ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಎನ್‌ಎಸ್‌ಎಸ್‌ ಸ್ವಯಂಸೇವಕರಿಂದ ಸೇವೆ

ಗ್ರಾಮಗಳಲ್ಲಿ ವಿದ್ಯಾರ್ಥಿಗಳಿಂದ ಜನಜಾಗೃತಿ, ರಾಜ್ಯದ ವಿವಿಧೆಡೆ ವಾರ್‌ ರೂಂನಲ್ಲೂ ಕೆಲಸ
Last Updated 9 ಮೇ 2021, 6:40 IST
ಅಕ್ಷರ ಗಾತ್ರ

ಮಂಡ್ಯ: ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎನ್‌ಎಸ್‌) ಎಂದಾಕ್ಷಣ ವಾರ್ಷಿಕ ಶಿಬಿರಗಳು, ಕಾಲೇಜು ವಿದ್ಯಾರ್ಥಿಗಳ ಶ್ರಮದಾನ ನೆನಪಾಗುತ್ತದೆ. ಆದರೆ ಈಗಿನ ಕೋವಿಡ್‌ ಪರಿಸ್ಥಿತಿಯಲ್ಲಿ ಕಾಲೇಜು, ತರಗತಿ ಬಂದ್‌ ಆಗಿವೆ. ಆದರೆ ವಿದ್ಯಾರ್ಥಿಗಳ ಸೇವೆಗೆ ತಡೆ ಇಲ್ಲ, ಎನ್‌ಎಸ್‌ಎಸ್‌ ಸ್ವಯಂ ಸೇವಕರು ತಾವಿರುವ ಸ್ಥಳದಲ್ಲೇ ಸೇವೆಯಲ್ಲಿ ನಿರತರಾಗಿದ್ದಾರೆ.

ಸ್ವಯಂ ಸೇವಕರು ಮನೆ ಮನೆಗೆ ತೆರಳಿ ಕೋವಿಡ್‌ ಅರಿವು ಮೂಡಿಸುವುದೂ ಸೇರಿದಂತೆ ವಿವಿಧ ಸೇವಾ ಚಟುಟಿಕೆಗಳಲ್ಲಿ ನಿರತರಾಗಿದ್ದಾರೆ. ಕೊರೊನಾ ಕಟ್ಟುನಿಟ್ಟಿನ ಕರ್ಫ್ಯೂ ಜಾರಿಯಾದ ನಂತರ ನಗರದ ಸರ್ಕಾರಿ ಮಹಿಳಾ ಕಾಲೇಜಿನ ಎನ್‌ಎನ್‌ಎಸ್‌ ಸ್ವಯಂಸೇವಕರಾದ ಕಿರಣ ಕುಮಾರಿ ಅವರು ತಮ್ಮ ಊರು ಮಳವಳ್ಳಿ ತಾಲ್ಲೂಕಿನ ರಾವಣಿ ಗ್ರಾಮದಲ್ಲಿ ಸ್ವ–ರಚಿತ ಪೋಸ್ಟರ್‌ಗಳ ಮೂಲಕ ಕೋವಿಡ್‌ ಜಾಗೃತಿ ಮೂಡಿಸುತ್ತಿದ್ದಾರೆ.

ಪಿಇಎಸ್‌ ಕಾಲೇಜು ಎನ್‌ಎಸ್‌ಎಸ್‌ ಸ್ವಯಂ ಸೇವಕರು ತಮ್ಮ ಗ್ರಾಮ ಗಳಲ್ಲಿ, ಮಹಿಳಾ ಕಾಲೇಜಿನ ಸ್ವಯಂ ಸೇವಕಿಯರು ನಗರದ ವಿವಿಧ ಬಡಾವಣೆ ಗಳ ಮನೆ ಮನೆಗೆ ತೆರಳಿ ಸುರಕ್ಷತಾ ಕ್ರಮಗಳ ಬಗ್ಗೆ ಜನರಿಗೆ ತಿಳಿಸಿ ಕೊಡುತ್ತಿದ್ದಾರೆ. ಮಾಸ್ಕ್‌, ಸ್ಯಾನಿಟೈಸರ್‌ ಉಪಯೋಗದ ಬಗ್ಗೆ, ರಕ್ತದಾನ, ಪ್ಲಾಸ್ಮಾ ದಾನದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

ಸೇವೆಗೆ ಸದಾ ಸಿದ್ಧ: ಕೋವಿಡ್‌ ಸಂದರ್ಭದಲ್ಲಿ ಲ್ಯಾಬ್‌ನಲ್ಲಿ ಡೇಟಾ ಎಂಟ್ರಿ ಮಾಡಲು ರಾಜ್ಯದಾದ್ಯಂತ 2 ಸಾವಿರಕ್ಕೂ ಹೆಚ್ಚು ಮಂದಿ ತಮ್ಮ ಹೆಸರು ನೋಂದಾಯಿಸಿದ್ದು, 500ಕ್ಕೂ ಹೆಚ್ಚು ಮಂದಿ ಈಗಾಗಲೇ ಲ್ಯಾಬ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಊಟ, ಸಂಚಾರ ಭತ್ಯೆ ಮಾತ್ರ ನೀಡಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಬಳ ನೀಡಲಾಗುತ್ತಿದೆ.

ಏಪ್ರಿಲ್‌ ತಿಂಗಳಿನಲ್ಲಿ ರಕ್ತದಾನ ಶಿಬಿರ ಆಯೋಜನೆ, ಕೊರೊನಾ ಲಸಿಕಾ ಜಾಗೃತಿ, ಜಾಗೃತಿ ಜಾಥಾ, ಲಸಿಕೆ ಕೇಂದ್ರಕ್ಕೆ ಲಸಿಕೆ ಪಡೆಯುವವರನ್ನು ಕರೆತರುವುದು ಸೇರಿದಂತೆ ಸಮುದಾಯ ಅರಿವು ಮೂಡಿಸುವ ಕೆಲಸಗಳನ್ನು ಮಾಡಿದ್ದಾರೆ. ಮಂಡ್ಯ ಮಾತ್ರವಲ್ಲದೇ ರಾಜ್ಯದ ವಿವಿಧೆಡೆ ಸ್ವಯಂ ಸೇವಕರು ವಿವಿಧ ಸೇವೆಯಲ್ಲಿ ತೊಡಗಿದ್ದಾರೆ.

ಶನಿವಾರ ಚಿತ್ರದುರ್ಗ ಜಿಲ್ಲೆಯ ಎನ್‌ಎಸ್‌ಎಸ್‌ ನೋಡಲ್‌ ಹಾಗೂ ಎನ್‌ಎಸ್‌ಎಸ್‌ ಯೋಜನಾಧಿಕಾರಿಗಳು ಜಿಲ್ಲೆಯ ವಿವಿಧ ಹಳ್ಳಿಗಳಲ್ಲಿ ಅಗತ್ಯ ಇರುವ ಕುಟುಂಬಗಳಿಗೆ ಆಹಾರ ಧಾನ್ಯ ವಿತರಿಸಿದ್ದಾರೆ. ಕೊರೊನಾ ಯೋಧರಾಗಿ ಸೇವೆ ಸಲ್ಲಿಸುತ್ತಿರುವ ಪೊಲೀಸರರಿಗೆ ಗದುಗಿನ ಎಎಸ್‌ಎಸ್‌ ಕಾಲೇಜು ಎನ್‌ಎಸ್‌ಎಸ್‌ ಸ್ವಯಂ ಸೇವಕರು ಊಟದ ಪೊಟ್ಟಣ ವಿತರಣೆ ಮಾಡಿದ್ದಾರೆ.

ಇದಲ್ಲದೆ ರಾಜ್ಯದ 30 ಜಿಲ್ಲೆಗಳಲ್ಲಿ ಎನ್‌ಎಸ್‌ಎಸ್‌ ನೋಡಲ್‌ ಅಧಿಕಾರಿಗಳಿದ್ದಾರೆ. ನೋಡಲ್‌ ಅಧಿಕಾರಿಗಳು ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಿ, ಸ್ವಯಂಸೇವಕರ ಸೇವೆ ಪಡೆದುಕೊಳ್ಳಲಾಗುತ್ತಿದೆ.

‘ಸೇವೆಯ ಮಹತ್ವ ತಿಳಿದವರು ಎನ್‌ಎಸ್‌ಎಸ್‌ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಾರೆ. ಇಂತಹ ಸಂಕಷ್ಟ ಸ್ಥಿತಿಯಲ್ಲಿ ನಮ್ಮ ಸ್ವಯಂ ಸೇವರು ತಾವು ಇದ್ದ ಸ್ಥಳದಲ್ಲೇ ಶ್ರಮದಾನ ಮಾಡುತ್ತಿದ್ದಾರೆ’ ಎಂದು ಮಂಡ್ಯ ಜಿಲ್ಲಾ ಎನ್‌ಎಸ್‌ಎಸ್‌ ನೋಡಲ್‌ ಅಧಿಕಾರಿ ಎಂ.ಕೆಂಪಮ್ಮ ತಿಳಿಸಿದರು.

ಸೇವೆಗೆ ಬಂದ ಸಹಸ್ರ ಮಂದಿ

‘ರಾಜ್ಯದಾದ್ಯಂತ 5 ಲಕ್ಷ ಎನ್‌ಎಸ್‌ಎಸ್‌ ಸ್ವಯಂ ಸೇವಕರಿದ್ದು, ಇದರಲ್ಲಿ 39,400 ವಿದ್ಯಾರ್ಥಿಗಳು ಜಾಗೃತಿ ಮೂಡಿಸಲು, ಫ್ರಂಟ್‌ಲೈನ್‌ ಸೇವೆ ನೀಡಲು ನೋಂದಣಿ ಮಾಡಿಕೊಂಡಿದ್ದಾರೆ’ ಎಂದು ರಾಜ್ಯ ಎನ್‌ಎಸ್‌ಎಸ್‌ ಅಧಿಕಾರಿ ಪ್ರತಾಪ್‌ ಲಿಂಗಯ್ಯ ತಿಳಿಸಿದರು.

‘ಸ್ವಯಂ ಸೇವಕರು ಸಕ್ರಿಯವಾಗಿ ಭಾಗವಹಿಸಿ ಸಮುದಾಯದಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದರೆ ಕೊರೊನಾ ವಿರುದ್ಧದ ಹೋರಾಟ ಇನ್ನಷ್ಟು ಗಟ್ಟಿಯಾಗಲಿದೆ. ಯುವಕರು ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಇದೆ ಎಂದು ಅಸಡ್ಡೆ ತೋರುವುದು ಬಿಟ್ಟು, ನಿಯಮಗಳನ್ನು ಪಾಲಿಸಿ, ಇತರರಲ್ಲೂ ಜಾಗೃತಿ ಮೂಡಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT