ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಂತ್ರಣಕ್ಕೆ ಆಗ್ರಹಿಸಿ ಕಚೇರಿಗೆ ರೈತರ ಮುತ್ತಿಗೆ

ಮದ್ದೂರು ತಾಲ್ಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ಹೆಚ್ಚಳ: ಆರೋಪ
Last Updated 7 ನವೆಂಬರ್ 2019, 10:50 IST
ಅಕ್ಷರ ಗಾತ್ರ

ಮದ್ದೂರು: ತಾಲ್ಲೂಕು ಕಚೇರಿಯಲ್ಲಿನ ಮಿತಿಮೀರಿದ ಭ್ರಷ್ಟಾಚಾರ ಖಂಡಿಸಿ ಹಾಗೂ ನಿಯಂತ್ರಣಕ್ಕಾಗಿ ಆಗ್ರಹಿಸಿ ರೈತ ಸಂಘದಿಂದ ತಾಲ್ಲೂಕು ಕಚೇರಿ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಐಬಿ ವೃತ್ತದಿಂದ ಮೆರವಣಿಗೆ ಹೊರಟ ರಾಜ್ಯ ರೈತಸಂಘದ ತಾಲ್ಲೂಕು ಘಟಕದ ಕಾರ್ಯಕರ್ತರು ನಂತರ ತಾಲ್ಲೂಕು ಕಚೇರಿಗೆ ಬಂದು ಧರಣಿ ನಡೆಸಿದರು.

ಕಚೇರಿ ಎದುರೇ ಅಡುಗೆ, ಊಟ:

ತಾಲ್ಲೂಕು ಕಚೇರಿ ಮುಂದೆಯೇ ತರಕಾರಿ ಹೆಚ್ಚಿ ಅಡುಗೆ ಮಾಡಿದ ರೈತ ಸಂಘದ ಕಾರ್ಯಕರ್ತರು, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತರಿಗೆ ಊಟ ಬಡಿಸಿದರು. ಅಲ್ಲದೇ ಪ್ರತಿಭಟನಾನಿರತರು ತಾಲ್ಲೂಕು ಆಡಳಿತದ ವಿರುದ್ಧ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಂಕರೇಗೌಡ ಮಾತನಾಡಿ, ‘ಆಡಳಿತ ಶಕ್ತಿ ಕೇಂದ್ರವಾಗಬೇಕಿದ್ದ ತಾಲ್ಲೂಕು ಕಚೇರಿ ಭ್ರಷ್ಟಾಚಾರದ ಕೂಪವಾಗಿದೆ. ಸಾರ್ವಜನಿಕರ ಕೆಲಸ ಕಾರ್ಯ ಸಮಯಕ್ಕೆ ಸರಿಯಾಗಿ ಆಗುತ್ತಿಲ್ಲ. ಲಂಚ ಕೊಡದ ಹೊರತು ಇಲ್ಲಿ ಯಾವುದೇ ಕಡತಗಳಾಗಲಿ, ಸಣ್ಣಪುಟ್ಟ ಅರ್ಜಿಗಳಾಗಲಿ ಸ್ವಲ್ಪವೂ ಅಲುಗಾಡುವುದಿಲ್ಲ‘ ಎಂದು ಆರೋಪಿಸಿದರು.

‘ಜಾತಿ, ಆದಾಯ ಪತ್ರದಿಂದ ಹಿಡಿದು ಸಿಂಧುತ್ವ ಪ್ರಮಾಣ ಪತ್ರ, ಖಾತೆ ಬದಲಾವಣೆ, ಪೋಡಿ ಸಾಮಾಜಿಕ ಭದ್ರತಾ ಯೋಜನೆಗಳಾದ ಸಂಧ್ಯಾ ಸುರಕ್ಷಾ, ವಿಧವಾ ವೇತನ, ವೃದ್ಧಾಪ್ಯ ವೇತನ, ಸರ್ವೆ ಇಲಾಖೆಯಲ್ಲಿ ಮೋಜಿನಿ, 11 ಇ ಸ್ಕೆಚ್ ಹೀಗೆ ಯಾವುದೇ ಕೆಲಸವಾದರೂ ಇಂಥ ಕೆಲಸಕ್ಕೆ ಇಂತಿಷ್ಟು ಹಣ ಎಂದು ಲಂಚ ನಿಗದಿಯಾಗಿದೆ. ಏಜೆಂಟರ ಮೂಲಕ ಈ ವ್ಯವಹಾರ ನಡೆಯುತ್ತಿದ್ದು, ಏಜೆಂಟ್ ಕೂಡಾ ಸಿಬ್ಬಂದಿಯೇ ಆಗಿರುತ್ತಾನೆ. ಹಣ ನೀಡದಿದ್ದರೆ ವರ್ಷಗಟ್ಟಲೆ ಜನರನ್ನು ಕಚೇರಿಗೆ ಅಲೆದಾಡಿಸುತ್ತಾರೆ. ಇದು ಕೂಡಾ ರೈತರ ಆತ್ಮಹತ್ಯೆಗೆ ಮತ್ತೊಂದು ಕಾರಣವಾಗುತ್ತಿದೆ. ಆದ್ದರಿಂದ ತಾಲ್ಲೂಕು ಕಚೇರಿಯಲ್ಲಿನ ಭ್ರಷ್ಟಾಚಾರ ನಿಯಂತ್ರಿಸಬೇಕು’ ಎಂದು ಶಂಕರೇಗೌಡ ಒತ್ತಾಯಿಸಿದರು.

ತಾಲ್ಲೂಕು ಅಧ್ಯಕ್ಷ ರಮೇಶ್ ಮಾತನಾಡಿ, ಸಕ್ಕರೆ ಕಾರ್ಖಾನೆಗಳು ಸಕಾಲಕ್ಕೆ ಕಬ್ಬು ಸರಬರಾಜು ಮಾಡಲು ಪರ್ಮಿಟ್ ನೀಡುತ್ತಿಲ್ಲ. ಅವಧಿ ಮುಗಿದು ಕಬ್ಬು ಬೆಳೆ ನಷ್ಟವಾಗುತ್ತಿದೆ. ಬಾಕಿ ಹಣ ಬಂದಿಲ್ಲ. ಈ ವರ್ಷ ಕಬ್ಇನ ಬೆಲೆಯೂ ನಿಗದಿಯಾಗಿಲ್ಲ. ಭತ್ತಕ್ಕೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಬೆಲೆ ಅವೈಜ್ಞಾನಿಕವಾಗಿದ್ದು ರಾಜ್ಯ ಸರ್ಕಾರ ಭತ್ತಕ್ಕೆ ಕ್ವಿಂಟಲ್‌ಗೆ ಕನಿಷ್ಠ ₹ 2,500 ನಿಗದಿ ಮಾಡಬೇಕು ಹಾಗೂ ನವೆಂಬರ್ ತಿಂಗಳ ಕೊನೆ ವಾರದಲ್ಲಿ ಭತ್ತ ಖರೀದಿ ಕೇಂದ್ರ ತೆರೆಯಬೇಕು‘ ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ರೈತರಿಗೆ ಭಿಕ್ಷೆಯಂತೆ ಘೋಷಣೆ ಮಾಡಿರುವ ಕಿಸಾನ್ ಸಮ್ಮಾನ್ ಹಣವನ್ನು ಇದುವರೆಗೂ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಿಲ್ಲ ಕೂಡಲೇ ಈ ಹಣವನ್ನು ತುಂಬಬೇಕು. ಅಲ್ಲದೇ ರೈತರ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ತಾಲ್ಲೂಕು ಘಟಕದ ಕಾರ್ಯಾಧ್ಯಕ್ಷ ರಾಮಲಿಂಗಯ್ಯ, ರಾಮೇಗೌಡ, ಮಾದೇಗೌಡ, ಪ್ರಭುಲಿಂಗು, ಕೆಂಪೇಗೌಡ, ಪ್ರಕಾಶ್, ದೇಶಹಳ್ಳಿ ಬೋರಣ್ಣ, ದಯಾನಂದ, ಮಹೇಶ್, ಮಾದೇಗೌಡ, ಉಮೇಶ್, ಸತೀಶ್ ಕ್ಯಾತಘಟ್ಟ, ಬಿಳಿಗೌಡ, ಅಣ್ಣೂರು ಸಿದ್ದೇಗೌಡ, ಶಂಕರ್, ಮುದ್ದೇಗೌಡ, ತಮ್ಮಣ್ಣ, ದೇವೇಗೌಡ, ಬೋರೇಗೌಡ, ಕೃಷ್ಣ, ಶಿವರಾಜು, ರಮೇಶ, ಶಿವಲಿಂಗಯ್ಯ, ಲೋಕೇಶ್, ಮರಿಯಪ್ಪ, ಪುಟ್ಟಸ್ವಾಮಿ, ತಮ್ಮಯ್ಯ, ಸಿದ್ದೇಗೌಡ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT