ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ | ವಂಶಾಭಿವೃದ್ಧಿಗಾಗಿ ವಲಸೆ ಪಕ್ಷಿಗಳ ಆಗಮನ

ರಂಗನತಿಟ್ಟು ಪಕ್ಷಿಧಾಮದಲ್ಲಿ ಹಕ್ಕಿಗಳ ಕಲರವ; ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ
ಗಣಂಗೂರು ನಂಜೇಗೌಡ
Published 30 ನವೆಂಬರ್ 2023, 6:29 IST
Last Updated 30 ನವೆಂಬರ್ 2023, 6:29 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಚಳಿಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಪಟ್ಟಣ ಸಮೀಪದ ರಂಗನತಿಟ್ಟು ಪಕ್ಷಿಧಾಮಕ್ಕೆ ವಂಶಾಭಿವೃದ್ಧಿಗಾಗಿ ವಲಸೆ ಹಕ್ಕಿಗಳ ಆಗಮನ ಶುರುವಾಗಿದೆ.

ಪಕ್ಷಿಧಾಮಕ್ಕೆ ಪೆಲಿಕಾನ್‌ (ಹೆಜ್ಜಾರ್ಲೆ), ಸ್ಪೂನ್‌ ಬಿಲ್‌, ಯುರೇಶಿಯನ್‌ ಸ್ಪೂನ್‌ ಬಿಲ್‌, ಪೇಂಟೆಡ್‌ ಸ್ಟೋರ್ಕ್‌ ಪಕ್ಷಿಗಳು ಬರಲಾರಂಭಿಸಿವೆ. ಐನೂರಕ್ಕೂ ಹೆಚ್ಚು ಪೆಲಿಕಾನ್‌ಗಳು ಈಗಾಗಲೇ ಇಲ್ಲಿಗೆ ಬಂದಿಳಿದಿವೆ. ಡಿಸೆಂಬರ್‌ ಅಂತ್ಯದ ವೇಳೆಗೆ ಎರಡು ಸಾವಿರಕ್ಕೂ ಹೆಚ್ಚು ಪೆಲಿಕಾನ್‌ಗಳು ಪಕ್ಷಿಧಾಮಕ್ಕೆ ಬರಲಿವೆ.

ಸ್ಪೂನ್‌ ಬಿಲ್‌ (ಚಮಚದ ಕೊಕ್ಕಿನ ಕೊಕ್ಕರೆ), ಯುರೇಶಿಯನ್‌ ಸ್ಪೂನ್‌ ಬಿಲ್‌, ಓಪನ್‌ ಬಿಲ್‌ (ತೆರೆದ ಕೊಕ್ಕಿನ ಕೊಕ್ಕರೆ) ಮತ್ತು ಪೇಂಟೆಡ್‌ ಸ್ಟೋರ್ಕ್‌ (ಬಣ್ಣದ ಕೊಕ್ಕರೆ) ಜಾತಿಯ ಪಕ್ಷಿಗಳು ಮೂರು ದಿನಗಳ ಈಚೆಗೆ ಪಕ್ಷಿಧಾಮದ ಆಸುಪಾಸಿನಲ್ಲಿ ಕಾಣಿಸಿಕೊಳ್ಳುತ್ತಿವೆ. ಎರಡು ಜೊತೆ ರಿವರ್‌ ಟರ್ನ್‌ ಪಕ್ಷಿಗಳು ಕೂಡ ಬಂದಿವೆ.

ಡಿಸೆಂಬರ್‌ ಎರಡನೇ ವಾರದ ವೇಳೆಗೆ ವಲಸೆ ಪಕ್ಷಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಲಿದ್ದು, ವಂಶಾಭಿವೃದ್ಧಿ ಪ್ರಕ್ರಿಯೆ ಆರಂಭಿಸಲಿವೆ. ವೈಟ್‌ ಐಬಿಸ್‌, ಮಡ್‌ ಸ್ವಾಲೋ ಮತ್ತು ಕಾರ್ಮೊರೆಂಟ್‌ ಜಾತಿಯ ಪಕ್ಷಿಗಳು ಹಲವು ದಿನಗಳಿಂದಲೂ ಇಲ್ಲಿ ಬೀಡು ಬಿಟ್ಟಿವೆ.

‘ವಿವಿಧ ದೇಶ ಮತ್ತು ರಾಜ್ಯಗಳಿಂದ ಇಲ್ಲಿಗೆ ವಲಸೆ ಬರುವ ಪಕ್ಷಿಗಳು ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಮುಂಗಾರು ಮಳೆ ಬೀಳುವ ಸಮಯಕ್ಕೆ, ಮೇ ಅಂತ್ಯದಲ್ಲಿ ಮರಿಗಳ ಜತೆ ಸ್ವಸ್ಥಾನಕ್ಕೆ ವಾಪಸ್‌ ತೆರಳುತ್ತವೆ’ ಎಂದು ಪಕ್ಷಿಧಾಮದ ವಲಯ ಅರಣ್ಯಾಧಿಕಾರಿ ಸಂತೋಷ್‌ ಹೂಗಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಕ್ಷಿಧಾಮಕ್ಕೆ ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಶನಿವಾರ ಮತ್ತು ಭಾನುವಾರ 1,500ರಿಂದ 2 ಸಾವಿರ ಮಂದಿ ಭೇಟಿ ನೀಡುತ್ತಿದ್ದಾರೆ. ಇತರ ದಿನಗಳಲ್ಲಿ 700ರಿಂದ 800 ಮಂದಿ ದೇಶ, ವಿದೇಶಗಳ ಪ್ರವಾಸಿಗರು ಬರುತ್ತಿದ್ದಾರೆ’ ಎಂದು ಹೇಳಿದರು.

ಈಗಾಗಲೇ ಐನೂರಕ್ಕೂ ಹೆಚ್ಚು ಪೆಲಿಕಾನ್‌ಗಳ ಆಗಮನ ಡಿಸೆಂಬರ್‌ 2ನೇ ವಾರದ ವೇಳೆಗೆ ಪಕ್ಷಿಗಳ ಸಂಖ್ಯೆ ಏರಿಕೆ ಸಾಧ್ಯತೆ ವಾರಾಂತ್ಯಗಳಲ್ಲಿ ಹೆಚ್ಚಿನ ಪ್ರವಾಸಿಗರ ಭೇಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT