ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ಈದ್‌–ಉಲ್‌–ಫಿತ್ರ್‌: ಸಾಮೂಹಿಕ ಪ್ರಾರ್ಥನೆ

2 ವರ್ಷಗಳ ನಂತರ ಈದ್ಗಾ ಮೈದಾನಕ್ಕೆ ಬಂದ ಸಾವಿರಾರು ಮುಸ್ಲಿಮರು, ಬಡವರಿಗೆ ದಾನ
Last Updated 3 ಮೇ 2022, 13:18 IST
ಅಕ್ಷರ ಗಾತ್ರ

ಮಂಡ್ಯ: ಶಾಂತಿ ಸೌಹಾರ್ದ ಸಂದೇಶ ಸಾರುವ ಈದ್‌–ಉಲ್‌–ಫಿತ್ರ್‌ ಆಚರಣೆ ಅಂಗವಾಗಿ ಮಂಗಳವಾರ ಸಾವಿರಾರು ಮುಸ್ಲಿಮರು ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಕಳೆದೆರಡು ವರ್ಷಗಳಿಂದ ಕೋವಿಡ್‌ ಇದ್ದ ಕಾರಣ ಈದ್‌–ಉಲ್‌–ಫಿತ್ರ್‌ ಮನೆಯ ಆಚರಣೆಗೆ ಮಾತ್ರ ಸೀಮಿತವಾಗಿತ್ತು. ಆದರೆ ಈ ಬಾರಿ ಕೋವಿಡ್ ಭಯ ಇಲ್ಲದ ಕಾರಣ ಎಲ್ಲರೂ ಹೊರಗೆ ಬಂದು ಮಸೀದಿ, ಈದ್ಗಾ ಮೈದಾನಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆ ಸಲ್ಲಿಸುವ ಸ್ಥಳದಲ್ಲೇ ಬಡವರಿಗೆ ದಾನ ಮಾಡುವ ದೃಶ್ಯಗಳು ಸಾಮಾನ್ಯವಾಗಿದ್ದರು.

ರಂಜಾನ್‌ ಮಾಸದಲ್ಲಿ ತಿಂಗಳಕಾಲ ಉಪವಾಸ ಆಚರಣೆ ಮಾಡಿದ್ದ ಮುಸ್ಲಿಮರು ಸೋಮವಾರ ರೋಜಾ ಪೂರ್ಣಗೊಳಿಸಿದರು. ಸಂಜೆ ವೇಳೆ ಚಂದ್ರನ ದರ್ಶನ ಮಾಡಿ ಉಪವಾಸ ಅಂತ್ಯಗೊಳಿಸಿದರು. ಮಂಗಳವಾರ ಹೊಳಲು ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ 10 ಸಾವಿರಕ್ಕೂ ಹೆಚ್ಚು ಮಸ್ಲಿಮರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.

ಗಾಂಧಿನಗರ, ಬೀಡಿ ಕಾರ್ಮಿಕರ ಕಾಲೊನಿಯಲ್ಲಿ ಭಕ್ತಿಪೂರ್ವಕ ವಾತಾವರಣ ನಿರ್ಮಾಣವಾಗಿತ್ತು. ಮನೆಯ ಮಂದಿಯೆಲ್ಲಾ ಹೊಸ ಉಡುಗೆ ತೊಟ್ಟು ಆಚರಣೆಗೆ ಮತ್ತಷ್ಟು ಮೆರುಗು ತುಂಬಿದರು. ಬಿಸಿಲಿನ ಝಳದ ನಡುವೆಯೂ ಮುಸ್ಲಿಮರು ಈದ್‌–ಉಲ್‌–ಫಿತ್ರ್‌ ಆಚರಣೆ ಮಾಡಿದರು. ಮಹಿಳೆಯರು ಮನೆಯಲ್ಲಿ ಪ್ರಾರ್ಥನೆ ಸಲ್ಲಿಸಿದರೆ, ಮಕ್ಕಳು ಹಾಗೂ ಪುರುಷರು ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆ ಮುಕ್ತಾಯವಾಗುತ್ತಿದ್ದಂತೆ ಪರಸ್ಪರ ಹಸ್ತಲಾಘವ, ಅಪ್ಪಿಕೊಳ್ಳುವ ಮೂಲಕ ಆಚರಣೆಯ ಶುಭಾಶಯ ಕೋರಿದರು.

ಈದ್ಗಾ ಮೈದಾನ ರಸ್ತೆಯಲ್ಲಿ ಜಾತ್ರೆಯ ವಾತಾವರಣ ಇತ್ತು. ಹಬ್ಬಕ್ಕೆ ಬೇಕಾದ ವಸ್ತುಗಳ ಮಾರಾಟ ಒಂದೆಡೆಯಾದರೆ, ಮಕ್ಕಳಿಗೆ ಬೇಕಾದ ಆಟಿಕೆ, ಜ್ಯೂಸ್ ಹಾಗೂ ಐಸ್‌ಕ್ರೀಮ್ ಮಾರಾಟ ಭರ್ಜರಿಯಾಗಿ ನಡೆಯಿತು. ದಾನ ಮಾಡುವುದು ಈ ಮಾಸದ ಇನ್ನೊಂದು ವಿಶೇಷವಾಗಿದ್ದು, ಹಿಂದೂ ಮುಸ್ಲಿಂ ಎನ್ನದೆ ಎಲ್ಲರಿಗೂ ದಾನ ಮಾಡುವ ದೃಶ್ಯಗಳು ಸಾಮಾನ್ಯವಾಗಿದ್ದವು.

‘ಈದ್‌ ಉಪವಾಸ ವಯಸ್ಕರಿಗೆ ಮತ್ತು ಆರೋಗ್ಯವಂತರಿಗೆ ಕಡ್ಡಾಯವಾಗಿದೆ. ಚಿಕ್ಕ ಮಕ್ಕಳು, ಗರ್ಭಿಣಿಯರು, ಮಾನಸಿಕ ಅಸ್ವಸ್ಥರು, ದೈಹಿಕ ಅಸಮರ್ಥರು, ಬಾಣಂತಿಯರಿಗೆ ವಿನಾಯಿತಿ ನೀಡಲಾಗಿದೆ. ರಂಜಾನ್ ಅವಧಿಯಲ್ಲಿ ಪ್ರತಿದಿನ ಐದು ಬಾರಿ ಪ್ರಾರ್ಥನೆ ಹಾಗೂ ಖುರಾನ್ ಪಠಣ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ’ಎಂದು ಪ್ರಾರ್ಥನೆಯಲ್ಲಿ ಭಾಗವಹಿಸಿದ್ದ 3ನೇ ವಾರ್ಡ್‌ ಸದಸ್ಯ ಜಾಕೀರ್‌ ಪಾಷಾ ತಿಳಿಸಿದರು.

‘ಭಾರತ ದೇಶದ ಎಲ್ಲಾ ಜನರು ಶಾಂತಿ, ನೆಮ್ಮದಿಯಿಂದ ಇರಲೆಂದು ಪ್ರಾರ್ಥನೆ ಸಲ್ಲಿಸಿದ್ದೇವೆ. ಈ ವರ್ಷ ಈದ್‌ ಉಪ್‌ ಫಿತ್ರ್‌ ಜೊತೆಯಲ್ಲಿ ಬಸವ ಜಯಂತಿಯೂ ಬಂದಿರುವುದು ಸಂತಸದ ವಿಷಯವಾಗಿದೆ. ರಂಜಾನ್‌ ಮಾಸದಲ್ಲಿ ಮುಸ್ಲಿಮುರು ಪುಣ್ಯದ ಕೆಲಸವನ್ನೇ ಮಾಡುತ್ತಾರೆ. ಉಪವಾಸ ಇದ್ದು ಭಾರತಕ್ಕೆ ಒಳ್ಳೆಯ ಭವಿಷ್ಯ ಬರಲೆಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇವೆ’ ಎಂದು ಜೆಡಿಎಸ್‌ ಮುಖಂಡ ಜಫ್ರುಲ್ಲಾಖಾನ್‌ ತಿಳಿಸಿದರು.

ಸಾಮೂಹಿಕ ಪ್ರಾರ್ಥನೆ ವೇಳೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಈದ್ಗಾ ಮೈದಾನ ಸಂಪರ್ಕಿಸುವ ಎಲ್ಲಾ ರಸ್ತೆಗಳಲ್ಲೂ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT