ಮಂಡ್ಯ: ಕಲ್ಲು ಗಣಿ ನಿಷೇಧ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿರುವುದಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಾನೂನು ವಿಭಾಗದ ವೈಫಲ್ಯವೇ ಕಾರಣ ಎಂಬ ಆರೋಪ ಕೇಳಿ ಬಂದಿದೆ. ವಾಸ್ತವ ಅಂಶಗಳನ್ನು ಕೋರ್ಟ್ ಗಮನಕ್ಕೆ ತಾರದ ಪರಿಣಾಮ ಜಿಲ್ಲಾಧಿಕಾರಿ ಆದೇಶ ರದ್ದುಗೊಂಡಿದೆ ಎಂದು ರೈತ ಮುಖಂಡರು, ಹೋರಾಟಗಾರರು ಆರೋಪಿಸಿದ್ದಾರೆ.
ಜಿಲ್ಲಾಧಿಕಾರಿ ಆದೇಶದ ವಿರುದ್ಧ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದ ಬಹುತೇಕ ಗಣಿ ಮಾಲೀಕರು ಹಲವು ವರ್ಷಗಳಿಂದ ನೂರಾರು ಕೋಟಿ ರಾಜಧನ ಬಾಕಿ ಉಳಿಸಿಕೊಂಡಿದ್ದಾರೆ, ಅನಧಿಕೃತ ಗಣಿ ಚಟುವಟಿಕೆ ವಿರುದ್ಧ ವಿಧಿಸಲಾದ ದಂಡವನ್ನೂ ಪಾವತಿ ಮಾಡಿಲ್ಲ. ಜೊತೆಗೆ ಬಹುತೇಕ ಕ್ರಷರ್‌ಗಳ ಪರಿಸರ ವಿಮೋಚನಾ ಪತ್ರ (ಇಸಿ) 2017ಕ್ಕೆ ಕೊನೆಗೊಂಡಿದೆ. ಜೊತೆಗೆ ಹಲವು ಗಣಿ ಕಂಪನಿಗಳು ಕೆಆರ್‌ಎಸ್ ಜಲಾಶಯಕ್ಕೆ ಕಂಠಕವಾಗಿವೆ. ಈ ಅಂಶಗಳನ್ನು ಇಲಾಖೆಯ ಪರ ವಕೀಲರು ಕೋರ್ಟ್ ಗಮನಕ್ಕೆ ತಂದಿಲ್ಲ ಎಂದು ಹೋರಾಟಗಾರರು ಆರೋಪಿಸಿದ್ದಾರೆ.
‘ಜಿಲ್ಲಾಧಿಕಾರಿ ಆದೇಶವನ್ನಷ್ಟೇ ಕೋರ್ಟ್ ಪ್ರಶ್ನಿಸಿದೆ. ನಿಷೇಧಾಜ್ಞೆ ಪ್ರಕ್ರಿಯೆ ಕಾನೂನಿನ ಪ್ರಕಾರವಾಗಿಲ್ಲ ಎಂದಷ್ಟೇ ಹೇಳಿದೆ. ನಾನೂನಾತ್ಮಕವಾಗಿ ಗಣಿ ಮಾಲೀಕರಿಗೆ ನೀಡಬೇಕಿದ್ದ ಪ್ರತಿಕ್ರಿಯೆ ಅವಕಾಶ ಕೊಟ್ಟಿಲ್ಲ, ನೋಟಿಸ್ ನೀಡಿಲ್ಲ. ಅವರು ವಾದವನ್ನೂ ಆಲಿಸಿ ಮುಂದಿನ ಕ್ರಮ ಕೈಗೊಳ್ಳಬೇಕಿತ್ತು. ಈಗಲೂ ಅದೇ ಪ್ರಕ್ರಿಯೆ ಅನುಸರಿಸಬೇಕು ಎಂದು ಹೇಳಿದೆ. ಇದು ಗಣಿ ಮಾಲೀಕರು ನಾಳೆಯೇ ಕ್ರಷರ್ ಚಟುವಟಿಕೆ ನಡೆಸಲು ನೀಡಿರುವ ಅನುಮತಿಯಲ್ಲ. ಅವರು ರಾಜಧನ ಬಾಕಿ ಪಾವತಿಸದೇ, ದಂಡ ಕಟ್ಟದೆ, ಇಸಿ ಪಡೆಯದೆ ಚಟುವಟಿಕೆ ನಡೆಸಲು ಸಾಧ್ಯವಿಲ್ಲ’ ಎಂದು ಆರ್‌ಟಿಐ ಕಾರ್ಯಕರ್ತ ಕೆ.ಆರ್.ರವೀಂದ್ರ ಹೇಳಿದರು.
‘ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಕಾನೂನು ವಿಭಾಗ ಮೊದಲಿನಿಂದಲೂ ಗಣಿ ಮಾಲೀಕರ ಪರವಾಗಿಯೇ ಕೆಲಸ ಮಾಡುತ್ತಿವೆ. ಆದೇಶ ರದ್ದಾಗಿರುವುದನ್ನೇ ನೆಪ ಮಾಡಿಕೊಂಡು ಗಣಿ ಚಚುವಟಿಕೆ ಆರಂಭಿಸುವ ಅಪಾಯವಿದೆ. ರಾಜಧನ, ದಂಡ ವಸೂಲಿ ಮಾಡದೇ ಗಣಿಗಾರಿಕೆ ನಡೆಸಲು ಅವಕಾಶ ನೀಡಬಾರದು. ಕೆಆರ್‌ಎಸ್ ಸಮೀಪದಲ್ಲಿರುವ ಕ್ರಷರ್‌ಗಳನ್ನು ಶಾಶ್ವತವಾಗಿ ಮುಚ್ಚಿಸಬೇಕು’ ಎಂದು ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ಕೆಂಪೂಗೌಡ ಒತ್ತಾಯಿಸಿದರು.
ಆದೇಶ ಮಾಡಿದ್ದು ಯಾವಾಗ?: 2018ರಲ್ಲಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಅಧ್ಯಯನ ನಡೆಸಿ ಕೆಆರ್‌ಎಸ್ ಆಸುಪಾಸಿನ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡಸಬಾರದು ಎಂದು ಶಿಫಾರಸು ಮಾಡಿತ್ತು. ನಂತರ ರಾಜ್ಯ ಅಣೆಕಟ್ಟೆ ಸುರಕ್ಷತಾ ಪರಿಶೀಲನಾ ಸಮಿತಿ (ಡಿಎಸ್‌ಆರ್‌ಪಿ) ಅಧಿಕಾರಿಗಳು ಕೂಡ ಗಣಿಗಾರಿಕೆಯಿಂದ ಜಲಾಶಯಕ್ಕೆ ತೊಂದರೆಯಾಗುವ ಸಾಧ್ಯತೆ ಇದ್ದು ಜಲಾಶಯದಿಂದ 25 ಕಿ.ಮೀವರೆಗೆ ಗಣಿಗಾರಿಕೆ ನಡೆಸಬಾರದು ವರದಿ ನೀಡಿದ್ದರು. ಇದನ್ನು ಜಿಲ್ಲಾಧಿಕಾರಿಗಳು ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿಯ ಅನುಮೋದನೆ ಪಡೆದು 2020ರಲ್ಲಿ ಗಣಿಗಾರಿಕೆ ನಿಷೇಧಿಸಿ ಆದೇಶ ಹೊರಡಿಸಿದ್ದರು.
‘ಬೇಬಿಬೆಟ್ಟ ಕಾವಲು ಪ್ರದೇಶವನ್ನು ತಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ಮೈಸೂರು ರಾಜ ವಂಶಸ್ಥೆ ಪ್ರಮೋದಾದೇವಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಜೊತೆಗೆ ಆ ಭಾಗ ಅರಣ್ಯ ಇಲಾಖೆಗೆ ಸೇರಿರುವ ಬಗ್ಗೆ ದಾಖಲೆಗಳಿವೆ. ಹೀಗಾಗಿ ಪರಿಸರ ಅನುಮೋದನಾ ಸಮಿತಿ (ಇಸಿ ಕಮಿಟಿ) ಗಣಿ ಕಂಪನಿಗಳಿಗೆ ಪರಿಸರ ವಿಮೋಚನಾ ಪತ್ರ ನಿರಾಕರಿಸಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಇ.ಸಿ ಇಲ್ಲದೇ ಯವುದೇ ಪ್ರದೇಶಕ್ಕೆ ಗಣಿ ಗುತ್ತಿಗೆ ನೀಡಲು ಬರುವುದಿಲ್ಲ’ ಎಂದು ವಕೀಲ ಮಂಜುನಾಥ್ ತಿಳಿಸಿದರು.
ಕೆಆರ್‌ಎಸ್ ವಿಚಾರ ಮುಚ್ಚಿಟ್ಟರೇ?
ನಿಷೇಧಾಜ್ಞೆ ವಿರುದ್ಧ ಹೈರ್ಕೋಟ್‌ಗೆ ತೆರಳಿದ್ದ 30 ಕ್ರಷರ್ ಮಾಲೀಕರಲ್ಲಿ ಬಹುತೇಕ ಮಂದಿ ಬೇಬಿಬೆಟ್ಟದಲ್ಲಿ ಗಣಿ ಚಟುವಟಿಕೆ ನಡೆಸುತ್ತಾರೆ. ಈ ಗಣಿ ಕಂಪನಿಗಳು ಕೆಆರ್‌ಎಸ್ ಜಲಾಶಯದಿಂದ 20 ಕಿ.ಮೀ ವ್ಯಾಪ್ತಿಯಲ್ಲಿ ಚಟುವಟಿಕೆ ನಡೆಸುತ್ತವೆ. ಈ ವಿಚಾರವನ್ನು ಗಣಿ ಇಲಾಖೆ ವಕೀಲರು ಮುಚ್ಚಿಟ್ಟಿದ್ದಾರೆ ಎಂಬ ಅನುಮಾನವನ್ನು ರೈತ ಮುಖಂಡರು ವ್ಯಕ್ತಪಡಿಸಿದ್ದಾರೆ.
‘ಜಿಲ್ಲಾಧಿಕಾರಿಗಳ ಅವೈಜ್ಞಾನಿಕ ಆದೇಶವನ್ನು ಹೈಕೋರ್ಟ್ ರದ್ದು ಮಾಡಿರುವುದು ನಮಗೆ ಜಯ ದೊರೆತಂತಾಗಿದೆ. ನಾವು ನಿಯಮಾನುಸಾರ ಅನುಮತಿ ಪಡೆದು ಚಟುವಟಿಕೆ ನಡೆಸುತ್ತಿದ್ದೆವು. ಗಣಿಗಾರಿಕೆಯನ್ನು ಸಾವಿರಾರು ಮಂದಿ ಅವಲಂಬಿಸಿದ್ದಾರೆ’ ಎಂದು ಗಣಿ ಮಾಲೀಕ ರವಿಭೋಜೇಗೌಡ ತಿಳಿಸಿದರು.
‘ಮಂದಿನ 15 ದಿನದಲ್ಲಿ ಗಣಿ ಮಾಲೀಕರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಆದೇಶ ಪ್ರತಿ ಕೈಸೇರಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಎಸ್.ಅಶ್ವತಿ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.