ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕಿಹೆಬ್ಬಾಳು: ದಶಕಗಳ ಬಳಿಕ ನನಸಾಗುತ್ತಿರುವ ಕನಸು

ಬೆಂಗಳೂರು– ಜಾಲ್ಸೂರು ಹೆದ್ದಾರಿ ಕಾಮಗಾರಿ
Last Updated 30 ಏಪ್ರಿಲ್ 2021, 2:55 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ಹೇಮಾವತಿ ನದಿಗೆ ಮೈಸೂರು ಮಹಾರಾಜರ ಕಾಲದಲ್ಲಿ ತಾಲ್ಲೂಕಿನ ಅಕ್ಕಿಹೆಬ್ಬಾಳು ಬಳಿಯ ಹೊಸಪಟ್ಟಣದ್ವೀಪದ ಸಮೀಪ ನಿರ್ಮಿಸಿದ್ದ ಪ್ರಥಮ ಸೇತುವೆ ವಿಸ್ತರಣೆ ಬೇಡಿಕೆ ಹಲವು ವರ್ಷಗಳಿಂದ ಕೇಳಿ ಬರುತ್ತಿತ್ತು. ಆದರೆ, ಈಗ ಮಾಗಡಿ- ಬೆಂಗಳೂರು – ಜಾಲ್ಸೂರು ಹೊಸ ಹೆದ್ದಾರಿ ಕಾಮಗಾರಿ ಮೂಲಕ ಆ ಸೇತುವೆ ಪಕ್ಕದಲ್ಲೇ ಹೊಸ ಸೇತುವೆ ನಿರ್ಮಾಣವಾಗುತ್ತಿದೆ. ಇದರಿಂದಾಗಿ ಸ್ಥಳೀಯರು ಸಂತಸಗೊಂಡಿದ್ದಾರೆ.

ಶತಾಯುಷಿಯ ಕನಸು ಈಗ ನನಸು: ಅಕ್ಕಿಹೆಬ್ಬಾಳು ಬಳಿಯ ಕಿರಿದಾದ ಮತ್ತು ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶವಿದ್ದ ಈ ಸೇತುವೆಯಲ್ಲಿ ವಾಹನ ಹಾಗೂ ಜನ, ಜಾನುವಾರುಗಳ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಇದನ್ನು ಮನಗೊಂಡ ಅಕ್ಕಿಹೆಬ್ಬಾಳಿನ ಸಾಹಿತಿ, ಶತಾಯುಷಿ ಎ.ಎನ್.ಮೂರ್ತಿರಾಯರಿಗೆ ನೂರು ವರ್ಷ ತುಂಬಿದಾಗ ಅವರನ್ನು ಅಭಿನಂದಿಸಲು ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಮೂರ್ತಿರಾಯರ ಮನೆಗೆ ಹೋಗಿದ್ದರು. ಈ ಸಂದರ್ಭ ‘ನನ್ನೂರು ಅಕ್ಕಿಹೆಬ್ಬಾಳಿಗೆ ಹೋಗುವ ಸೇತುವೆ ಕಿರಿದಾಗಿದೆ. ಅಲ್ಲೊಂದು ಹೊಸ ಸೇತುವೆ ನಿರ್ಮಿಸಿಕೊಡಿ. ನನ್ನೂರಿನ ಜನರ ಬಹುದಿನದ ಆಸೆ ಈಡೇರಿಸಿ’ ಎಂದು ಕೇಳಿಕೊಂಡಿದ್ದರು.

ಆ ಕನಸು ಮಾಗಡಿ- ಬೆಂಗಳೂರು – ಜಾಲ್ಸೂರು ಹೆದ್ದಾರಿ ಕಾಮಗಾರಿಯಿಂದ ನನಸಾಗುತ್ತಿರುವು ಸ್ಥಳೀಯರಲ್ಲಿ ಸಂತಸ ತಂದಿದೆ. ದಕ್ಷಿಣ ಕನ್ನಡದ ಜಾಲ್ಸೂರಿನಿಂದ – ಬೆಂಗಳೂರಿನ ಮಾಗಡಿ ವರೆಗೆ ಸುಳ್ಯ, ಮಡಿಕೇರಿ, ಕುಶಾಲನಗರ, ರಾಮನಾಥಪುರ, ಸಾಲಿಗ್ರಾಮ, ಭೇರ್ಯ, ಅಕ್ಕಿಹೆಬ್ಬಾಳು, ಹರಿಹರಪುರ ಮೂಲಕ ಈ ಹೆದ್ದಾರಿ ನಿರ್ಮಾಣವಾಗುತ್ತಿದೆ.

ಹೊಸಹೊಳಲು ಬಳಿ ಕೆ.ಆರ್.ಪೇಟೆಗೆ ಸಂಪರ್ಕಿಸಲು ಬೈಪಾಸ್ ರಸ್ತೆ ನಿರ್ಮಾಣವಾಗುತ್ತಿದ್ದು, ಹೆದ್ದಾರಿಯು ಅಗ್ರಹಾರ ಬಾಚಹಳ್ಳಿಗೇಟ್ ಬಳಿ ನಾಗಮಂಗಲ ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಅಲ್ಲಿಂದ ಸಂತೇಬಾಚಹಳ್ಳಿ ಕ್ರಾಸ್ ಮಾರ್ಗವಾಗಿ ಬೋಗಾದಿ ನಾಗಮಂಗಲ, ಬೆಳ್ಳೂರುಕ್ರಾಸ್ ತಲುಪಿ ಬೆಂಗಳೂರು ಹೆದ್ದಾರಿ ಮೂಲಕ ಮಾಗಡಿಗೆ ಸಂಪರ್ಕ ಕಲ್ಪಿಸಿ ಬೆಂಗಳೂರು ನಗರ ತಲುಪಲಿದೆ. ಸುಮಾರು 300 ಕಿ.ಮೀ ರಸ್ತೆಯನ್ನು ಹೈದರಾಬಾದ್ ಮೂಲದ ಕೆ.ಎನ್.ಆರ್ ಕನ್‌ಸ್ಟ್ರಕ್ಷನ್‌ ಕಂಪನಿಯು ಕೆ–ಶಿಪ್‌ ಯೋಜನೆ ಅಡಿಯಲ್ಲಿ ನಿರ್ಮಿಸುತ್ತಿದೆ. ಈ ಕಾಮಗಾರಿಯ ಭಾಗವಾಗಿ ಅಕ್ಕಿಹೆಬ್ಬಾಳಿನ ಹಳೆ ಸೇತುವೆಗೆ ಹೊಂದಿ ಕೊಂಡಂತೆ ಹೊಸ ಸೇತುವೆ ಕಾಮಗಾರಿ ನಡೆಯುತ್ತಿದೆ.

ನದಿಯಲ್ಲಿ 10 ಪಿಲ್ಲರ್‌ ನಿರ್ಮಿಸಿ 8 ಅಡಿಗಳಷ್ಟು ದಪ್ಪದಾದ ಬೀಮ್ ತಯಾರಿಸಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸುಮಾರು ₹ 30 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗುತ್ತಿದೆ. ಎರಡು ಬೃಹತ್ ವಾಹನಗಳು ಯಾವುದೇ ಅಡೆತಡೆ ಇಲ್ಲದಂತೆ ಒಂದೇ ಬಾರಿ ಸಾಗಲು ಸಾಧ್ಯವಾಗುವಂತೆ ಸೇತುವೆ ನಿರ್ಮಿಸಲಾಗುತ್ತಿದೆ.

ತಾಲ್ಲೂಕಿನ ಜನರು ತಮ್ಮ ಸರಕು, ಸಾಮಗ್ರಿಗಳನ್ನು ಸಾಗಿಸಲು ಹೊಸ ಸೇತುವೆ ಸಹಕಾರಿಯಾಗಲಿದ್ದು, ಕೆ.ಆರ್.ನಗರ, ಸಾಲಿಗ್ರಾಮ, ರಾಮನಾಥ ಪುರ, ಕುಶಾಲನಗರ, ಹಾಸನ, ಹೊಳೆನರಸೀಪುರ, ಹುಣಸೂರು, ಮೈಸೂರಿಗೆ ಸಂಪರ್ಕಿಸಲು ಅನುಕೂಲ ವಾಗಲಿದೆ. ಹೊಸ ಹೆದ್ದಾರಿ ನಿರ್ಮಾಣದಿಂದ ಈ ಭಾಗದಲ್ಲಿ ಹೊಸ ಉದ್ಯೋಗವಕಾಶಗಳು, ಹೆಚ್ಚಿನ ಸಾರಿಗೆ ಸಂಪರ್ಕ ಮತ್ತು ಗ್ರಾಮಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಮಹಾರಾಜರ ಕಾಲದಲ್ಲಿ ನಿರ್ಮಾಣವಾಗಿದ್ದ ಸೇತುವೆಗೆ ನೂರು ವರ್ಷ ಸಮೀಪಿಸುತ್ತಿದ್ದರೂ ಬಲಿಷ್ಟವಾಗಿದೆ. ಹಳೆ ಸೇತುವೆಯಂತೆ ಹೊಸ ಸೇತುವೆಯೂ ಉತ್ತಮ ಗುಣ ಮಟ್ಟದಿಂದ ನಿರ್ಮಾಣವಾಗಬೇಕು ಎಂಬುದು ನಮ್ಮ ಆಶಯ ಎಂದು ಅಕ್ಕಿಹೆಬ್ಬಾಳು ಮಹೇಶ್ ತಿಳಿಸಿದರು.

ಹೊಳೆಯಿಂದಾಚೆ ಇರುವ ಗ್ರಾಮಗಳು ಮತ್ತು ಇತರ ಜಿಲ್ಲಾ ಕೇಂ ದ್ರಗಳಿಗೆ, ರೈಲ್ವೆ ನಿಲ್ದಾಣಕ್ಕೆ ಶೀಘ್ರವಾಗಿ ತೆರಳಲು ಹೊಸ ಸೇತುವೆ ಯಿಂದ ಅನುಕೂಲವಾಗಲಿದೆ. ಮಾಗಡಿ- ಬೆಂಗಳೂರು- ಜಾಲ್ಸೂರು ರಸ್ತೆ ನಿರ್ಮಾಣದಿಂದ ಈ ಭಾಗಕ್ಕೆ ತುಂಬಾ ಅನುಕೂಲವಾಗಲಿದೆ ಎಂದು ಹರಿಹರ ಪುರದ ಪೂರ್ಣಚಂದ್ರ ತೇಜಸ್ವಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT