ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಒತ್ತು: ಸಚಿವ ಕೆ.ಸಿ.ನಾರಾಯಣಗೌಡ

ಮದ್ದೂರಿನ ಶಿವಪುರದ ಧ್ವಜ ಸತ್ಯಾಗ್ರಹ ಸೌಧದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟನೆ
Last Updated 13 ಮಾರ್ಚ್ 2021, 3:28 IST
ಅಕ್ಷರ ಗಾತ್ರ

ಮದ್ದೂರು: ‘ಜಿಲ್ಲೆಯಲ್ಲಿ ಆಲೆಮನೆಗಳನ್ನು ಪುನಶ್ಚೇತನಗೊಳಿಸುವ ದೃಷ್ಟಿಯಿಂದ ಗಾಣ ನಡೆಸುವವರಿಗೆ ತಲಾ ₹25 ಲಕ್ಷ ಸಹಾಯ ಧನ ನೀಡಲು ಸರ್ಕಾರ ಮುಂದೆ ಬಂದಿದೆ’ ಎಂದು ‌ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.

ಶಿವಪುರದ ಸತ್ಯಾಗ್ರಹಸೌಧದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಮಾರಂಭವನ್ನು ಚರಕದಿಂದ ನೂಲು ತೆಗೆಯುವ ಮೂಲಕ ಶುಕ್ರವಾರ ಉದ್ಘಾಟಿಸಿದರು.

‘ದೇಶ ಸ್ವಾತಂತ್ರ್ಯ ಪಡೆಯಲು ಹಲವಾರು ಹೋರಾಟಗಾರರ ತ್ಯಾಗ ಬಲಿದಾನವಿದೆ. ಈ ಸಂದರ್ಭದಲ್ಲಿ ಅವರನ್ನು ಸ್ಮರಿಸೋಣ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಮಾರಂಭವೂ ದೇಶದ 75 ಸ್ಥಳಗಳಲ್ಲಿ ನಡೆಯುತ್ತಿದ್ದು, ಅದರಲ್ಲಿ ಮದ್ದೂರಿನ ಶಿವಪುರವೂ ಒಂದಾಗಿರುವುದು ಮಂಡ್ಯದವರಿಗೆ ಹೆಮ್ಮೆಯ ವಿಷಯ’ ಎಂದರು.

‘ಅಗ್ರೀ ಟೂರಿಸಂ ಮೂಲಕ ಕೃಷಿಗೆ, ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ಹಿರಿಯರು ಪಾಲ್ಗೊಂಡು ಒಂದು ಶಕ್ತಿಯನ್ನು ತುಂಬಿದ್ದಾರೆ. ಅವರ ಹೋರಾಟಕ್ಕೆ ಈ ದಿನ ಗೌರವ ಸಲ್ಲಿಸುವ ಕೆಲಸ ಆಗಿದೆ’ ಎಂದು ಹೇಳಿದರು.

ಶಾಸಕ ಡಿ.ಸಿ.ತಮ್ಮಣ್ಣ ಮಾತನಾಡಿ, ‘ಶಿವಪುರ ಧ್ವಜ ಸತ್ಯಾಗ್ರಹ ಸೌಧವು ಸ್ವಾತಂತ್ರ್ಯ ಸಂಗ್ರಾಮದ ಕುರುಹಾಗಿದ್ದು, ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಕಾಣದೆ ನೆನೆಗುದಿಗೆ ಬಿದ್ದಿರುವುದರಿಂದ ಹಲವು ಅವಶ್ಯಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು ಪುನಶ್ಚೇತನಕ್ಕೆ ರಾಜ್ಯ ಸರ್ಕಾರವು ಗಮನ ನೀಡಬೇಕು. ಅದಕ್ಕಾಗಿ ಕೂಡಲೇ ₹100 ಕೋಟಿ ಬಿಡುಗಡೆ ಮಾಡಬೇಕು’ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಎಸ್.ಅಶ್ವಥಿ ಮಾತನಾಡಿ, ‘ಈ ದಿನ ಮಂಡ್ಯಕ್ಕೆ ವಿಶೇಷ ದಿನ, ಏಕೆಂದರೆ ರಾಜ್ಯದ 3 ಜಿಲ್ಲೆಗಳಲ್ಲಿ ಶಿವಪುರವನ್ನು ಅಮೃತ ಮಹೋತ್ಸವಕ್ಕೆ ಆಯ್ಕೆ ಮಾಡಿಕೊಂಡಿದ್ದು ಹೆಮ್ಮೆ ವಿಚಾರ. ಶಿವಪುರ ಸತ್ಯಾಗ್ರಹದ ಆ ದಿನಗಳು ಇಂದು ಅನೇಕ ಯುವಕರಿಗೆ ಸ್ಫೂರ್ತಿಯಾಗಿದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ಹಾಗೂ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜಿಲ್ಲೆಯ 75 ಮಂದಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಂಡ್ಯ ಶಾಸಕ ಎಂ. ಶ್ರೀನಿವಾಸ್, ಜಿ.ಪಂ ಅಧ್ಯಕ್ಷೆ ನಾಗರತ್ನಸ್ವಾಮಿ, ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ, ಜಿ.ಪಂ ಉಪಾಧ್ಯಕ್ಷೆ ಗಾಯತ್ರಿ ರೇವಣ್ಣ, ಜಿ.ಪಂ ಸದಸ್ಯ ರಾಜೀವ್, ತಾ.ಪಂ ಅಧ್ಯಕ್ಷೆ ಜಯಲಕ್ಷ್ಮಮ್ಮ, ಉಪಾಧ್ಯಕ್ಷ ಬೆಕ್ಕಳಲೆ ರಘು, ಪುರಸಭಾ ಅಧ್ಯಕ್ಷ ಸುರೇಶ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ನ.ಲಿ. ಕೃಷ್ಣ, ಮನ್‌ಮುಲ್ ನಿರ್ದೇಶಕರಾದ ರೂಪಾ, ಸ್ವಾಮಿ, ಪುರಸಭಾ ಸದಸ್ಯರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅಶ್ವಿನಿ, ತಹಶೀಲ್ದಾರ್ ವಿಜಯ ಕುಮಾರ್, ಜಿ.ಪಂ ಸಿಇಒ ಜುಲ್ಫೀಕರ್ ಉಲ್ಲಾ, ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.

ಗಮನಸೆಳೆದ ಸ್ತಬ್ಧಚಿತ್ರ, ಸಿರಿಧಾನ್ಯ ರಂಗೋಲಿ: ಮಂಡ್ಯ ಜಿಲ್ಲಾ ಪಂಚಾಯಿತಿ ವತಿಯಿಂದ ಮಾಡಿದ್ದ ಸ್ತಬ್ಧಚಿತ್ರವು ಜನಮನ ಸೂರೆಗೊಂಡಿತು. ಸತ್ಯಾಗ್ರಹ ಸೌಧದ ದ್ವಾರದ ಮುಂದೆ ಕೃಷಿ ಇಲಾಖೆ ವತಿಯಿಂದ ಸಿರಿಧಾನ್ಯಗಳಿಂದ ಮಾಡಿದ್ದ ರಾಶಿ ಅಲಂಕಾರ ಜನರನ್ನು ಆಕರ್ಷಿಸಿದವು. ಡೊಳ್ಳುಕುಣಿತ, ಪೂಜಾ ಕುಣಿತ, ವೀರಗಾಸೆ ತಂಡಗಳ ಕಲಾವಿದರು ಗಣ್ಯರನ್ನು ವೇದಿಕೆಗೆ ಕರೆ ತಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT