ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬಿಗರ ಚೌಡಯ್ಯ ವಿಚಾರ ಇಂದಿಗೂ ಪ್ರಸ್ತುತ: ರವಿಕುಮಾರ್‌ಗೌಡ ಗಣಿಗ

Published 3 ಫೆಬ್ರುವರಿ 2024, 14:08 IST
Last Updated 3 ಫೆಬ್ರುವರಿ 2024, 14:08 IST
ಅಕ್ಷರ ಗಾತ್ರ

ಮಂಡ್ಯ: ‘ಬಸವಣ್ಣನ ಸಮಕಾಲಿನವರಾದ ಅಂಬಿಗರ ಚೌಡಯ್ಯ ಅವರು ನಿಷ್ಠೆಯಿಂದ ದೋಣಿ ನಡೆಸುವ ಕಾಯಕ ಮಾಡುತ್ತಿದ್ದರು, ಜೊತೆಗೆ ಸತ್ಯನಿಷ್ಠೆ ಮತ್ತು ನಂಬಿಕಸ್ಥರಾಗಿದ್ದರು’ ಎಂದು ಶಾಸಕ ಪಿ.ರವಿಕುಮಾರ್‌ಗೌಡ ಗಣಿಗ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ 2023-24ನೇ ಸಾಲಿನ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದದಲ್ಲಿ ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿರುವ ಸಣ್ಣ ಸಣ್ಣ ಸಮುದಾಯಗಳು ಆರ್ಥಿಕವಾಗಿ ಸಬಲವಾಗಬೇಕು. ನಗರದಲ್ಲಿ ಸಮುದಾಯ ಭವನವನ್ನು ಕಟ್ಟಲು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣ ಕಮಕನೂರು ಅವರು ₹10 ಲಕ್ಷ ನೀಡುವುದಾಗಿ ಹೇಳಿದ್ದು, ಸರ್ಕಾರದ ನಿಧಿಯಿಂದ ₹10 ಲಕ್ಷ ನೀಡುವುದರ ಜೊತೆಗೆ ವೈಯಕ್ತಿಕವಾಗಿ ₹1 ಲಕ್ಷ ನೀಡುತ್ತೇನೆ’ ಎಂದರು.

‘ಇಂದಿಗೂ ಅಂಬಿಗರ ಚೌಡಯ್ಯ ಪ್ರಸ್ತುತವಾಗುತ್ತಾರೆ, ಬಸವಣ್ಣನವರ ಸಮಕಾಲಿನವರಾದ ಅಂಬಿಗರ ಚೌಡಯ್ಯನವರು ಬಹಳ ನಿಷ್ಠೆಯಿಂದ ದೋಣಿ ನಡೆಸುವ ಕಾಯಕವನ್ನು ಮಾಡುತ್ತಿದ್ದರು. ಜನಸಾಮಾನ್ಯರು ಅಂಬಿಗ ಚೌಡಯ್ಯನವರ ಸನ್ಮಾರ್ಗದಲ್ಲಿ ನಡೆಯಬೇಕು’ ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಸದಸ್ಯರು ತಿಪ್ಪಣ್ಣ ಕಮಕನೂರು ಮಾತನಾಡಿ, ‘ಅಂಬಿಗರ ಚೌಡಯ್ಯ 12ನೇ ಶತಮಾನದಲ್ಲಿ ಜೀವಿಸಿದ್ದ ಶಿವಶರಣ ಹಾಗೂ ವಚನಕಾರರಾಗಿದ್ದರು. ಇವರು ವೃತ್ತಿಯಲ್ಲಿ ಅನುಭಾವಿ ಅಂಬಿಗರಾಗಿದ್ದರು. ಅಂದಿನ ಸಮಾಜದಲ್ಲಿದ್ದ ಧಾರ್ಮಿಕ ನೀತಿ, ನಿಯಮಗಳು, ಕಟ್ಟುಪಾಡುಗಳು, ಆಚಾರ ವಿಚಾರಗಳಲ್ಲಿ ಬಹಳಷ್ಟು ಮಾರ್ಪಾಡುಗಳನ್ನು ಅಂಬಿಗರ ಚೌಡಯ್ಯನವರ ವಚನದಲ್ಲಿ ಕಾಣಬಹುದು’ ಎಂದರು.

ವಿವಿಧ ಕ್ಷೇತ್ರದಲ್ಲಿ ಸೇವೆಸಲ್ಲಿಸುತ್ತಿರುವ ಬೆಸ್ತ, ಗಂಗಾಮತ ಸಮುದಾಯದ ಎಲ್.ಲಿಂಗರಾಜು (ಶಿಕ್ಷಣ ಕ್ಷೇತ್ರ), ಸಿದ್ದರಾಜು(ಪೂಜಾ ಕುಣಿತ), ಡಾ.ಜಯರಾಮು(ಸಮಾಜ ಸೇವಕರು), ಬೀಸುಬಲೆ ಮಹಾದೇವ(ಮೀನುಗಾರಿಕೆ) ಅವರಿಗೆ ಅಂಬಿಗರ ಚೌಡಯ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಜಿ.ಪಂ.ಸಿಇಒ ಶೇಖ್ ತನ್ವೀರ್‌ ಆಸೀಫ್‌, ತುಮಕೂರು ಜಿಲ್ಲೆಯ ವೇದವ್ಯಾಸ ಮಠದ ಬಸವಾನಂದ ಸ್ವಾಮೀಜಿ, ಎನ್.ರವಿಕುಮಾರ್, ಮೀನುಗಾರಿಕೆ ಅಧ್ಯಕ್ಷ ಮಂಜುನಾಥ್, ಮುಖಂಡ ಪ್ರಮೋದ್ ಮಧ್ವರಾಜ್, ಸಂದೇಶ್ ಭಾಗವಹಿಸಿದ್ದರು.

ಮೆರವಣಿಗೆಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಅಂಬಿಗರ ಚೌಡಯ್ಯ ಅವರ ಅಲಂಕೃತ ಭಾವಚಿತ್ರ ಮೆರವಣಿಗೆಗೆ ಜಿಲ್ಲಾಧಿಕಾರಿ ಕುಮಾರ ಅವರು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಅಂಬಿಗರ ಚೌಡಯ್ಯನವರು 12ನೇ ಶತಮಾನದ ಪ್ರಮುಖ ವಚನಗಾರರಾಗಿದ್ದು ಬಸವಣ್ಣನವರ ಜೊತೆಗೂಡಿ ವಚನ ಸಾಹಿತ್ಯ ರಚಿಸಿದ ಮಹಾಪುರಷರು ಇವರನ್ನು ಸ್ಮರಿಸುವ ಮೂಲಕ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎಲ್.ನಾಗರಾಜು ಜಿ.ಪಂ.ಸಿಇಒ ಶೇಖ್‌ ತನ್‌ವೀರ್ ಆಸಿಫ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT