಿ, ಚಿಕ್ಕಬಾಗಿಲು ಸೇರಿದಂತೆ ಹಲವೆಡೆ ಕೆಲ ಕೊಠಡಿಗಳು ಸುಸಜ್ಜಿತವಾಗಿಲ್ಲ. ಕೆಲವೆಡೆ ಚಾವಣಿಗಳು ಹಾಳಾಗಿವೆ.

ಶಿಕ್ಷಣ ಇಲಾಖೆ ಎಚ್ಚೆತ್ತು ಅಂಥ ಕೊಠಡಿಗಳಲ್ಲಿನ ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಕ್ರಮ ವಹಿಸಿದ್ದಾರೆ. ಬಹುತೇಕ ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆವಿದ್ದು, ಸ್ವಚ್ಛತೆಗೆ ಆದ್ಯತೆ ನೀಡಬೇಕಾಗಿದೆ.

111 ಕೊಠಡಿಗಳ ನಿರ್ಮಾಣದ ಅಗತ್ಯವಿದ್ದು, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿ ಶಿಕ್ಷಣ ಸಚಿವರ ಗಮನಸೆಳೆದ ಪರಿಣಾಮ ಮಾರ್ಚ್‌ನಲ್ಲಿ ₹2 ಕೋಟಿ ವಿಶೇಷ ಅನುದಾನ ಬಿಡುಗಡೆಯಾಗಿದೆ. ಚುನಾವಣಾ ನೀತಿಸಂಹಿತೆಯಿಂದಾಗಿ ಬಳಕೆಗೆ ಸಾಧ್ಯವಾಗಿರಲಿಲ್ಲ. ಇದೀಗ ಅನುದಾನವನ್ನು ಉಪಯೋಗಿಸಿಕೊಳ್ಳಲು ಶಿಕ್ಷಣ ಇಲಾಖೆಯು ಮುಂದಾಗಿದೆ.

40 ಶಾಲೆಗಳಲ್ಲಿ ಹಾಳಾದ ಚಾವಣಿ

ಪಾಂಡವಪುರ ತಾಲ್ಲೂಕಿನಲ್ಲಿ ಸುಮಾರು 182 ಸರ್ಕಾರಿ ಶಾಲೆಗಳಿದ್ದು, ಈ ಪೈಕಿ ಈ ಬಾರಿಗೆ 40 ಶಾಲೆಗಲ್ಲಿ ಶಾಲೆಯ ಚಾವಣಿ ಕುಸಿತ, ನೆಲಹಾಸು ಕಿತ್ತುಹೋಗಿರುವುದು, ಗೋಡೆ ಬಿರುಕು ಸೇರಿದಂತೆ ಇನ್ನಿತರ ಸಮಸ್ಯೆ ಎದುರಾಗಿದೆ.

ಈ ಬಾರಿ ಬಿದ್ದ ಮಳೆಯಿಂದಾಗಿ ಶಾಲೆಯಲ್ಲಿ ಮಳೆ ಸುರಿದು ನೀರು ಆವೃತಗೊಂಡಿವೆ. ಬಿರುಗಾಳಿಗೆ ಚಾವಣಿ ಹಾರಿಹೋಗಿದೆ. ಸ್ವಲ್ಪಭಾಗದ ಗೋಡೆಗಳು ಬಿರುಕು ಬಿಟ್ಟಿವೆ. ಈ ಶಾಲೆಗಳ ದುರಸ್ತಿಗಾಗಿ ಜಿಲ್ಲಾ ಪಂಚಾಯಿತಿಯಿಂದ ಸುಮಾರು ₹71 ಲಕ್ಷ ಮಂಜೂರಾತಿಗಾಗಿ ಬಿಇಓ ಬಿ.ಚಂದ್ರಶೇಖರ್ ಅವರು ಜಿಲ್ಲಾ ಪಂಚಾಯಿತಿಗೆ ಮನವಿ ಸಲ್ಲಿಸಿದ್ದಾರೆ.

 ಪೂರಕ ಮಾಹಿತಿ: ಗಣಂಗೂರು ನಂಜೇಗೌಡ (ಶ್ರೀರಂಗಪಟ್ಟಣ), ಯು.ವಿ. ಉಲ್ಲಾಸ್‌ (ನಾಗಮಂಗಲ), ಎಂ.ಆರ್‌. ಅಶೋಕ್‌ (ಮದ್ದೂರು), ಟಿ.ಕೆ. ಲಿಂಗರಾಜು (ಮಳವಳ್ಳಿ), ಬಲ್ಲೇನಹಳ್ಳಿ ಮಂಜುನಾಥ್‌ (ಕೆ.ಆರ್‌.ಪೇಟೆ), ಹಾರೋಹಳ್ಳಿ ಪ್ರಕಾಶ್‌ (ಪಾಂಡವಪುರ)ಮಕ್ಕಳಿಗೆ ಯಾವುದೇ ಅಪಾಯವಾಗದಂತೆ ಜಾಗೃತಿ ವಹಿಸಿ ಸುಸಜ್ಜಿತ ಕೊಠಡಿಗಳಲ್ಲಿ ಪಾಠ ಮುಂದುವರಿಸಲಾಗಿದೆ. ಕೊಠಡಿಗಳ ದುರಸ್ತಿ ಬಗ್ಗೆ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ – ಎಸ್.ಚಂದ್ರಪಾಟೀಲ್ ಬಿಇಒ ಮಳವಳ್ಳಿ

ಮಳವಳ್ಳಿ ತಾಲ್ಲೂಕಿನ ಮೇಗಳಾಪುರ ಶಾಲೆಯ ಕೊಠಡಿಯ ಚಾವಣಿ ಹಾಳಾಗಿದ್ದು ಈ ಕೊಠಡಿಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿಲ್ಲ
ಮಳವಳ್ಳಿ ತಾಲ್ಲೂಕಿನ ಮೇಗಳಾಪುರ ಶಾಲೆಯ ಕೊಠಡಿಯ ಚಾವಣಿ ಹಾಳಾಗಿದ್ದು ಈ ಕೊಠಡಿಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿಲ್ಲ
ಕೆ.ಆರ್.ಪೇಟೆ ತಾಲ್ಲೂಕಿನ ತೆಂಡೇಕೆರೆ ಹಿರಿಯ ಪ್ರಾಧಮಿಕ ಶಾಲೆಯಲ್ಲಿ ಕೊಠಡಿಗಳ ಚಾವಣಿಯ ಕಾಂಕ್ರೀಟ್ ಉದುರಿರುವ ದೃಶ್ಯ 
ಕೆ.ಆರ್.ಪೇಟೆ ತಾಲ್ಲೂಕಿನ ತೆಂಡೇಕೆರೆ ಹಿರಿಯ ಪ್ರಾಧಮಿಕ ಶಾಲೆಯಲ್ಲಿ ಕೊಠಡಿಗಳ ಚಾವಣಿಯ ಕಾಂಕ್ರೀಟ್ ಉದುರಿರುವ ದೃಶ್ಯ 
ಪಾಂಡವಪುರ ತಾಲ್ಲೂಕಿನ ಮಾಡರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಕೊಠಡಿಯ ಗೋಡೆ ಬಿರುಕುಬಿಟ್ಟಿದೆ
ಪಾಂಡವಪುರ ತಾಲ್ಲೂಕಿನ ಮಾಡರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಕೊಠಡಿಯ ಗೋಡೆ ಬಿರುಕುಬಿಟ್ಟಿದೆ
ಮಂಡ್ಯ ತಾಲ್ಲೂಕಿನ ಹೊನಗಾನಹಳ್ಳಿ ಸರ್ಕಾರಿ ಶಾಲೆಯ ಆವರಣದಲ್ಲಿರುವ ಶೌಚಾಲಯದ ದುಸ್ಥಿತಿ 
ಮಂಡ್ಯ ತಾಲ್ಲೂಕಿನ ಹೊನಗಾನಹಳ್ಳಿ ಸರ್ಕಾರಿ ಶಾಲೆಯ ಆವರಣದಲ್ಲಿರುವ ಶೌಚಾಲಯದ ದುಸ್ಥಿತಿ 
ಮಕ್ಕಳಿಗೆ ಯಾವುದೇ ಅಪಾಯವಾಗದಂತೆ ಜಾಗೃತಿ ವಹಿಸಿ ಸುಸಜ್ಜಿತ ಕೊಠಡಿಗಳಲ್ಲಿ ಪಾಠ ಮುಂದುವರಿಸಲಾಗಿದೆ. ಕೊಠಡಿಗಳ ದುರಸ್ತಿ ಬಗ್ಗೆ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ
– ಎಸ್.ಚಂದ್ರಪಾಟೀಲ್ ಬಿಇಒ ಮಳವಳ್ಳಿ
2023–24ನೇ ಸಾಲಿನಲ್ಲಿ ಮಳೆಯಿಂದಾಗಿ 32 ಶಾಲೆಗಳು ದುರಸ್ತಿಗೆ ಬಂದಿದ್ದವು. ಕೊಠಡಿಗಳು ಮಳೆ ನೀರಿಗೆ ಸೋರುತ್ತಿದ್ದವು. ₹9ಲಕ್ಷ ಅಂದಾಜು ವೆಚ್ಚದಲ್ಲಿ ದುರಸ್ತಿ ಮಾಡಿಸಲಾಗಿದೆ.
– ಬಿ.ಚಂದ್ರಶೇಖರ್ ಬಿಇಒ ಪಾಂಡವಪುರ 
ನಮ್ಮ ಶಾಲೆಗಳು ಶಿಥಿಲಾವಸ್ಥೆಯಲ್ಲಿರುವುದು ಕಡಿಮೆ. ದುರಸ್ತಿ ಆಗಬೇಕಿರುವ ಕೆಲವು ಶಾಲೆಗಳ ಪಟ್ಟಿಯನ್ನು ಈಗಾಗಲೇ ಡಿಡಿಪಿಐ ಕಚೇರಿಗೆ ಕಳುಹಿಸಲಾಗಿದೆ
ಕೆ.ಟಿ.ಸೌಭಾಗ್ಯ ಬಿಇಒ ಮಂಡ್ಯ(ಉತ್ತರ ವಲಯ)
ಗಬ್ಬು ನಾರುವ ಶೌಚಾಲಯ
ಶ್ರೀರಂಗಪಟ್ಟಣ ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ತರಗತಿ ಕೊಠಡಿಗಳ ಸಮಸ್ಯೆ ಇಲ್ಲ ಶಿಥಿಲವಾಗಿದ್ದ ಶಾಲಾ ಕಟ್ಟಡಗಳನ್ನು ನೆಲಸಮ ಮಾಡಿದ್ದು ಸುಸ್ಥಿಯಲ್ಲಿರುವ ಕೊಠಡಿಗಳಲ್ಲಿ ತರಗತಿಗಳು ನಡೆಯುತ್ತಿವೆ. ಆದರೆ ಕೆಲವೆಡೆ ಶೌಚಾಲಯಗಳ ಕೊರತೆ ಇದೆ. ಸ್ಥಳೀಯ ಗ್ರಾ.ಪಂ.ಗಳು ಶೌಚಾಲಯಗಳ ಸ್ವಚ್ಚತೆ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಆರ್.ಪಿ. ಹೇಳಿದ್ದಾರೆ. ಮೇಳಾಪುರ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ತಕ್ಕಷ್ಟು ಶೌಚಾಲಯ ಇಲ್ಲ. ಕೇವಲ ಎರಡು ಶೌಚಾಲಯ ಇದ್ದು ಸ್ವಚ್ಛತೆ ಇಲ್ಲದೆ ಗಬ್ಬು ನಾರುತ್ತಿವೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಇತ್ತ‌ ಗಮನ ಹರಿಸಬೇಕು ಎಂದು ಗ್ರಾಮದ‌ ಮುಖಂಡ ವಿರೂಪಾಕ್ಷ ಒತ್ತಾಯಿಸಿದ್ದಾರೆ.
ಉದುರುತ್ತಿರುವ ಚಾವಣಿ ಕಾಂಕ್ರೀಟ್‌
ಕೆ.ಆರ್.ಪೇಟೆ ತಾಲ್ಲೂಕಿನ ಕಿರಿಯ ಹಿರಿಯ ಪ್ರೌಢಶಾಲೆಗಳು ಸರ್ಕಾರಿ ಕಟ್ಟಡದಲ್ಲಿ ನಡೆಯುತ್ತಿವೆಯಾದರೂ ಕೊಠಡಿಗಳು ಸಣ್ಣಪುಟ್ಟ ದುರಸ್ತಿ ಕಾಣಬೇಕಿವೆ. ಕೆಲವೆಡೆ ಶಿಥಿಲಾವಸ್ಥೆಯಲ್ಲಿವೆ. ಹೆಂಚುಗಳ ಚಾವಣಿ ಒಡೆದಿವೆ ತೆಂಡೇಕೆರೆ ಹಿರಿಯ ಪ್ರಾಧಮಿಕ ಶಾಲೆಯಲ್ಲಿ ಕೊಠಡಿಗಳ ಚಾವಣಿಯ ಕಾಂಕ್ರೀಟ್ ಉದುರಿಬಿದ್ದು ಕಟ್ಟಡ ಹಾಳಾಗಿದೆ. ಹಾಳಾಗಿರುವ ನಾಲ್ಕು ಕೊಠಡಿ ಕಟ್ಟಡವನ್ನು ತೆರವುಗೊಳಿಸುವ ಬದಲು ಅದನ್ನೇ ದುರಸ್ತಿಗೊಳಿಸಲಾಗಿದೆ. ಶಿಕ್ಷಣ ಇಲಾಖೆ ಎಚ್ಚೆತ್ತು ಅಂಥ ಕೊಠಡಿಗಳಲ್ಲಿನ ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕ್ರಮವಹಿಸಿದೆ. ಬಹುತೇಕ ಶಾಲೆಗಳಲ್ಲಿ ಶೌಚಾಲಯ ಕೊರತೆಯಿದ್ದು ಬಗೆಹರಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT