ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ ಜಿಲ್ಲೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರತಿಮೆ ಸ್ಥಾಪನೆಗೆ ಒತ್ತಾಯ

Published 25 ಜೂನ್ 2024, 9:50 IST
Last Updated 25 ಜೂನ್ 2024, 9:50 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರತಿಮೆಯನ್ನು ಸ್ಥಾಪಿಸಬೇಕು ಮತ್ತು ಸರ್ಕಾರದ ವತಿಯಿಂದ ನಾಲ್ವಡಿಯವರ ಹೆಸರಿನಲ್ಲಿ ₹5 ಲಕ್ಷ ಮೌಲ್ಯದ ಪ್ರಶಸ್ತಿ ಸ್ಥಾಪಿಸಿ, ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರದಾನ ಮಾಡಬೇಕು ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಒತ್ತಾಯಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮೈಸೂರು ರಾಜಮನೆತನದ ಇತಿಹಾಸದಲ್ಲಿ ಚಿಕ್ಕದೇವರಾಜ ಒಡೆಯರ್‌, ಕಂಠೀರವ ನರಸರಾಜ ಒಡೆಯರ್‌ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಕೊಡುಗೆಗಳು ಅಗ್ರಗಣ್ಯವಾಗಿವೆ. ಚಿಕ್ಕದೇವರಾಜ ಒಡೆಯರ್‌ ಅವರು ಸಾಹಿತ್ಯ ಮತ್ತು ಸಂಗೀತಕ್ಕೆ ಹೆಚ್ಚು ಒತ್ತು ಕೊಟ್ಟರು. ಕಂಠೀರವ ನರಸರಾಜ ಒಡೆಯರ್‌ ಶೌರ್ಯಕ್ಕೆ ಮತ್ತು ಸಾಹಸಕ್ಕೆ ಹೆಸರಾಗಿ ಮೈಸೂರು ಸಂಸ್ಥಾನವನ್ನು ವಿಸ್ತರಿಸಿದವರು ಎಂದು ಬಣ್ಣಿಸಿದರು.

ಕನ್ನಂಬಾಡಿ ನಿರ್ಮಾತೃ:

ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರನ್ನು ಯಾವ ಕಾಲಕ್ಕೂ ಜನರು ಮರೆಯುವಂತಿಲ್ಲ. ಶಿಕ್ಷಣ, ಸಾಹಿತ್ಯ, ಕೃಷಿ, ಸಾಮಾಜಿಕ ಪಿಡುಗುಗಳ ಬಗ್ಗೆ ಅವರು ತೆಗೆದುಕೊಂಡ ಕ್ರಮಗಳು ಲೋಕ ಪ್ರಸಿದ್ಧವಾಗಿವೆ. ಆಡಳಿತದಲ್ಲಿ ಜನಸಾಮಾನ್ಯರು ಭಾಗವಹಿಸುವಂತೆ ಮಾಡಿ ‘ಪ್ರಜಾಪ್ರತಿನಿಧಿ’ ಸಭೆ ಸ್ಥಾಪಿಸಿದರು. ಹರಿಜನರಿಗೆ ಶಾಲೆಗಳನ್ನು ತೆರೆದರು, ಕೆರೆಕಟ್ಟೆಗಳನ್ನು ನಿರ್ಮಿಸಿದರು, ಮೈಸೂರು ವಿವಿ ಸೇರಿದಂತೆ ಅನೇಕ ಶಾಲಾ–ಕಾಲೇಜು ಸ್ಥಾಪಿಸಿದರು. ಆರ್ಥಿಕ ಪ್ರಗತಿಗಾಗಿ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ, ಗಂಧದಎಣ್ಣೆ ಕಾರ್ಖಾನೆ ಹಾಗೂ ಕನ್ನಂಬಾಡಿ ಕಟ್ಟೆಯನ್ನು ಕಟ್ಟಿ ಕೃಷಿ ಪ್ರಗತಿಗೆ ಮುನ್ನುಡಿ ಬರೆದರು ಎಂದು ವಿವರ ನೀಡಿದರು.

ಗಾಂಧೀಜಿಯವರಿಂದ ‘ರಾಜರ್ಷಿ’ ಎಂದು ಕರೆಸಿಕೊಂಡ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಸಾಧನೆ ಮತ್ತು ನೆನಪುಗಳನ್ನು ಮುಂದಿನ ತಲೆಮಾರಿಗೆ ದಾಟಿಸಬೇಕೆಂಬ ಹಂಬಲದಿಂದ ಕರ್ನಾಟಕ ಸಂಘ 2024ನೇ ಪ್ರಸಕ್ತ ವರ್ಷದಿಂದ ‘ಕೃಷ್ಣರಾಜ ಒಡೆಯರ್‌’ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿ, ಈ ಬಾರಿ ಸಂಗೀತ ನಿರ್ದೇಶಕ ಹಂಸಲೇಖ ಅವರನ್ನು ಆಯ್ಕೆ ಮಾಡಿದ್ದೇವೆ ಎಂದರು.

ಜೀರ್ಣೋದ್ಧಾರಕ್ಕೆ ಆಗ್ರಹ:

ಜಿಲ್ಲೆಯಲ್ಲಿರುವ ಅಂಬೇಡ್ಕರ್‌ ಭವನ, ರೈತ ಸಭಾಂಗಣ, ರಂಗಮಂದಿರ, ಶಿವಪುರ ಧ್ವಜ ಸತ್ಯಾಗ್ರಹ ಭವನ ಮುಂತಾದ ಕಟ್ಟಡಗಳು ಶಿಥಿಲಾವಸ್ಥೆ ತಲುಪಿವೆ. ಇವುಗಳನ್ನು ಜೀರ್ಣೋದ್ಧಾರ ಮಾಡುವ ಮೂಲಕ ಕಲೆ, ಸಾಹಿತ್ಯ, ಸಂಗೀತ, ರಂಗಭೂಮಿ ಚಟುವಟಿಕೆಗಳನ್ನು ನಡೆಸಲು ಅನುವು ಮಾಡಿಕೊಡಬೇಕು. ಜಿಲ್ಲಾಡಳಿತ ಮತ್ತು ಜಿಲ್ಲೆಯ ಜನಪ್ರತಿನಿಧಿಗಳು ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ಕೂಡಲೇ ‘ಸಾರ್ವಜನಿಕ ಸಭೆ’ ಕರೆದು ಜಿಲ್ಲೆಯ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು. ಜನರು ಪ್ರಶ್ನೆ ಮಾಡಿದರೆ ಅದನ್ನೇ ವಿರೋಧ ಎಂದು ಯುವ ರಾಜಕಾರಣಿಗಳು ತಪ್ಪಾಗಿ ಭಾವಿಸಿಕೊಂಡಿದ್ದಾರೆ. ಸ್ವಾತಂತ್ರ್ಯ ಬಂದು 76 ವರ್ಷ ಕಳೆದರೂ ಜಿಲ್ಲೆಯಲ್ಲಿ ಸುಸಜ್ಜಿತ ಬಯಲು ರಂಗಮಂದಿರ ಸ್ಥಾಪನೆಯಾಗದಿರುವುದು ಬೇಸರದ ಸಂಗತಿ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಸಂಘದ ಮಂಜುಳಾ ಉದಯಶಂಕರ್‌, ತಗ್ಗಹಳ್ಳಿ ವೆಂಕಟೇಶ್‌, ನಾಗಪ್ಪ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT