ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಸಾಲ ಮನ್ನಾ ಮಾಡಿದ ಕೀರ್ತಿ ಎಚ್‌ಡಿಕೆಗೆ: ನಿಖಿಲ್

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಭಿಮತ
Published 18 ಏಪ್ರಿಲ್ 2024, 14:27 IST
Last Updated 18 ಏಪ್ರಿಲ್ 2024, 14:27 IST
ಅಕ್ಷರ ಗಾತ್ರ

ಮದ್ದೂರು: ‘ಮುಖ್ಯಮಂತ್ರಿಯಾಗಿದ್ದಾಗ ರೈತಪರ ಕಾಳಜಿಯಿಂದ ರೈತರ ಸಾಲ ಮನ್ನಾ ಮಾಡಿದ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಲಾಟರಿ ಹಾಗೂ ಸಾರಾಯಿ ನಿಷೇಧ ಮಾಡುವ ಮೂಲಕ ಬಡ ಮತ್ತು ಸಾಮಾನ್ಯ ವರ್ಗದ ಕುಟುಂಬಗಳಿಗೆ ಶಾಶ್ವತವಾಗಿ ನೆಮ್ಮದಿ ದೊರಕಿಸಿಕೊಟ್ಟ ಹೃದಯವಂತ’ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಮಂಡ್ಯದ ಎನ್‌ಡಿಎ ಅಭ್ಯರ್ಥಿ ಎಚ್.ಡಿ ಕುಮಾರಸ್ವಾಮಿ ಪರ ಗುರುವಾರ ತಾಲ್ಲೂಕಿನ ವಿವಿಧ  ಗ್ರಾಮಗಳಲ್ಲಿ ಸುಡುವ ಬಿಸಿಲನ್ನು ಲೆಕ್ಕಿಸದೆ ಬಿರುಸಿನ ಪ್ರಚಾರ ನಡೆಸಿ ಅವರು ಮಾತನಾಡಿದರು.

‘ರೈತರ ₹ 25 ಸಾವಿರ ಕೋಟಿ ಸಾಲಮನ್ನಾ, ಗ್ರಾಮ ವಾಸ್ತವ್ಯ, ಜನ ಸಂಪರ್ಕ ಸಭೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದು ರಾಜ್ಯದ ಎಲ್ಲಾ ವರ್ಗದವರಿಗೂ ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ. ಈ ಬಾರಿ ಸಂಸದರಾಗಿ ತಾವೆಲ್ಲಾ ಆಯ್ಕೆ ಮಾಡಿದರೆ ಕೇಂದ್ರದಲ್ಲಿ ಕೃಷಿ ಸಚಿವರಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಹಕಾರಿಯಾಗುತ್ತದೆ’ ಎಂದರು.

‘ರೈತರು ಮತ್ತು ಜನರಿಗೆ ಕೇವಲ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದಿರುವ ಸರ್ಕಾರ ಎಷ್ಟು ದಿನಗಳ ಕಾಲ ಸುಳ್ಳಿನ ಕಂತೆಯಲ್ಲೇ ಕಾಲ ಕಳೆಯುದೆ ಎಂದು ಪ್ರಶ್ನಿಸಿದ ಅವರು, ಜನಸಾಮಾನ್ಯರು ಸಂಕಷ್ಟ ಪರಿಸ್ಥಿತಿಯಲ್ಲಿದ್ದರೂ ನೆರವಿಗೆ ಧಾವಿಸದೇ ಕಾಲಹರಣ ಮಾಡುತ್ತಿದೆ’ ಎಂದು ರಾಜ್ಯ ಸರ್ಕಾರವನ್ನು ದೂರಿದರು.

‘ಮೇಕೆದಾಟು ಅಣೆಕಟ್ಟೆ ನಿರ್ಮಿಸುವುದಾಗಿ ಹೇಳಿಕೆ ನೀಡಿ ಅಧಿಕಾರಕ್ಕೆ ಬಂದು 9 ತಿಂಗಳು ಕಳೆದಿದ್ದರೂ ಇದುವರೆಗೂ ಯಾವುದೇ ಕಾರ್ಯಕ್ಕೆ ಮುಂದಾಗದಿರುವುದು ಸರ್ಕಾರದ ಅಧಿಕಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅಷ್ಟೇ ಅಲ್ಲದೇ ರಾತ್ರಿ ವೇಳೆಯೇ ನೆರೆಯ ತಮಿಳುನಾಡಿಗೆ ನೀರು ಹರಿಸುವ ಮೂಲಕ ನಮ್ಮ ನೀರು ಬೇರೆಯವರ ಪಾಲು ಮಾಡುತ್ತಿದ್ದು, ಕೇವಲ ಮೇಕೆದಾಟು ವಿಚಾರದಲ್ಲಿ ಪಾದಯಾತ್ರೆ ನಡೆಸಿ ನೃತ್ಯ ಮಾಡಿ ತೆರಳಿದ್ದೆ ನಿಮ್ಮ ಸಾಧನೆ’ ಎಂದು ಟೀಕಿಸಿದರು.

‘ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವವೇ ಮೆಚ್ಚುವಂತಹ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು ದೇಶದ ರಕ್ಷಣೆ ಅಭಿವೃದ್ಧಿ ವಿಚಾರದಲ್ಲಿ ದಿನದ 24 ಗಂಟೆಯೂ ದುಡಿಯುತ್ತಿರುವ ವಿಶ್ವನಾಯಕ ಮೋದಿಯವರ ಕೈ ಬಲ ಪಡಿಸಬೇಕು’ ಎಂದು ಕೋರಿದರು.

ಈ ವೇಳೆ ಮುಖಂಡರಾದ ಡಿ.ಸಿ.ತಮ್ಮಣ್ಣ, ಬಿಜೆಪಿ ಮುಖಂಡ ಎಸ್.ಪಿ ಸ್ವಾಮಿ, ಜಿ.ಪಂ ಮಾಜಿ ಅಧ್ಯಕ್ಷ ಎಸ್.ಗುರುಚರಣ್, ಜೆಡಿಎಸ್ ಘಟಕದ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮಯ್ಯ, ಕಾರ್ಯಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ, ಬಿಳಿಯಪ್ಪ, ಉಪಾಧ್ಯಕ್ಷ ದೇವರಹಳ್ಳಿ ವೆಂಕಟೇಶ್, ಬಿಜೆಪಿ ತಾಲೂಕು ಅಧ್ಯಕ್ಷ ಸಿ.ಕೆ ಸತೀಶ್, ಮುಖಂಡರಾದ ನಾಗೇಶ್, ಅಭಿಷೇಕ್ ಇದ್ದರು.

ತಾಲ್ಲೂಕಿನ ನಿಡಘಟ್ಟದಿಂದ ಆರಂಭಿಸಿ ತಾಲ್ಲೂಕಿನ ವಿವಿಧ ಗ್ರಾ.ಪಂ ವ್ಯಾಪ್ತಿಯಲ್ಲಿ ಪ್ರಚಾರ ಸಭೆಯನ್ನು ನಡೆಸಿದ್ದಲ್ಲದೆ ಹಲವು ಗ್ರಾಮಗಳಲ್ಲಿ ರೋಡ್ ಶೋ ನಡೆಸಿದರು.

ದೇಣಿಗೆ ನೀಡಿದ ಅಜ್ಜಿ: ಕೆಸ್ತೂರಿನಲ್ಲಿ ವೃದ್ಧೆ ಬೋರಮ್ಮಅವರು ನಿಖಿಲ್ ಕುಮಾರಸ್ವಾಮಿ ಅವರಿಗೆ ಚುನಾವಣಾ ವೆಚ್ಚಕ್ಕೆಂದು ₹ 5 ಸಾವಿರ ನೀಡಿದ್ದು ಎಲ್ಲರ ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT