ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ್‌ ಜೋಡೊ ಯಾತ್ರೆ; ಅನುಭವಗಳ ಮೂಟೆ ತಂದ ಸಿ.ಎಂ.ದ್ಯಾವಪ್ಪ

ಭಾರತ್‌ ಜೋಡೊ ಯಾತ್ರೆ; ಗುಂಡ್ಲುಪೇಟೆಯಿಂದ ಕಾಶ್ಮೀರದವರೆಗೆ ರಾಹುಲ್‌ ಗಾಂಧಿ ಜೊತೆ ಹೆಜ್ಜೆ
Last Updated 1 ಫೆಬ್ರುವರಿ 2023, 23:45 IST
ಅಕ್ಷರ ಗಾತ್ರ

ಮಂಡ್ಯ: ಕಾಂಗ್ರೆಸ್‌ ಯುವ ನಾಯಕ ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೊ ಯಾತ್ರೆಯಲ್ಲಿ ಜಿಲ್ಲಾ ಕಾಂಗ್ರೆಸ್‌ ಮುಖಂಡ ಸಿ.ಎಂ.ದ್ಯಾವಪ್ಪ ಅವರು 115 ದಿನ ಹೆಜ್ಜೆ ಹಾಕಿ ಬಂದಿದ್ದಾರೆ. 10 ರಾಜ್ಯ, 2 ಕೇಂದ್ರಾಡಳಿತ ಪ್ರದೇಶಗಳ ನಡಿಗೆಯಲ್ಲಿ ಅವರು ಅನುಭವಗಳ ಮೂಟೆಯನ್ನೇ ಹೊತ್ತು ತಂದಿದ್ದಾರೆ.

ಭಾರತ್‌ ಜೋಡೊ ಯಾತ್ರೆ ಸೆ.7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾಯಿತು. ಸೆ.30ರಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಮೂಲಕ ರಾಜ್ಯ ಪ್ರವೇಶಿಸಿತು. ಸೆ.29ರಂದೇ ಗುಂಡ್ಲುಪೇಟೆಗೆ ತೆರಳಿದ್ದ ಸಿ.ಎಂ.ದ್ಯಾವಪ್ಪ ಅಂದಿನಿಂದಲೇ ಪಾದಯಾತ್ರಿಕರ ತಂಡವನ್ನು ಸೇರಿಕೊಂಡರು.

ಸೆ.30ರಿಂದ ರಾಹುಲ್‌ ಗಾಂಧಿ ಅವರು ಶ್ರೀನಗರದ ಲಾಲ್‌ಚೌಕ್‌ನ ಕ್ಲಾಕ್‌ಟವರ್‌ ಮೇಲೆ ಧ್ವಜಾರೋಹಣ ನೆರವೇರಿಸುವವರೆಗೂ ಸಿ.ಎಂ.ದ್ಯಾವಪ್ಪ ಅವರು ಪಾದಯಾತ್ರೆಯ ಭಾಗವಾಗಿದ್ದರು. ನಗುಮೊಗ, ಉತ್ಸಾಹಿಯೂ ಆದ ದ್ಯಾವಪ್, ರಾಹುಲ್‌ ಅವರ ಪ್ರೀತಿ ಸಂಪಾದಿಸಿಕೊಳ್ಳುವಲ್ಲೂ ಯಶಸ್ವಿಯಾದರು.

ತವರಿಗೆ ಮರಳಿ ಬಂದಿರುವ ದ್ಯಾವಪ್ಪ ಅವರು ಹಲವು ಅನುಭವ ಹಂಚಿಕೊಂಡಿದ್ದಾರೆ. ಮರೆಯಲಾಗದ ಕೆಲವು ಘಟನೆಗಳನ್ನು ಬಿಚ್ಚಿಟ್ಟಿದ್ದಾರೆ. ಚಳಿಯ ನಡುವೆ ರಾಹುಲ್‌ ನಡೆದ ಪರಿಯನ್ನು ಮನಸಾರೆ ಮೆಚ್ಚಿಕೊಂಡಿದ್ದಾರೆ.

‘ಇದು ನನ್ನ ಜೀವನದ ಬಹುಮುಖ್ಯ ಮೈಲಿಗಲ್ಲು. ದೇಶ ಜೋಡಿಸುವ ಸಂಕಲ್ಪದೊಂದಿಗೆ ಹೆಜ್ಜೆ ಹಾಕುತ್ತಿದ್ದ ರಾಹುಲ್‌ಗಾಂಧಿ ಅವರೊಂದಿಗೆ ನಡೆಯುವುದು ಎಂದರೆ ಅದು ಬರೀ ನಡಿಗೆ ಮಾತ್ರವೇ ಆಗಿರಲಿಲ್ಲ. ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ, ಅವರ ಭಾಷೆ, ಬದುಕು, ಸಮಸ್ಯೆಗಳ ಅರಿವಿನ ಯಾತ್ರೆಯಾಗಿತ್ತು. ಇದು ರಾಜಕೀಯ ಯಾತ್ರೆಯಾಗಿರಲಿಲ್ಲ, ಬದುಕು ಹಾಗೂ ಭಾವನೆಗಳ ಯಾತ್ರೆಯಾಗಿತ್ತು’ ಎನ್ನುತ್ತಾರೆ ದ್ಯಾವಪ್ಪ

ಮರೆಯಲಾಗದ ಘಟನೆ: ‘2022ರ ವರ್ಷಾಂತ್ಯದಲ್ಲಿ ಪಾದಯಾತ್ರೆಗೆ ಕೊಂಚ ಬಿಡುವು ನೀಡಲಾಗಿತ್ತು. ಆಗ ರಾಹುಲ್‌ ಗಾಂಧಿಯವರು ಬೇರೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಆಗ ಪಾದಯಾತ್ರಿಕರಲ್ಲಿ ಚಡಪಡಿಕೆ ಉಂಟಾಗಿತ್ತು, ರಾಹುಲ್‌ ಗಾಂಧಿ ಇಲ್ಲದ ದಿನ ಕಳೆಯುವುದು ಕಷ್ಟವಾಗಿತ್ತು.

ಬಿಡುವಿನ ನಂತರ ಜ.4ರಂದು ರಾಹುಲ್‌ ಗಾಂಧಿಯವರನ್ನು ಉತ್ತರ ಪ್ರದೇಶದಲ್ಲಿ ನೋಡಿದಾಗ ರೋಮಾಂಚನವಾಯಿತು. ಯಾರಿಂದಲೂ ಹತ್ತಲು ಸಾಧ್ಯವಾಗದ ಎತ್ತರದ ಗೋಡೆಯೊಂದನ್ನು ಹತ್ತಿ ಫೋಟೊ ತೆಗೆಯುತ್ತಿದ್ದೆ. ಕಣ್ಣೆತ್ತಿ ನನ್ನನ್ನು ನೋಡಿದ ರಾಹುಲ್‌ ಗಾಂಧಿ ಅವರು ಅಲ್ಲಿಂದಲೇ ನನ್ನನ್ನು ಕರೆದರು. ಇಷ್ಟು ದಿನ ನೋಡಲು ಸಾಧ್ಯವಾಗಲಿಲ್ಲ ಎಂಬ ಭಾವನೆಯೂ ಅವರಲ್ಲಿತ್ತು.

ಕೆಳಗಿಳಿದು ಬರುವಂತೆ ನನ್ನನ್ನು ಬಾ ಎಂದು ಕರೆದರು. ಗೋಡೆಯಿಂದ ಇಳಿದು ಅವರತ್ತ ನಡೆದೆ, ಸಾವಿರಾರು ಜನರನ್ನು ಮೀಟಿ ಮುಂದಕ್ಕೆ ಸಾಗಿದೆ. ಪೊಲೀಸರ ಬೃಹತ್‌ ಹಗ್ಗ, ಭದ್ರತೆಯ ಕೋಟೆ ದಾಟಿ ರಾಹುಲ್‌ ಗಾಂಧಿಯವರನ್ನು ಮಾತನಾಡಿಸಿದೆ. ರಾಹುಲ್‌ ಎಂದರೆ ಪ್ರತಿಯೊಬ್ಬ ಪಾದಯಾತ್ರಿಕನಿಗೂ ಇದೇ ಭಾವನೆ ಇತ್ತು. ಅವರ ಕೈ ಸ್ಪರ್ಶಿಸಿದರೆ ವಿದ್ಯುತ್‌ ಸಂಚಾರದಂತೆ ಉತ್ಸಾಹ ಉಕ್ಕುತ್ತಿತ್ತು...ಎನ್ನುತ್ತಾ ದ್ಯಾವಪ್ಪ ಭಾವುಕರಾದರು.

ಬಹುಭಾಷೆ ಅತ್ಯಾವಶ್ಯ: ಹಲವು ರಾಜ್ಯ ಸುತ್ತಿ ಬಂದ ದ್ಯಾವಪ್ಪ ಭಾಷೆಗಳ ಮಹತ್ವ ಅರಿತಿದ್ದಾರೆ. ‘ಒಂದೊಂದು ಪ್ರಾಂತ್ಯಕ್ಕೂ ತೆರಳಿದಾಗ ಅವರ ಭಾಷೆ, ಆಚಾರ, ವಿಚಾರದಲ್ಲಿ ಸಾಕಷ್ಟ ಬದಲಾವಣೆ ಕಂಡೆ. ಎಲ್ಲವನ್ನೂ ಅರ್ಥ ಮಾಡಿಕೊಳ್ಳಲು ಬಹುಭಾಷೆ ಕಲಿಯುವುದು ಅತ್ಯಾವಶ್ಯ. ಮುಂದೆ ನಮ್ಮ ಮಕ್ಕಳಿಗೆ ಭಾಷೆಗಳ ಮಹತ್ವ ತಿಳಿಸಬೇಕು’ ಎಂದರು.

***

ನಡಿಗೆಯಿಂದ ಆರೋಗ್ಯ ಭಾಗ್ಯ

‘ರಾಹುಲ್‌ ಗಾಂಧಿ ಅವರ ಜೊತೆ 3,570 ಕಿ.ಮೀ ಹೆಜ್ಜೆ ಹಾಕಿದ್ದೇನೆ. 82 ಕೆ.ಜಿ ಇದ್ದ ನಾನು ಈಗ 75 ಕೆ.ಜಿಗೆ ಇಳಿದಿದ್ದೇನೆ. ಪಾದಯಾತ್ರೆಯಿಂದ ಆರೋಗ್ಯ ಭಾಗ್ಯವೂ ಬಂದಿದೆ. ಇಂತಹ ಅವಕಾಶ ಕಲ್ಪಿಸಿದ ಕಾಂಗ್ರೆಸ್‌ ವರಿಷ್ಠರು, ಸ್ಥಳೀಯ ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಸಿ.ಎಂ.ದ್ಯಾವಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT