ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಶಾಸಕರ ವಶಕ್ಕೆ ಪಡೆದು ಕಾಂಪೌಂಡ್‌ ಕಾಮಗಾರಿ

ಅರಕೆರೆಯಲ್ಲಿ ಶಾಲೆ ಗೋಡೆ ವಿವಾದ: ರವೀಂದ್ರ ಶ್ರೀಕಂಠಯ್ಯ– ರಮೇಶ್‌ ಬಂಡಿಸಿದ್ದೇಗೌಡ ಬೆಂಬಲಿಗರ ವಾಗ್ವಾದ
Last Updated 2 ಮಾರ್ಚ್ 2022, 3:42 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಅರಕೆರೆ ಗ್ರಾಮದ ಸರ್ಕಾರಿ ಶಾಲೆಯ ಸುತ್ತ ಕಾಂಪೌಂಡ್‌ ನಿರ್ಮಾಣ ಕಾಮಗಾರಿ ತಡೆಯಲು ಬಂದ ಮಾಜಿ ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಅವರನ್ನು ಪೊಲೀಸರು ಮಂಗಳವಾರ ವಶಕ್ಕೆ ಪಡೆದರು. ನಂತರ ಅಧಿಕಾರಿಗಳ ಸೂಚನೆಯಂತೆ ಕಾಂಪೌಂಡ್‌ ಕಾಮಗಾರಿ ಮುಂದುವರಿಸಲಾಯಿತು.

ಗ್ರಾಮದ ಕರ್ನಾಟಕ ಪಬ್ಲಿಕ್‌ ಶಾಲೆಯ ಸುತ್ತ ಕಾಂಪೌಂಡ್‌ ನಿರ್ಮಾಣ ಕಾರ್ಯ ಮಂಗಳವಾರ ಆರಂಭವಾಗುತ್ತಿದ್ದಂತೆಯೇ ಬೆಂಬಲಿಗರ ಜೊತೆ ಬಂದ ರಮೇಶ ಬಂಡಿಸಿದ್ದೇಗೌಡ ಆಕ್ಷೇಪ ವ್ಯಕ್ತಪಡಿಸಿದರು. ಶಾಲೆಯ ಜಾಗಕ್ಕೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿದ್ದು, ಅಂತಿಮ ತೀರ್ಪು ಬರುವವರೆಗೆ ಕೆಲಸ ಮಾಡ ಬಾರದು ಎಂದು ಮಾಜಿ ಶಾಸಕರು, ಅವರ ಬೆಂಬಲಿಗರು ಒತ್ತಾಯಿಸಿದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು, ಶಾಲೆ ಮತ್ತು ಪೊಲೀಸ್‌ ಠಾಣೆ ನಡುವೆ ಇರುವ ರಸ್ತೆಯ ವಿಷಯವಾಗಿ ಮಾತ್ರ ಪ್ರಕರಣ ಇದೆ. ಶಾಲೆಯ ಜಾಗಕ್ಕೂ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣಕ್ಕೂ ಸಂಬಂಧ ಇಲ್ಲ ಎಂದರು.

ಒಂದು ಹಂತದಲ್ಲಿ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು. ಸುಮಾರು ಎರಡು ಗಂಟೆಗಳ ಕಾಲ ಆರೋಪ, ಪ್ರತ್ಯಾರೋಪಗಳು ನಡೆದವು. ಈ ಸಂದರ್ಭದಲ್ಲಿ ಪರಿಸ್ಥಿತಿ ಕೈ ಕೈ ಮಿಲಾಯಿಸುವ ಹಂತ ತಲುಪಿತು. ಕಾಮಗಾರಿ ಸದ್ಯಕ್ಕೆ ಬೇಡ ಎಂದು ಹಟ ಹಿಡಿದ ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರನ್ನು ಪೊಲೀಸರು ಕೆಲಕಾಲ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು. ಇತ್ತ ಅಧಿಕಾರಿಗಳ ಸೂಚನೆಯಂತೆ ಕಾಂಪೌಂಡ್‌ ನಿರ್ಮಾಣ ಕಾರ್ಯ ಆರಂಭಿಸಲಾಯಿತು. ನಂತರ ಮಾಜಿ ಶಾಸಕರನ್ನು ಠಾಣೆಯಿಂದ ಕಳುಹಿಸಲಾಯಿತು.

ಪ್ರತಿಭಟನೆ: ಕಾಂಪೌಂಡ್‌ ನಿರ್ಮಾಣ ಬೇಡ ಎಂದು ಆಗ್ರಹಿಸಿ ರಮೇಶ ಬಂಡಿಸಿದ್ದೇಗೌಡ ಬೆಂಬಲಿಗರು ಶಾಲೆಯ ಎದುರು ಶಾಮಿಯಾನ ಹಾಕಿ ಪ್ರತಿಭಟನೆ ಆರಂಭಿಸಿದರು. ಅಪೆಕ್ಸ್‌ ಬ್ಯಾಂಕ್‌ ಮಾಜಿ ನಿರ್ದೇಶಕ ಶಿವಯ್ಯ, ತಾ.ಪಂ ಮಾಜಿ ಸದಸ್ಯ ಸಂತೋಷ್‌, ಭವಾನಿ ರವಿ, ಮಂಡ್ಯಕೊಪ್ಪಲು ಮಂಜುನಾಥ್‌, ವಡಿಯಾಂಡಹಳ್ಳಿ ಉದಯಕುಮಾರ್‌, ಮರಿಸ್ವಾಮಿ ಧರಣಿ ಕುಳಿತರು.

ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ ಬೆನ್ನಲ್ಲೇ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು ಶಾಲೆಯ ಮತ್ತೊಂದು ಭಾಗದಲ್ಲಿ ಧರಣಿ ಆರಂಭಿಸಿದರು. ಜಿ.ಪಂ ಮಾಜಿ ಸದಸ್ಯ ಎ.ಆರ್‌. ಮರೀಗೌಡ, ಮಾಜಿ ಪ್ರಧಾನ ಎ.ಪಿ. ನಾಗೇಶ್‌, ಗ್ರಾ.ಪಂ ಮಾಜಿ ಅಧ್ಯಕ್ಷ ನಾಗೇಂದ್ರು, ಎಂ.ಮಂಜುನಾಥ್‌, ಕಿಶೋರ್‌, ಫೋಟೋ ಸ್ವಾಮಿ ಪ್ರತಿಭಟನೆ ಶುರು ಮಾಡಿದರು. ಶಾಲೆಯ ಸುತ್ತ 260 ಮೀಟರ್‌ ಕಾಂಪೌಂಡ್‌ ನಿರ್ಮಾಣಕ್ಕೆ ₹20 ಲಕ್ಷ ಹಣ ಬಿಡುಗಡೆಯಾಗಿದೆ. ಖರ್ಚು ಮಾಡಿದ್ದರೆ ವಾಪಸ್‌ ಹೋಗುತ್ತದೆ. ಹಾಗಾಗಿ ಕೆಲಸ ಆರಂಭಿಸಬೇಕು ಎಂದು ಪಟ್ಟುಹಿಡಿದರು.

ಕೆಲಸ ಶುರು: ತಹಶೀಲ್ದಾರ್‌ ಶ್ವೇತಾ ಎನ್‌. ರವೀಂದ್ರ ಅವರು ಕಾಮಗಾರಿ ಶುರು ಮಾಡುವಂತೆ ಸೂಚಿಸಿದ ಬಳಿಕ ಗುತ್ತಿಗೆದಾರರು ಪೊಲೀಸ್‌ ಭದ್ರತೆಯಲ್ಲಿ ಕಾಂಪೌಂಡ್‌ ನಿರ್ಮಾಣ ಕಾಮಗಾರಿ ಶುರು ಮಾಡಿದರು. ಕೆಲಸ ತಡೆಯದಂತೆ ತಾ.ಪಂ ಇಒ ನಿಶಾಂತ್‌ ಕೀಲಾರ, ಡಿವೈಎಸ್ಪಿ ಸಂದೇಶಕುಮಾರ್‌ ಮನವೊಲಿಸುವ ಪ್ರಯತ್ನ ಮಾಡಿದರು.

ವಿವಾದದ ಹಿನ್ನೆಲೆ: ಅರಕೆರೆ ಗ್ರಾಮದ ಸರ್ಕಾರಿ ಶಾಲೆಗೆ ಹೊನ್ನಪ್ಪ ಟ್ರಸ್ಟ್‌ 1949ರಲ್ಲಿ 3 ಎಕರೆ 8 ಗುಂಟೆ ಜಾಗವನ್ನು ದಾನ ರೂಪದಲ್ಲಿ ನೀಡಿದೆ. ಸ.ನಂ. 1,102ರ ಈ ಸ್ಥಳದಲ್ಲಿ ಶಾಲೆ ಕೂಡ ನಿರ್ಮಾಣವಾಗಿದೆ. ಆದರೆ, ಸದರಿ ಜಾಗ ಇದುವರೆಗೆ ಶಿಕ್ಷಣ ಇಲಾಖೆ ಹೆಸರಿಗೆ ಖಾತೆಯೇ ಆಗಿಲ್ಲ. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ವಿವಾದಕ್ಕೆ ಕಾರಣವಾಗಿದೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.

‘ಅಧಿಕಾರಿಗಳ ಮೇಲೆ ಒತ್ತಡ’

ಶಾಲೆಯ ಕಾಂಪೌಂಡ್‌ ನಿರ್ಮಾಣ ವಿಷಯವನ್ನು ಶಾಸಕ ರವೀಂದ್ರ ಶ್ರೀಕಂಠಯ್ಯ ಪ್ರತಿಷ್ಠೆಯ ವಿಷಯ ಮಾಡಿಕೊಂಡಿದ್ದಾರೆ. ರಾಜಕೀಯ ದ್ವೇಷದಿಂದ ಶಿವರಾತ್ರಿ ಹಬ್ಬದ ದಿನ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಕಾಂಪೌಂಡ್‌ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಶಾಲೆಯ ಜಾಗದಲ್ಲಿ ಯಾವುದೇ ಕಾಮಗಾರಿ ಬೇಡ ಎಂದು ಅವರ ಬೆಂಬಲಿಗರೇ 2010ರಲ್ಲಿ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವಾಗ ಕಾಂಪೌಂಡ್‌ ಆಗಲೇಬೇಕು ಎಂದು ಪಟ್ಟು ಹಿಡಿಯುವುದು ಎಷ್ಟು ಸರಿ ಎಂದು ರಮೇಶ ಬಂಡಿಸಿದ್ದೇಗೌಡ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT