ಸೋಮವಾರ, ಆಗಸ್ಟ್ 8, 2022
21 °C
ನಾಗತಿಹಳ್ಳಿ ಸಂಸ್ಕೃತಿ ಹಬ್ಬ: ಪಂಚಾಯತ್‌ ರಾಜ್‌ ಆಯುಕ್ತಾಲಯದ ನಿರ್ದೇಶಕ ಕೆ.ಯಾಲಕ್ಕಿಗೌಡ

ಸಾಧನೆ: ಮನುಷ್ಯನಿಗೆ ಸ್ಫೂರ್ತಿ ಅಗತ್ಯ: ಕೆ.ಯಾಲಕ್ಕಿಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಗಮಂಗಲ: ಪ್ರತಿಯೊಬ್ಬ ಮನುಷ್ಯ ತನ್ನಿಂದ ತಾನೇ ಅಥವಾ ಇತರರನ್ನು ನೋಡಿ ಸ್ಫೂರ್ತಿ ಪಡೆಯದ ಹೊರತು ಏನನ್ನು ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಪಂಚಾಯತ್‌ ರಾಜ್‌ ಆಯುಕ್ತಾಲಯದ ನಿರ್ದೇಶಕ ಕೆ.ಯಾಲಕ್ಕಿಗೌಡ ಹೇಳಿದರು.

ತಾಲ್ಲೂಕಿನ ನಾಗತಿಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ ನಾಗತಿಹಳ್ಳಿ ಸಂಸ್ಕೃತಿ ಹಬ್ಬದ 17ನೇ ವಾರ್ಷಿಕೋತ್ಸವದಲ್ಲಿ ಗ್ರಾಮ ಮತ್ತು ರೈತರ ಅಭಿವೃದ್ಧಿಗೆ ಇಲಾಖೆಯಿಂದ ಸಿಗುವ ಸೌಲಭ್ಯಗಳೇನು? ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಲು ರೈತರು ಅನುಸರಿಸಬೇಕಾದ ವಿಧಾನಗಳು ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ‘ಓದು ಒಕ್ಕಾಲು ಬುದ್ಧಿ ಮುಕ್ಕಲು’ ಎಂಬ ಗಾದೆಯಂತೆ ಶಿಕ್ಷಣ ಪಡೆದವರು, ಪಡೆಯದವರು ಸಹ ಜೀವನ ಕೌಶಲ ಬೆಳೆಸಿಕೊಳ್ಳುವುದು ಮುಖ್ಯವಾಗಿದೆ. ಗ್ರಾಮೀಣ ಭಾಗದಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವ ಕೆಲಸ ಮಾಡಬೇಕಾಗುತ್ತದೆ. ಗ್ರಾಮದಲ್ಲಿ ನಿರ್ಮಾಣವಾಗಿರುವ ಶಾಲೆ, ಗ್ರಂಥಾಲಯ, ರಂಗಮಂದಿರ ಸೇರಿದಂತೆ ವಿವಿಧ ಸವಲತ್ತುಗಳನ್ನು ನೋಡಿದಾಗ ನಿರ್ದಿಷ್ಟವಾದ ಗುರಿಯನ್ನು ಹೊಂದಿ ಸ್ಥಾಪನೆಯಾಗಿರುವುದನ್ನು ನೋಡಬಹುದು ಎಂದರು.

ಗ್ರಾಮದಲ್ಲಿರುವ ಜನರು ಸರ್ಕಾರದಿಂದ ಸವಲತ್ತುಗಳನ್ನು ಸೂಕ್ತವಾಗಿ ಬಳಸಿಕೊಂಡು ಆರ್ಥಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಅವಕಾಶವಿದೆ. ರೈತರಿಗೆ ಅಗತ್ಯವಾದ ಕೃಷಿ ಹೊಂಡ, ತೋಟಗಾರಿಕೆ, ಜಮೀನು ಹದಗೊಳಿಸುವುದು, ಮೀನುಗಾರಿಕೆ ಸೇರಿದಂತೆ ವಿವಿಧ ಯೋಜನೆಗಳನ್ನು ಗ್ರಾ.ಪಂ ವತಿಯಿಂದ ನೀಡಲಾಗುತ್ತದೆ. ಬಹುಬೆಳೆಯನ್ನು ಬೆಳೆಯುವ ಪದ್ಧತಿಯನ್ನು ಅನುಸರಿಸಿದ ಯಾವುದೇ ರೈತರು ನಷ್ಟ ಹೊಂದಿಲ್ಲ. ರೈತರಿಗೆ ಬೇಕಾದ ಸಾಮೂಹಿಕ ಸವಲತ್ತು ಒದಗಿಸಲು ಗ್ರಾ.ಪಂ ಸಿದ್ಧವಿದೆ. ಜನರು ರಸ್ತೆಗಳಲ್ಲಿ ಒಕ್ಕಣೆ ಮಾಡಬಾರದು. ಅಲ್ಲದೇ ಗ್ರಾಮೀಣ ಭಾಗದಲ್ಲಿ ಮದುವೆ ಸೇರಿದಂತೆ ನಡೆಯುವ ವಿವಿಧ ಕಾರ್ಯಕ್ರಮಗಳು ಸರಳವಾಗಬೇಕಾಗಿದ್ದು, ಪ್ರತಿಷ್ಠೆಯ ದ್ಯೋತಕವಾಗಬಾರದು ಎಂದರು.

ಸಂವಾದ ಕಾರ್ಯಕ್ರಮದಲ್ಲಿ ಗ್ರಾಮೀಣ ಮಹಿಳೆಯ ಸಬಲೀಕರಣದ ಸಾಧ್ಯತೆಗಳು ಕುರಿತು ಮಾತನಾಡಿದ ನೀಲಾ ಶಿವಮೂರ್ತಿ ಅವರು, ಮಹಿಳೆಯರು ಸಿಗುವ ಸವಲತ್ತುಗಳನ್ನು ಪಡೆದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳುವ ಮೂಲಕ ಹಿಂದುಳಿದುಕೊಳ್ಳುತ್ತಾರೆ.‌ ಪ್ರತಿಯೊಬ್ಬ ಮಹಿಳೆಯರಲ್ಲೂ ವಿಶಿಷ್ಟ ಕೌಶಲ ಮತ್ತು ಸಾಮರ್ಥ್ಯ ಇದ್ದು, ಅದನ್ನು ಹೊರತರುವ ಕೆಲಸ ಮಾಡಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂವಾದದಲ್ಲಿ ಸ್ವಯಂ ಉದ್ಯೋಗ, ಸರ್ಕಾರಿ ಯೋಜನೆಗಳು ಮತ್ತು ಸವಲತ್ತುಗಳು, ಮಹಿಳಾ ಸಬಲೀಕರಣದ ಬಗ್ಗೆ ಜನರು ಮಾಹಿತಿ ಪಡೆದರು. ಕಾರ್ಯಕ್ರಮದ ನಂತರ ಜಿ.ಪಂ ಸಿಇಒ‌ ಕೆ.ಯಾಲಕ್ಕಿಗೌಡ ಮತ್ತು ನೀಲಾ ಮೂರ್ತಿ ಅವರನ್ನು ಸನ್ಮಾನಿಸಲಾಯಿತು.

ಲೇಖಕ ಚಂದ್ರೇಗೌಡ, ಪಿಡಿಒ ಯೋಗಾನಂದ, ಗ್ರಾ.ಪಂ ಸದಸ್ಯರಾದ ನಾಗೇಶ್, ಮೂರ್ತಿ, ಜಯಶೀಲನಾಗಣ್ಣ ಮತ್ತು ಗ್ರಾಮಸ್ಥರು ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು