ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ ದಸರಾ: ಗಮನ ಸೆಳೆದ ಸ್ತಬ್ಧಚಿತ್ರಗಳು‌

ಜಾಗೃತಿ ಮೂಡಿಸಿದ ಮೆರವಣಿಗೆ, ಕಲಾ ತಂಡಗಳ ಆಕರ್ಷಕ ನೃತ್ಯ ಪ್ರದರ್ಶನ
Last Updated 8 ಅಕ್ಟೋಬರ್ 2019, 13:26 IST
ಅಕ್ಷರ ಗಾತ್ರ

ಮಂಡ್ಯ: ವಿಜಯ ದಶಮಿ ಅಂಗವಾಗಿ ಮಂಡ್ಯ ಯೂತ್‌ ಗ್ರೂಪ್‌ ವತಿಯಿಂದ ಮಂಗಳವಾರ ನಗರದ ವಿವಿಧೆಡೆ ನಡೆದ ‘ಮಂಡ್ಯ ದಸರಾ’ಮೆರವಣಿಗೆಯಲ್ಲಿ ವಿವಿಧ ಸಂದೇಶ ಸಾರುವ ಸ್ತಬ್ಧಚಿತ್ರ ಗಮನ ಸೆಳೆದವು.

ಬಾರಿಸು ಕನ್ನಡ ಡಿಂಡಿಮವ ಸ್ತಬ್ಧ ಚಿತ್ರದಲ್ಲಿ ಕನ್ನಡಕ್ಕೆ ಜ್ಞಾನಪೀಠ ತಂದು ಕೊಟ್ಟ ಕವಿಗಳ ಛಾಯಾಚಿತ್ರ ಪ್ರದಶರ್ನ ಮಾಡಲಾಗಿತ್ತು. ‘ವೇಗದ ಮಿತಿ 60 ಇರಲಿ, ಆಯಸ್ಸು 60ಕ್ಕಿಂತ ಹೆಚ್ಚಾಗಿರಲಿ’ ಎಂಬ ಸಂದೇಶ ಹೊತ್ತ ಸ್ತಬ್ಧಚಿತ್ರ ಸಂಚಾರ ನಿಯಮ ಪಾಲನೆಯ ಪಾಠ ಹೇಳಿತು. ಕರಾವಳಿಯ ಪ್ರಸಿದ್ಧ ಯಕ್ಷಗಾನ ಪ್ರತಿಬಿಂಬಿಸುವ ಯಕ್ಷಗಾನ ಕಲಾವಿದರು, ಸ್ಥಳೀಯ ಡೊಳ್ಳು ಕುಣಿತ, ನಂದಿ ಧ್ವಜ, ಬೊಂಬೆಗಳು, ಬಾಲಕರು ದೊಣ್ಣೆ ವರಸೆ ಮೆರವಣಿಗೆಯಲ್ಲಿ ಗಮನ ಸೆಳೆದವು.

ಅಪಘಾತದಿಂದ ತೀವ್ರ ರಕ್ತಸ್ರಾವದಿಂದ ಸಾವು ಬದುಕಿನ ನಡುವೆ ಹೋರಾಡುತ್ತಿರುವವರಿಗೆ ರಕ್ತ ದಾನ ಮಾಡುವುದರಿಂದ ನೆರವಾಗಬಹುದು, ದೇಹದಾನದಿಂದ ಇತರ ರೋಗಿಗಳಿಗೆ ವಿವಿಧ ಅಂಗಗಳ ಬದಲಾವಣೆಗೆ ಸಹಕಾರಿ. ನೇತ್ರದಾನದಿಂದ ಇನ್ನೊಬ್ಬರು ಜಗತ್ತನ್ನು ನೋಡಲು ನೆರವಾಗಬಹುದು ಎಂಬ ವಾಸ್ತವ ಸತ್ಯ ಸಾರುವ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು.

ನಿತ್ಯ ಧ್ಯಾನ, ವ್ಯಾಯಾಮ, ನಿಯಮಿತ ಹಣ್ಣು ತರಕಾರಿ ಸೇವನೆಯಿಂದ ಆರೋಗ್ಯಕರ ಜೀವನ ನಮ್ಮದಾಗಲಿದೆ. ಯಾರ ಬಳಿ ಖುಷಿಯ ಟಾನಿಕ್‌ ಇದೆಯೋ ಅವರು ನಿಜವಾದ ಧನ್ಯವಂತರು, ಸ್ವಯಂ ಪರಿವರ್ತನೆಯೇ ವಿಶ್ವ ಪರಿವರ್ತನೆಗೆ ಆಧಾರ ಎನ್ನುವ ಜಾಗೃತಿ ಮೂಡಿಸಿದವು.

ಬ್ರಹ್ಮ ಕುಮಾರಿಯರ ತಂಡ ಡೊಳ್ಳು ಕುಣಿತ ಪ್ರಸ್ತುತಪಡಿಸಿದರು. ರಾಗಿ ಬೀಸುವ ಕಲ್ಲು, ಬಿದರಿನ ಮೊರ, ಪುಟ್ಟೆಗಳು ಹಳ್ಳಿಯ ಸಂಸ್ಕೃತಿಯನ್ನು ಪ್ರತಿಬಿಂಬಿಸಿದವು. ಚಂದ್ರಯಾನ ರಾಕೆಟ್‌ ಭಾರತದ ಭರವಸೆಯ ದಿನಗಳನ್ನು ಕಣ್ಣ ಮುಂದೆ ತಂದಿತು.

ಇದಕ್ಕೂ ಮುನ್ನ ಕಾಳಿಕಾಂಬ ದೇವಸ್ಥಾನದ ಗಜೇಂದ್ರ ಮೋಕ್ಷ ಕೊಳದ ಬಳಿ ಬನ್ನಿಮರಕ್ಕೆ ಪೂಜೆ ಸಲ್ಲಿಸುವುದರ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬೆಳ್ಳಿ ರಥದಲ್ಲಿ ಪ್ರತಿಷ್ಠಾಪಿಸಿದ್ದ ನಾಡ ದೇವತೆ ಶ್ರೀ ಚಾಮುಂಡೇಶ್ವರಿ ದೇವಿ ವಿಗ್ರಹಕ್ಕೆ ಶಾಸಕ ಸಿ.ಎಸ್.ಪುಟ್ಟರಾಜು ಚಾಲನೆ ನೀಡಿದರು. ಮಂಡ್ಯ ಯೂತ್ ಗ್ರೂಪ್‍ನ ಡಾ.ಅನಿಲ್‌ ಆನಂದ್‌, ಎಚ್.ಎಸ್.ಮಂಜು, ಡಾ.ಯಾಶಿಕಾ ಅನಿಲ್, ರುದ್ರಪ್ಪ, ಮಲ್ಲೇಶ್, ಬಿ.ಎಂ.ಅಪ್ಪಾಜಪ್ಪ, ದರ್ಶನ್, ವಿನಯ್, ಪ್ರಮೋದ್, ರಾಜಣ್ಣ, ದೇವಿ ಇದ್ದರು.

ಗಜೇಂದ್ರ ಮೋಕ್ಷ ಕೊಳದಿಂದ ಹೊರಟ ಮೆರವಣಿಗೆ ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ವಿಶ್ವೇಶ್ವರಯ್ಯ ರಸ್ತೆ, ಹೊಸಹಳ್ಳಿ ವೃತ್ತ, ನೂರಡಿ ರಸ್ತೆ ಮಾರ್ಗವಾಗಿ ಬನ್ನೂರು ರಸ್ತೆ ಮೂಲಕ ಶ್ರೀ ಕನ್ನಿಕಾ ಪರಮೇಶ್ವರಿ ದೇಗುಲದ ಬಳಿ ಅಂತ್ಯಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT