ವೃತ್ತಿ ರಂಗಭೂಮಿಯ ಆರಾಧಕ ಆರಾಧ್ಯ!

7
ಗುಬ್ಬಿ ಕಂಪನೆಯಲ್ಲಿ ಕೆಲಸ ಮಾಡಿದ ಅನುಭವ, ಚಿತ್ರಕಲೆಯಲ್ಲೂ ಸಾಧನೆ

ವೃತ್ತಿ ರಂಗಭೂಮಿಯ ಆರಾಧಕ ಆರಾಧ್ಯ!

Published:
Updated:
Deccan Herald

ಮಂಡ್ಯ: ಚನ್ನಬಸವೇಶ್ವರ ನಾಟಕ ಕಂಪನಿ (ಗುಬ್ಬಿ)ಯಲ್ಲಿ ಹಾಸ್ಯನಟ ನರಸಿಂಹರಾಜು ಅವರ ಜೊತೆ ಅಭಿನಯಿಸಿರುವ ಚಂದ್ರಶೇಖರ ಆರಾಧ್ಯ ವೃತ್ತಿ ರಂಗಭೂಮಿಯಲ್ಲಿ ದೊಡ್ಡ ಹೆಸರು ಗಳಿಸಿದ್ದಾರೆ. ನಟರಾಗಿ, ನಿರ್ದೇಶಕರಾಗಿ, ತಂತ್ರಜ್ಞರಾಗಿ, ಪರಿಕರ ತಯಾರಿಕೆ, ವಸ್ತ್ರವಿನ್ಯಾಸಕನಾಗಿ ರಂಗಕಲೆಯ ಎಲ್ಲಾ ಆಯಾಮಗಳಲ್ಲಿ ಕೃಷಿ ಮಾಡಿರುವ ಅವರು ಸಾಂಸ್ಕೃತಿಕ ಲೋಕದ ಸಾಧಕರು ಎನಿಸಿದ್ದಾರೆ.

ತಾಲ್ಲೂಕಿನ ಗುಡಿಗೇನಹಳ್ಳಿ ಗ್ರಾಮದ ರೈತಾಪಿ ಕುಟುಂಬದಲ್ಲಿ ಜನಿಸಿದ ಆರಾಧ್ಯರು ಚಿಕ್ಕ ವಯಸ್ಸಿನಲ್ಲೇ ರಂಗಕಲೆಯತ್ತ ಹೆಜ್ಜೆ ಇಟ್ಟರು. ಬಡತನದಲ್ಲಿ ಬದುಕಿ ಕಲಾ ಕ್ಷೇತ್ರದಲ್ಲಿ ಬೆಳಕಾಗಿರುವ ಅವರು ಯುವ ಪೀಳಿಗೆಯ ಮಾದರಿಯಾಗಿದ್ದಾರೆ. ನಟನಾಗಿ, ನಿರ್ದೇಶಕನಾಗಿ ಸಕ್ಕರೆ ಜಿಲ್ಲೆಯಲ್ಲಿ ಹಲವು ನಾಟಕ ಪ್ರದರ್ಶಿಸಿದ್ದಾರೆ. ರತ್ನ ಮಾಂಗಲ್ಯ, ಚಿನ್ನದ ಗೊಂಬೆ, ಬಸ್‌ ಕಂಡಕ್ಟರ್‌, ಗೌಡ ಮೆಚ್ಚಿದ ಹುಡುಗಿ, ಸೂಳೆ ಸಂಪತ್ತು ಮುಂತಾದವು ಅವರ ಜನಪ್ರಿಯ ನಾಟಕಗಳಾಗಿವೆ.

ಆರಾಧ್ಯರು ನಿರ್ದೇಶಿಸಿ, ನಟಿಸಿದ ‘ವರಭ್ರಷ್ಟ ಸುಯೋಧನ’ ನಾಟಕ ರಾಜ್ಯದಾದ್ಯಂತ ಪ್ರಸಿದ್ಧಿ ಪಡೆದಿದೆ. ಜೊತೆಗೆ ಶ್ರೇಷ್ಠ ನಟ, ಶ್ರೇಷ್ಠ ನಿರ್ದೇಶಕ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶದ ಕಲಾಸಕ್ತರನ್ನು ಗುರುತಿಸಿ ಅವರಲ್ಲಿ ನಾಟಕದ ಅಭಿರುಚಿ ತುಂಬಿ ಅವರಿಂದ ಹಲವು ನಾಟಕ ಪ್ರದರ್ಶಿಸಿದ ಕೀರ್ತಿ ಅವರ ಮೇಲಿದೆ. ಮೈಸೂರಿನ ರಂಗಾಯಣ, ಮಂಡ್ಯದ ಜನದನಿ ಮುಂತಾದ ಸಂಘಟನೆಗಳ ಜೊತೆ ಗುರುತಿಸಿಕೊಂಡಿರುವ ಅವರು ಟಿಪ್ಪುವಿನ ಕನಸುಗಳು, ಕೈಲಾಸದ ಹಾದಿಯಲ್ಲಿ, ಯಯಾತಿ, ಚಂದ್ರಕಾಂತ ಕುಸುನೂರು ಅವರ ಧಂಡಿ ಮುಂತಾದ ರಂಗಪ್ರಯೋಗಗಳಲ್ಲಿ ಪಾತ್ರ ಮಾಡಿದ್ದಾರೆ.

ಹಸೆ ಜಗಲಿ ಕಲಾವಿದ: ಚಂದ್ರಶೇಖರ ಆರಾಧ್ಯ ‘ಹಸೆ ಜಗಲಿ’ ಕಲಾವಿದರೂ ಆಗಿದ್ದಾರೆ. ಹಲವು ತೈಲಚಿತ್ರ, ಶಿವ ಪಾರ್ವತಿಯರ ಚಿತ್ರ, ಯಡಿಯೂರು ಸಿದ್ಧಲಿಂಗೇಶ್ವರ ಸ್ವಾಮಿ, ಗಣೇಶ, ಸರಸ್ವತಿ ಚಿತ್ರಗಳನ್ನು ಬಿಡಿಸಿ ಕಲಾಕೃತಿಗಳಲ್ಲಿ ಭಕ್ತಿ ಭಾವ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ. ಮದುವೆ ಮನೆಗಳಲ್ಲಿ ಗೋಡೆಯ ಮೇಲೆ ಕಲಾತ್ಮಕವಾಗಿ ವಧು–ವರರ ಹೆಸರು ಬರೆದಿದ್ದಾರೆ. ‘ಹಸೆ ಜಗಲಿ ಕಲೆ ಈಗ ನೇಪಥ್ಯಕ್ಕೆ ಸರಿದಿದೆ. ಆದರೆ ಕೆಲವು ಸಾಂಪ್ರದಾಯಿಕ ಕುಟುಂಬಸ್ಥರು ನನ್ನನ್ನು ಮನೆಗೆ ಕರಿಸಿ ಈಗಲೂ ಗೋಡೆಯ ಮೇಲೆ ಗಂಡು– ಹೆಣ್ಣಿನ ಹೆಸರು ಬರೆಸುತ್ತಾರೆ’ ಎನ್ನುತ್ತಾರೆ ಆರಾಧ್ಯ.

ಗೋಡೆ ಬರಹ: ಚಿತ್ರಕಲೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಆರಾಧ್ಯರು ಜಿಲ್ಲೆಯಾದ್ಯಂತ ಗೋಡೆ ಬರಹದಲ್ಲಿ ತೊಡಗಿದ್ದಾರೆ. ಸರ್ಕಾರದ ಹಲವು ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಬರಹ ರಚಿಸಿದ್ದಾರೆ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸೇರಿ ವಿವಿಧ ಇಲಾಖೆಗಳ ಯೋಜನೆಗಳ ಬಗ್ಗೆ ಪ್ರಚಾರ ಮಾಡಿದ್ದಾರೆ.

ಜಾನಪದ ಲೋಕದ ಹೆಸರು ಮಾಡಿರುವ ಅವರು ವೀರಭದ್ರ ಕುಣಿತಕ್ಕೂ ಹೆಜ್ಜೆ ಹಾಕಿದ್ದಾರೆ. ‘ಕರ್ನಾಟಕ ವೈಭವ’ ಧ್ವನಿ ಬೆಳಕು ಕಾರ್ಯಕ್ರಮದಲ್ಲೂ ಭಾಗವಹಿಸಿದ್ದಾರೆ. ಆರಾಧ್ಯರ ಕಲಾ ಸೇವೆಗೆ ಈವರೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಅಕಾಡೆಮಿ ಗೌರವ, ಕಾವ್ಯ ಕುಲರತ್ನ, ಕಲಾ ಕಿರಣ ಬಿರುದು ಸಂದಿವೆ. 2011ರಲ್ಲಿ ಜಿಲ್ಲಾ ವಚನೋತ್ಸವದ ಅಧ್ಯಕ್ಷತೆಯನ್ನೂ ವಹಿಸಿದ್ದಾರೆ. ಅತ್ಯಂತ ಕಡಿಮೆ ಖರ್ಚಿನಲ್ಲಿ ನಾಟಕ ಪ್ರದರ್ಶಿಸುವ ಚಂದ್ರಶೇಖರ ಆರಾಧ್ಯರು ಸಕ್ಕರೆ ಜಿಲ್ಲೆಯ ಅಪರೂಪದ ಕಲಾವಿದರಾಗಿದ್ದಾರೆ.

ಗುಬ್ಬಿ ಕಂಪನಿಯಲ್ಲಿದ್ದಾಗ ಹಿರಿಯ ನಟ ನರಸಿಂಹರಾಜು ಅವರ ಒಡನಾಟವನ್ನು ಎಂದೆಂದಿಗೂ ಮರೆಯಲಾರೆ. ₹ 1ಕ್ಕೆ 16 ಇಡ್ಲಿ ಕೊಂಡು ತಿನ್ನುತ್ತಿದ್ದೆವು. ರಂಗದ ಮೇಲೆ ಸದಾ ಪ್ರೇಕ್ಷಕರನ್ನು ನಗಿಸುತ್ತಿದ್ದ ಅವರು ರಂಗದ ಹಿಂದೆ ಬಹಳ ಗಂಭೀರವಾಗಿ ಆಲೋಚಿಸುತ್ತಿದ್ದರು

-ಚಂದ್ರಶೇಖರ ಆರಾಧ್ಯ, ರಂಗಭೂಮಿ ಕಲಾವಿದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !