ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಲಕ–ನಿರ್ವಾಹಕರ ಮನವೊಲಿಸುವ ಯತ್ನ ವಿಫಲ

2ನೇ ದಿನಕ್ಕೆ ತಲುಪಿದ ಸಾರಿಗೆ ಸಂಸ್ಥೆ ಸಿಬ್ಬಂದಿಯ ಮುಷ್ಕರ, ಬಸ್‌ ಇಲ್ಲದೆ ಜನರ ಪರದಾಟ
Last Updated 12 ಡಿಸೆಂಬರ್ 2020, 11:58 IST
ಅಕ್ಷರ ಗಾತ್ರ

ಮಂಡ್ಯ: ಸಾರಿಗೆ ಸಂಸ್ಥೆ ಸಿಬ್ಬಂದಿ ಮುಷ್ಕರದಿಂದ ಜಿಲ್ಲೆಯಾದ್ಯಂತ ಬಸ್‌ ಸಂಚಾರ ಸ್ಥಗಿತಗೊಂಡಿದೆ. ಮುಷ್ಕರ ನಿರತ ಸಿಬ್ಬಂದಿಯನ್ನು ಮನವೊಲಿಸಲು ಶನಿವಾರ ನಗರದ ವಿಭಾಗೀಯ ಕಚೇರಿಯಲ್ಲಿ ನಡೆದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಭೆ ವಿಫಲಗೊಂಡಿತು.

ಮರಳಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲು ಸಾರಿಗೆ ಸಂಸ್ಥೆ ಕೇಂದ್ರ ಕಚೇರಿಯ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ದೇವರಾಜು ಬಂದಿದ್ದರು. ಸಭೆಯಲ್ಲಿ ಮಾತನಾಡಿದ ಅವರು ‘ಇಲಾಖೆಯು ಮುಖಂಡರೊಂದಿಗೆ ಚರ್ಚಿಸುತ್ತಿದ್ದು, ಸಿಬ್ಬಂದಿ ಬೇಡಿಕೆಗಳನ್ನು ಶೀಘ್ರದಲ್ಲಿ ಈಡೇರಿಸಲಾಗುವುದು. ಸಾರ್ವಜನಿಕರು ಬಸ್ ಗಳಿಲ್ಲದೆ ಸಂಕಷ್ಟದಲ್ಲಿದ್ದು, ಶೀಘ್ರ ಕರ್ತವ್ಯಕ್ಕೆ ಹಾಜರಾಗಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಮಿಕ ಮುಖಂಡರು, ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯುತ್ತಿದ್ದು ಸಮಸ್ಯೆ ಸರ್ಕಾರದ ಹಂತದಲ್ಲೇ ಬಗೆಹರಿಯಬೇಕು. ಅಲ್ಲಿ ನಡೆಯುತ್ತಿರುವ ಸಭೆ ಫಲಪ್ರದವಾಗಬೇಕು. ಅಲ್ಲಿಂದ ಸೂಚನೆ ಬಂದ ನಂತರವಷ್ಟೇ ಮುಷ್ಕರ ಕೈಬಿಡಲಾಗುವುದು. ಅಲ್ಲಿಯವರೆಗೂ ಹೋರಾಟ ಮುಂದುವರಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ಕಿರಣ್ ಕುಮಾರ್, ಕಾರ್ಮಿಕ ಮುಖಂಡರಾದ ಸುಧೀರ್, ಮೋಹನ್, ನಂಜುಂಡಯ್ಯ, ರಾಮು ಇದ್ದರು.

ಮುಂದುವರಿದ ಹೋರಾಟ: ಸರ್ಕಾರಿ ನೌಕರರು ಎಂದು ಪರಿಗಣನೆ ಮಾಡಬೇಕು ಎಂದು ಒತ್ತಾಯಿಸಿ ಸಾರಿಗೆ ಸಂಸ್ಥೆ, ಮಂಡ್ಯ ವಿಭಾಗದ ವಿವಿಧ ಘಟಕಗಳ ಚಾಲಕ-ನಿರ್ವಾಹಕರು ಹಾಗೂ ಇತರ ಸಿಬ್ಬಂದಿ ನಗರದ ಸರ್ ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ವಿವಿಧ ಘಟಕಗಳಿಂದ ಸ್ವಂತ ವಾಹನಗಳಲ್ಲಿ ಬಂದಿದ್ದ ಸಿಬ್ಬಂದಿ ಕ್ರೀಡಾಂಗಣದಲ್ಲಿ ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ವೇತನ ತಾರತಮ್ಯ, ಹಿರಿಯ ಅಧಿಕಾರಿಗಳ ಕಿರುಕುಳ, ವೈದ್ಯಕೀಯ ವೆಚ್ಚ ಮರುಪಾವತಿ ವಿಳಂಬ, ಕೆಲಸದ ಒತ್ತಡ ಸೇರಿದಂತೆ ವಿವಿಧ ಸಮಸ್ಯೆಗಳಿದ್ದು, ಹಲವಾರು ವರ್ಷಗಳಿಂದ ಮನವಿ ಸಲ್ಲಿಸಿದರೂ ಪರಿಹಾರ ದೊರೆಯುತ್ತಿಲ್ಲ. ಈ ಬಾರಿ ಸೂಕ್ತ ತೀರ್ಮಾನವಾಗುವವರೆಗೂ ಮುಷ್ಕರ ಕೈಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸಮಿತಿ ಸಭೆ ನಡೆಸಿ ಸೂಕ್ತ ತೀರ್ಮಾನ ಆಗುವವರೆಗೂ ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ಅಧಿಕಾರಿಗಳು ನಮ್ಮ ಮನವೊಲಿಸಲು ಯತ್ನಿಸಿದರೂ ನಾವು ಅದಕ್ಕೆ ಮಣಿಯುವುದಿಲ್ಲ. ಜನರಿಗೆ ತೊಂದರೆಯಾಗುತ್ತಿದೆ ಎಂಬ ಅರಿವು ನಮಗೂ ಇದೆ. ಆದರೆ ಸಮಸ್ಯೆ ಅರಿವು ಸರ್ಕಾರಕ್ಕೆ ಇರಬೇಕು. ಮುಷ್ಕರದ ಮಾಹಿತಿ ಇದ್ದರೂ ನಮ್ಮ ಮುಖಂಡರೊಂದಿಗೆ ಮಾತುಕತೆ ನಡೆಸಲು ಮುಂದಾಗಿಲ್ಲ. ನಮ್ಮ ಬೇಡಿಕೆಗಳ ಈಡೇರಿಸುವ ಕುರಿತು ಯಾವುದೇ ಭರವಸೆ ಕೊಟ್ಟಿಲ್ಲ ಎಂದು ಹೇಳಿದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಭರವಸೆ ಕೊಡುವವರೆಗೂ ನಾವು ನಮ್ಮ ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ. ಹಲವು ವರ್ಷಗಳಿಂದ ಬರಿ ನೆಪ ಹೇಳುತ್ತಲೇ ದಿನ ದೂಡುತ್ತಿದ್ದಾರೆ. ಜೀವವನ್ನು ಒತ್ತೆ ಇಟ್ಟು ನಿತ್ಯ ಸಾವಿರ ಕಿ.ಮೀ ವರೆಗೆ ಚಾಲಕರು ಬಸ್‌ ಓಡಿಸುತ್ತಾರೆ. ಅವರಿಗೆ ಭದ್ರತೆ ಎನ್ನುವುದೇ ಇರುವುದಿಲ್ಲ. ಗಾಡಿಗೆ ಸಣ್ಣಪುಟ್ಟ ಸಮಸ್ಯೆಯಾದರೂ ಅದನ್ನು ಚಾಲಕರ ಮೇಲೆ ಹಾಕುತ್ತಾರೆ. ಈ ಮನೋಭಾವವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ವಿವಿಧ ಘಟಕಗಳಿಂದ ಬಂದ 200ಕ್ಕೂ ಹೆಚ್ಚು ಸಿಬ್ಬಂದಿ ಹಾಜರಿದ್ದರು.

ಖಾಸಗಿ ವಾಹನಗಳಿಂದ ದುಪ್ಪಟ್ಟು ದರ ವಸೂಲಿ

2ನೇ ದಿನವೂ ಮುಷ್ಕರ ಮುಂದುವರಿದ ಕಾರಣ ಜಿಲ್ಲೆಯಾದ್ಯಂತ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು. ಸಾರ್ವಜನಿಕರು, ಕರ್ತವ್ಯಕ್ಕೆ ತೆರಳಬೇಕಾಗಿದ್ದ ವಿವಿಧ ಇಲಾಖೆಗಳ, ಖಾಸಗಿ ಕಂಪನಿಗಳ ನೌಕರರು ಬಸ್‌ಗಳಿಲ್ಲದೇ ಪರದಾಡಬೇಕಾಯಿತು. ಬಸ್‌ಗಳು ಇಲ್ಲದ ಕಾರಣ ಬೆಂಗಳೂರು–ಮೈಸೂರು ನಡುವೆ ಸಂಚರಿಸುವ ರೈಲುಗಳು ಕಿಕ್ಕಿರಿದು ತುಂಬಿದ್ದವು. ಕೋವಿಡ್‌ ಅಂತರ ಮಾಯವಾಗಿತ್ತು.

ಬಸ್‌ಗಳಿಲ್ಲದೇ ಪ್ರಯಾಣಿಕರು ನಗರದ ಬಸ್‌ ನಿಲ್ದಾಣದಲ್ಲಿ ಪರದಾಡಿದರು. ಶನಿವಾರ ಸೇವೆ ಆರಂಭವಾಗಬಹುದು ಎಂಬ ನಿರೀಕ್ಷೆಯಿಂದ ಬಂದಿದ್ದ ಪ್ರಯಾಣಿಕರಿಗೆ ನಿರಾಸೆಯಾಯಿತು. ಖಾಸಗಿ ಬಸ್‌, ಆಟೊ, ಟೊಂಪೊಗಳಲ್ಲಿ ದುಪ್ಪಟ್ಟು ದರ ಕೊಟ್ಟು ಪ್ರಯಾಣ ಮಾಡಿದರು. ನಗರದ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಖಾಸಗಿ ವಾಹನಗಳು ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದವು.

ಬಸ್‌, ಟಂಪೊ, ಆಟೊಗಳು ಮಿತಿಗಿಂತ ಹೆಚ್ಚಾಗಿ ಜನರನ್ನು ತುಂಬಿಕೊಂಡು ಹೋಗುತ್ತಿದ್ದವು. ಇಲ್ಲೂ ಕೋವಿಡ್‌ ಅಂತರ ಇರಲಿಲ್ಲ. ಮುಷ್ಕರದ ಅವಧಿಯನ್ನು ಖಾಸಗಿ ವಾಹನಗಳ ಮಾಲೀಕರು ಉಪಯೋಗಿಸಿಕೊಂಡು ಹಣ ಸುಲಿಗೆಯಲ್ಲಿ ನಿರತರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT