ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಗೂಡು: ನಿಷ್ಪ್ರಯೋಜಕವಾದ ಶುದ್ಧ ನೀರಿನ ಘಟಕ

Published 19 ಜೂನ್ 2023, 14:28 IST
Last Updated 19 ಜೂನ್ 2023, 14:28 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ಆಲಗೂಡು ಗ್ರಾಮದ ದಲಿತ ಕಾಲೊನಿಯಲ್ಲಿ ಮೂರು ವರ್ಷಗಳ ಹಿಂದೆ ಸ್ಥಾಪಿಸಿರುವ ಶುದ್ಧ ನೀರಿನ ಘಟಕ ಉದ್ಘಾಟನೆ ಆಗದೆ ನಿಷ್ಪ್ರಯೋಜಕವಾಗಿದೆ.

ಆಲಗೂಡು ಗ್ರಾಮದ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ₹5 ಲಕ್ಷಕ್ಕೂ ಹೆಚ್ಚು ವೆಚ್ಚದಲ್ಲಿ ಈ ನೀರಿನ ಘಟಕವನ್ನು ಸ್ಥಾಪಿಸಲಾಗಿದೆ. ಅಗತ್ಯ ಯಂತ್ರೋಪಕರಣಗಳ ಜೋಡಣೆ ಕೆಲಸವೂ ಮುಗಿದಿದೆ. ಆದರೂ ಇದು ಜನರ ಸೇವೆಗೆ ಲಭ್ಯವಾಗಿಲ್ಲ. ಜನರು ಇದರಿಂದ ಒಂದು ಬಿಂದಿಗೆ ನೀರನ್ನೂ ಪಡೆದಿಲ್ಲ. ಬಹಳ ದಿನಗಳಿಂದ ಬಳಕೆ ಆಗದ ಕಾರಣ ಯಂತ್ರಗಳು ತುಕ್ಕು ಹಿಡಿಯುತ್ತಿವೆ. ಗಾಜುಗಳು ಕೂಡ ಒಡೆದಿವೆ. ಈ ಘಟಕದ ಒಳಗೆ ಜೂಜಾಟ, ಮದ್ಯ ಸೇವನೆಯಂತಹ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ.

‘ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಜನರಿಗೆ ಶುದ್ಧ ನೀರು ಕೊಡಿಸಿ ಎಂದು ಗ್ರಾಮ ಪಂಚಾಯಿತಿ ಮತ್ತು ಗ್ರಾಮೀಣ ಕುಡಿಯುವ ನೀರು ಯೋಜನೆಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ ಯಾರೊಬ್ಬರೂ ಇತ್ತ ಗಮನ ಹರಿಸುತ್ತಿಲ್ಲ. ಈ ನೀರಿನ ಘಟಕದ ಸ್ಥಾಪಿಸಿದ ಗುತ್ತಿಗೆದಾರರು ಗ್ರಾಮ ಪಂಚಾಯಿತಿಗೆ ಇನ್ನೂ ಹಸ್ತಾಂತರ ಮಾಡಿಲ್ಲ ಎಂದು ಸ್ಥಳೀಯ ಜನಪ್ರತಿನಿಧಿಗಳು ಸಬೂಬು ಹೇಳುತ್ತಿದ್ದಾರೆ’ ಎಂದು ಗ್ರಾಮದ ಮುಖಂಡರಾದ ಗಾರೆ ಸಿದ್ದಯ್ಯ, ಕೆ. ಸಿದ್ದಲಿಂಗಯ್ಯ ಇತರರು ದೂರಿದ್ದಾರೆ.

‘ಆಲಗೂಡು ಗ್ರಾಮದ ದಲಿತ ಕಾಲೊನಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ತಾಂತ್ರಿಕ ತೊಂದರೆಯ ಕಾರಣಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಮಾಡಿಲ್ಲ ಎಂದು ತಿಳಿದು ಬಂದಿದೆ. ಮಂಗಳವಾರ ಬೆಳಿಗ್ಗೆ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಆದಷ್ಟು ಶೀಘ್ರ ಜನರಿಗೆ ಶುದ್ಧ ನೀರು ಕೊಡಿಸಲಾಗುತ್ತದೆ’ ಎಂದು ತಡಗವಾಡಿ ಗ್ರಾ.ಪಂ. ಅಧ್ಯಕ್ಷ ಜಿ.ಎನ್‌. ಮಧುಗೌಡ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT