ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ ಬಳಿ ನದಿಯಲ್ಲಿ ಕೊಚ್ಚಿ ಹೋದ ಯುವಕ: ಮಲೆನಾಡಿನಲ್ಲೂ ಮಳೆ ಅಬ್ಬರ

Last Updated 2 ಮಾರ್ಚ್ 2020, 19:49 IST
ಅಕ್ಷರ ಗಾತ್ರ
ADVERTISEMENT
""

ಮಂಡ್ಯ:‌ ಶ್ರೀರಂಗಪಟ್ಟಣ ಬಳಿ ಹರಿಯುವ ಲೋಕಪಾವನಿ ನದಿಗೆ, ಎತ್ತುಗಳ ಮೈ ತೊಳೆಯಲೆಂದು ತೆರಳಿದ್ದ ಯುವಕ ಸೋಮವಾರ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ಬಾಬುರಾಯನಕೊಪ್ಪಲು ಗ್ರಾಮದ ವಕೀಲ ಶೇಷೇಗೌಡ ಅವರ ಮಗ ಸೋಮೇಶ್ವರ (20) ನೀರುಪಾಲಾದ ಯುವ ರೈತ. ಜಿಲ್ಲೆಯ ವಿವಿಧೆಡೆ ಭಾನುವಾರ ರಾತ್ರಿ ಮತ್ತು ಸೋಮವಾರ ಬೆಳಿಗ್ಗೆ ಸುರಿದ ಭಾರಿ ಮಳೆಯಿಂದಾಗಿ, ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿತ್ತು.

ಬೆಳಿಗ್ಗೆ 10 ಗಂಟೆ ಸುಮಾರಿಗೆ ಸೋಮೇಶ್ವರ ಹಾಗೂ ಅವರ ಚಿಕ್ಕಪ್ಪನ ಮಗ ಶಿವು ಇಬ್ಬರೂ ಎತ್ತಿನಗಾಡಿಯೊಂದಿಗೆ ನದಿಗೆ ತೆರಳಿದ್ದರು. ನೀರಿನ ಮಟ್ಟದಲ್ಲಿ ಹೆಚ್ಚಳವಾಗಿದ್ದರೂ ಅವರು ಗಾಡಿಯನ್ನು ನದಿಗೆ ಇಳಿಸಿದ್ದಾರೆ. ಈ ವೇಳೆ, ಎತ್ತುಗಳೊಂದಿಗೆ ನೀರಿನ ಸೆಳೆತಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ.

ಸೋಮೇಶ್ವರ

ಸೆಳೆತ ಹೆಚ್ಚುತ್ತಿದ್ದಂತೆ ಸೋಮೇಶ್ವರ ನೀರಿನಲ್ಲಿ ಮುಳುಗಿದ್ದಾರೆ. ಇದನ್ನು ಕಂಡ ಶಿವು, ಕೂಡಲೇ ಹೊರಗೆ ಜಿಗಿದಿದ್ದು ಸಹಾಯಕ್ಕೆ ಕೂಗಿದ್ದಾರೆ. ಅಕ್ಕಪಕ್ಕದಲ್ಲಿ ಯಾರೂ ಇಲ್ಲದ ಕಾರಣ ಸಹಾಯ ಸಿಕ್ಕಿಲ್ಲ.

ರಾಷ್ಟ್ರೀಯ ಹೆದ್ದಾರಿಗೆ ಬಂದು, ಜನರನ್ನು ಕರೆದೊಯ್ಯುವ ವೇಳೆಗೆ ಸೋಮೇಶ್ವರ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಸ್ಥಳೀಯ ಈಜುಗಾರರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪಟ್ಟಣ ಠಾಣೆ ಪೊಲೀಸರು ಯುವಕನಿಗಾಗಿ ಶೋಧ ಮುಂದುವರಿಸಿದ್ದಾರೆ.

ಮಂಡ್ಯದಲ್ಲಿ ರಾತ್ರಿಯಿಡೀ ಮಳೆ: ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳಲ್ಲಿ ಸೋಮವಾರ ಮಳೆಯಾಗಿದೆ.

ಮಂಡ್ಯದಲ್ಲಿ ರಾತ್ರಿಯಿಡೀ ಸುರಿದ ಮಳೆ
ಮೈಸೂರು: ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳಲ್ಲಿ ಸೋಮವಾರ ಮಳೆಯಾಗಿದೆ.

ಮೈಸೂರಿನ ಎಚ್.ಡಿ.ಕೋಟೆ, ಪಿರಿಯಾಪ‍ಟ್ಟಣ, ನಂಜನಗೂಡು, ತಿ.ನರಸೀಪುರ, ಕೆ.ಆರ್.ನಗರ ಭಾಗಗಳಲ್ಲಿ, ಕೊಡಗು ಜಿಲ್ಲೆಯ ಭಾಗಮಂಡಲ, ತಲಕಾವೇರಿ, ನಾಪೋಕ್ಲು, ಕಕ್ಕಬ್ಬೆ, ಪಾರಾಣೆ, ಅಪ್ಪಂಗಳ ಹಾಗೂ ಚೇರಂಬಾಣೆ ಸುತ್ತಮುತ್ತ, ಹಾಸನ ಜಿಲ್ಲೆಯ ಸಕಲೇಶಪುರ, ಕೊಣನೂರು, ಸಕಲೇಶಪುರ ಭಾಗಗಳಲ್ಲಿ ಮಳೆಯಾಗಿದೆ.

ಮಂಡ್ಯದಲ್ಲಿ ಭಾನುವಾರ ಮಧ್ಯರಾತ್ರಿ ಆರಂಭವಾದ ಮಳೆ ಸೋಮವಾರ 8.30ರವರೆಗೂ ಸುರಿಯಿತು. ಮಳವಳ್ಳಿ, ಕೆ.ಆರ್‌.ಪೇಟೆ, ಮದ್ದೂರು, ಪಾಂಡವಪುರ ತಾಲ್ಲೂಕಿನಲ್ಲೂ ಮಳೆಯಾಗಿದೆ.

ಇಂದು ಮಳೆ?
ಬೆಂಗಳೂರು: ರಾಜ್ಯದ ಕರಾವಳಿ ಭಾಗ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಮಾರ್ಚ್‌ 4ರವರೆಗೆ ಗುಡುಗು ಸಹಿತ ಸಾಧಾರಣ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಹುತೇಕ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಬಹುದು.

‘ಸ್ಮಾರ್ಟ್‌ ಸಿಟಿ’ಗೆ ತಂಪೆರೆದ ಮಳೆ
ಶಿವಮೊಗ್ಗ: ಬೇಸಿಗೆ ಆರಂಭದ ಮೊದಲ ಮಳೆಗೆ ಸೋಮವಾರ ಶಿವಮೊಗ್ಗ ನಗರ ತಂಪಾಯಿತು.

‘ಸ್ಮಾರ್ಟ್‌ಸಿಟಿ’ ಕಾಮಗಾರಿಗಳು ಆರಂಭವಾದ ನಂತರ ದೂಳುಮಯವಾಗಿದ್ದ ನಗರದ ರಸ್ತೆಗಳು ಸಂಜೆ ಅರ್ಧ ತಾಸು ಸುರಿದ ಸಾಧಾರಣ ಮಳೆಗೆ ಮೈಕೊಡವಿಕೊಂಡವು. ಬಿಸಿಲ ಧಗೆಗೆ ಬಸವಳಿದಿದ್ದ ನಾಗರಿಕರು ನೆಮ್ಮದಿಯ ನಿಟ್ಟುಸಿರುಬಿಟ್ಟರು.

ಕೆಲವು ಗ್ರಾಮೀಣಪ್ರದೇಶಗಳಲ್ಲೂತುಂತುರು ಮಳೆಯಾಗಿದೆ. ಸಾಗರ, ಹೊಸನಗರತಾಲ್ಲೂಕಿನ ಕೆಲವೆಡೆ ಮೋಡ ಕವಿದ ವಾತಾವರಣವಿತ್ತು.

ದಾವಣಗೆರೆ ನಗರದಲ್ಲಿ ಭಾನುವಾರ ತಡರಾತ್ರಿ ಜಿಟಿ ಜಿಟಿ ಮಳೆ ಸುರಿಯಿತು. ವರ್ಷದ ಮೊದಲ ಮಳೆ ಇದಾಗಿದ್ದು, ಬಿಸಿಲಿನ ತಾಪದಿಂದ ನಲುಗಿದ್ದ ಜನರಿಗೆ ತುಸು ನೆಮ್ಮದಿ ತಂದಿತು.

ಮಲೇಬೆನ್ನೂರು ಹೋಬಳಿ ವ್ಯಾಪ್ತಿಯಲ್ಲಿ ನಾಲ್ಕು ಗಂಟೆಗೂ ಹೆಚ್ಚು ಸಮಯ ಹದ ಮಳೆ ಸುರಿಯಿತು.

ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಮಳೆ ಬಂದಿದ್ದರಿಂದ ರೈತರಿಗೆ ಸ್ವಲ್ಪ ನೆಮ್ಮದಿ ಮೂಡಿಸಿದೆ. ಪಟ್ಟಣದ ಬಸವೇಶ್ವರ ದೇವಾಲಯದ ವಾಣಿಜ್ಯ ಮಳಿಗೆಯ ಚಾವಣಿ ಕುಸಿದು ಬಿದ್ದು ಹಾನಿಯಾಗಿದೆ. ಆದರೆ ಯಾರಿಗೂ ಅಪಾಯ ಸಂಭವಿಸಿಲ್ಲ.

ಚನ್ನಗಿರಿ ಪಟ್ಟಣ ಸೇರಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ರಭಸದ ಮಳೆಯಾಗಿದೆ.

ಭರಮಸಾಗರ ಪಟ್ಟಣ ಮತ್ತು ಸುತ್ತಮುತ್ತಲ ಗ್ರಾಮದಲ್ಲಿ ಭಾನುವಾರ ತಡರಾತ್ರಿ ಆರಂಭವಾದ ಗುಡುಗು ಸಹಿತ ತುಂತುರು ಮಳೆ ಸೋಮವಾರ ಮುಂಜಾನೆ 4ರ ವರೆಗೆ ಸುರಿಯಿತು.

ಮಂಗಳೂರು/ ಉಡುಪಿ: ಬಿಸಿಲ ಝಳ ದಿಂದ ತತ್ತರಿಸುತ್ತಿದ್ದ ಕರಾವಳಿಯಲ್ಲಿ ಸೋಮವಾರ ಬೆಳಗಿನ ಜಾವ ಜೋರಾಗಿ ಸುರಿದ ಮಳೆ ಇಳೆಗೆ ತಂಪೆರೆಯಿತು. ಭಾನುವಾರವೂ ವಿಪರೀತ ಸೆಖೆಯ ವಾತಾವರಣ ಇತ್ತು. ಸೋಮವಾರ ಬೆಳಗ್ಗಿನ ಜಾವ 3 ಗಂಟೆಯ ಸುಮಾರಿಗೆ ಬಿರುಸಾಗಿ ಮಳೆ ಸುರಿಯಿತು.

(ಶಿವಮೊಗ್ಗ): ಬೇಸಿಗೆ ಮೊದಲ ಮಳೆಗೆ ಸೋಮವಾರ ಶಿವಮೊಗ್ಗ ತಂಪಾಯಿತು.ಮಲೆಬೆನ್ನೂರು, ಹೊಸ ನಗರ, ದಾವಣಗೆರೆ ನಗರದಲ್ಲೂ ಮಳೆಯಾಗಿದೆ. ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಮಳೆ ಬಂದಿದ್ದರಿಂದ ರೈತರಿಗೆ ಸ್ವಲ್ಪ ನೆಮ್ಮದಿ ಮೂಡಿಸಿದೆ.

(ಹುಬ್ಬಳ್ಳಿ): ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿನ ಹಲವೆಡೆ ಸೋಮವಾರ ಅರ್ಧಗಂಟೆ ರಭಸದ ಮಳೆಯಾಗಿದೆ. ಬೆಳಗಾವಿಯ ಹಿರೇ ಬಾಗೇವಾಡಿ ಹಾಗೂ ಖಾನಾಪುರ ಮತ್ತು ಹಾವೇರಿಯ ಹಾನಗಲ್‌ ಹಾಗೂ ಅಕ್ಕಿಆಲೂರಿನಲ್ಲಿ ತುಂತುರು ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT