ಮಂಡ್ಯ: ‘ಅಬಕಾರಿ ಇಲಾಖೆ ವತಿಯಿಂದ ಏಪ್ರಿಲ್‌ನಿಂದ ಜುಲೈವರೆಗೆ ಜಿಲ್ಲೆಯ ವಿವಿಧ ವಲಯ, ತಾಲ್ಲೂಕು ವ್ಯಾಪ್ತಿಯಲ್ಲಿ 1,020 ಕಡೆ ದಾಳಿ ನಡೆಸಿ 167 ಆರೋಪಿಗಳನ್ನು ಬಂಧಿಸಿ, ₹61 ಲಕ್ಷ ದಂಡ ವಸೂಲಿ ಮಾಡಲಾಗಿದೆ’ ಎಂದು ಇಲಾಖೆಯ ಉಪ ಆಯುಕ್ತ ಬಿ.ಶಿವಪ್ರಸಾದ್ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘314 ಲೀಟರ್ ಮದ್ಯ, 3 ಲೀಟರ್ ಬಿಯರ್ ಹಾಗೂ 16 ದ್ವಿಚಕ್ರ ವಾಹನ ವಶಪಡಿಸಿಕೊಂಡು 269 ಪ್ರಕರಣ ದಾಖಲು ಮಾಡಲಾಗಿದೆ. ಅವುಗಳಲ್ಲಿ 30 ಘೋರ, ಸಾಮಾನ್ಯ 73, 166 ಡಾಬಾ ಮತ್ತು ಕಿರಾಣಿ ಅಂಗಡಿ ಪ್ರಕರಣಗಳು ಸೇರಿವೆ’ ಎಂದು ಹೇಳಿದರು.
‘ಏಪ್ರಿಲ್–ಜುಲೈ ಅವಧಿಯಲ್ಲಿ ಕೊರೊನಾ ಸೋಂಕಿನ ಕಾರಣ ಮದ್ಯದಂಗಡಿ ವ್ಯಾಪಾರ ವಹಿವಾಟಿನಲ್ಲಿ ವ್ಯತ್ಯಯ ಉಂಟಾಗಿದ್ದು, ಮದ್ಯ ಮತ್ತು ಬಿಯರ್ ಮಾರಾಟದಲ್ಲಿ ಕಡಿಮೆ ಆಗಿದೆ. 4,80,681 ಬಾಕ್ಸ್ ದೇಶೀಯ ತಯಾರಿಕಾ ಮದ್ಯ, 1,00,534 ಬಾಕ್ಸ್ ಬಿಯರ್ ಮಾರಾಟವಾಗಿದೆ. ಕಳೆದ ಸಾಲಿನ ಇದೇ ಅವಧಿಯಲ್ಲಿ 6,34,069 ಬಾಕ್ಸ್ ಮದ್ಯ, 2,22,456 ಬಾಕ್ಸ್ ಬಿಯರ್ ಮಾರಾಟವಾಗಿತ್ತು. ಒಟ್ಟಾರೆ ಶೇ 24.19 (1,53,388 ಬಾಕ್ಸ್) ಮದ್ಯ ಹಾಗೂ, ಶೇ 54.81 (1,21,919 ಬಾಕ್ಸ್) ಬಿಯರ್ ಬಳಕೆ ಕಡಿಮೆಯಾಗಿದೆ’ ಎಂದು ವಿವರಿಸಿದರು.
‘ಲಾಕ್‌ಡೌನ್ ಅವಧಿ ನಂತರ ಮದ್ಯದಂಗಡಿ ತೆರೆದ ಸಂದರ್ಭದಲ್ಲಿ ಸ್ಟಾಕ್ ವ್ಯತ್ಯಾಸ ಬಂದ 15 ಅಂಗಡಿಗಳನ್ನು ಅಮಾನತಿನಲ್ಲಿ ಇಡಲಾಗಿತ್ತು. ನಂತರ ದಂಡ ವಿಧಿಸಿ, ಎಚ್ಚರಿಕೆ ನೀಡಿ ತೆರೆಸಲಾಯಿತು. ಜಿಲ್ಲೆಯಲ್ಲಿ 10 ಮದ್ಯದಂಗಡಿಗಳಲ್ಲಿ ಕಳ್ಳತನ ಆಗಿದ್ದು, ಪ್ರಕರಣಗಳು ದಾಖಲಾಗಿದೆ. ಎಂಆರ್‌ಪಿ ಔಟ್‌ಲೆಟ್‌ಗಳಲ್ಲಿ ನಿಗದಿತ ಬೆಲೆಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಸನ್ನದುದಾರರ ಸಭೆ ನಡೆಸಲಾಗಿದ್ದು, ನಿಗದಿತ ದರದಲ್ಲಿ ಮಾರುವಂತೆ ಸೂಚನೆ ನೀಡಲಾಗಿದೆ’ ಎಂದರು.
‘ದೇಶದ ವಿವಿಧ ಭಾಗಗಳಲ್ಲಿ ಅಕ್ರಮವಾಗಿ ತಯಾರಿಸಿದ ಮದ್ಯ ಸೇವನೆಯಿಂದ ನೂರಾರು ಮಂದಿ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸಲಾಗಿದೆ. ಸರ್ಕಾರದಿಂದ ಸೂಚನೆ ಬಂದ ಹಿನ್ನೆಲೆಯಲ್ಲಿ ಆಗಿಂದಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಮದ್ಯ ತಯಾರಿಕೆಯಲ್ಲಿ ಗುರುತಿಸಿಕೊಂಡಿದ್ದ ಆರೋಪಿಗಳನ್ನು ಕಚೇರಿಗೆ ಕರೆಸಿ ವಿಚಾರಣೆ ಮಾಡಲಾಗುತ್ತಿದೆ’ ಎಂದು ಹೇಳಿದರು.
ಕಳ್ಳಭಟ್ಟಿ ತಯಾರಿಕೆ, ಮಾರಾಟ ಇಲ್ಲ
‘ಜಿಲ್ಲೆಯಲ್ಲಿ ಯಾವುದೇ ಅಕ್ರಮ ಕಳ್ಳಭಟ್ಟಿ ಕೇಂದ್ರಗಳು ಕಂಡುಬಂದಿಲ್ಲ. ಆ. 11 ರಂದು ಕೆ.ಆರ್.ಪೇಟೆ ತಾಲ್ಲೂಕಿನ ಜಾಗಿನಕೆರೆ ಬೆಟ್ಟದ ತಪ್ಪಲು ಸಾರಂಗಿ ಗ್ರಾಮಕ್ಕೆ ತೆರಳಿ ಪರಿಶೀಲನೆ ಮಾಡಲಾಗಿದೆ. ಆ. 14 ರಂದು ಮಳವಳ್ಳಿ ತಾಲ್ಲೂಕಿನ ಹೊಸದೊಡ್ಡಿ, ದಾಳನಕಟ್ಟೆ, ಮುತ್ತತ್ತಿ ಅರಣ್ಯ ಪ್ರದೇಶದಲ್ಲಿ ದಾಳಿ ನಡೆಸಲಾಗಿದೆ. ಹಳೆಯ ಆರೋಪಿಗಳು ರೇಷ್ಮೆ ಹಾಗೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ 15–20 ವರ್ಷಗಳಿಂದ ಯಾವುದೇ ಅಕ್ರಮ ನಡೆಯುತ್ತಿಲ್ಲ ಎಂಬುದು ದಾಳಿಯಿಂದ ತಿಳಿದು ಬಂದಿದೆ. ಕಳ್ಳಭಟ್ಟಿ ಮಾರಾಟ ಕಂಡು ಬಂದರೆ ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ನೀಡಬಹುದು’ ಎಂದು ಶಿವಪ್ರಸಾದ್ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.