ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀರಂಗಪಟ್ಟಣ | ಪರದೆಯೊಳಗೆ ಬೆಳೆಯುವ ‘ಪರದೇಶಿ’ ಸೌತೆ!

ಶ್ರೀರಂಗಪಟ್ಟಣ ತಾಲ್ಲೂಕಿನ ಬೊಮ್ಮೂರು ಅಗ್ರಹಾರ ಗ್ರಾಮದ ರೈತನ ಯಶೋಗಾಥೆ
Published 26 ಜೂನ್ 2024, 5:39 IST
Last Updated 26 ಜೂನ್ 2024, 5:39 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ಬೊಮ್ಮೂರು ಅಗ್ರಹಾರ ಗ್ರಾಮದ ಬಳಿ ರೈತರೊಬ್ಬರು ಪರದೆಯೊಳಗೆ ಇಂಗ್ಲಿಷ್‌ ಸೌತೆ (ಪರದೇಶಿ ಸೌತೆ)ಯನ್ನು ಯಶಸ್ವಿಯಾಗಿ ಬೆಳೆದಿದ್ದಾರೆ.

ಹೈದರಾಬಾದ್‌ ಮೂಲದ, ಸದ್ಯ ಮೈಸೂರಿನಲ್ಲಿ ನೆಲೆಸಿರುವ ರಾಜಕುಮಾರ್‌ ಚೌಹಾಣ್‌ ಕಾವೇರಿ ನದಿ ದಂಡೆಯಲ್ಲಿ ಎರಡು ಎಕರೆ ಜಮೀನು ಗುತ್ತಿಗೆ ಪಡೆದು ಹನಿ ನೀರಾವರಿ ಪದ್ಧತಿಯಲ್ಲಿ ಇಂಗ್ಲಿಷ್‌ ಸೌತೆ ಬೆಳೆದಿದ್ದು, ಕೊಯ್ಲಿಗೆ ಬಂದಿದೆ. ನಾಲ್ಕು ದಿನಗಳಿಗೆ ಒಮ್ಮೆ ಕಟಾವು ಮಾಡುತ್ತಿದ್ದು, ಈಗಾಗಲೇ ಆರು ಕೊಯ್ಲು ಸಿಕ್ಕಿದೆ. ಕೊಯ್ಲು ಮಾಡಿದ ಸೌತೆಕಾಯಿಯನ್ನು ಮೈಸೂರಿನ ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡುತ್ತಿದ್ದಾರೆ. ಪ್ರತಿ ಕೆ.ಜಿ ಸೌತೆಗೆ ಸದ್ಯ ₹25 ಬೆಲೆ ಸಿಗುತ್ತಿದೆ.

ಒಂದು ಇಂಗ್ಲಿಷ್‌ ಸೌತೆ ಕಾಯಿ ಸುಮಾರು 100ರಿಂದ 120 ಗ್ರಾಂ ತೂಕ ಇರುತ್ತದೆ. ಒಂದು ಕೆ.ಜಿ.ಗೆ 8ರಿಂದ 10 ಕಾಯಿಗಳು ಬರುತ್ತವೆ. ಇದರ ಸಾಗಾಟ ಕೂಡ ಸುಲಭ. ರುಚಿಯೂ ಇರುವುದರಿಂದ ಈ ತಳಿಯ ಸೌತೆಗೆ ಬೇಡಿಕೆ ಹೆಚ್ಚು. ಮುಖ್ಯವಾಗಿ ಕೇರಳದಲ್ಲಿ ಇಂಗ್ಲಿಷ್‌ ಸೌತೆಗೆ ಉತ್ತಮ ಬೇಡಿಕೆ ಇದೆ.

ಪರದೆ ಪದ್ಧತಿಯ ಪ್ರಯೋಜನಗಳು:

ಪರದೆ ಪದ್ಧತಿಯಲ್ಲಿ ಸೌತೆ ಬೆಳೆದಿರುವುದರಿಂದ ಕೀಟಗಳ ಹಾವಳಿ ತೀರಾ ಕಡಿಮೆ. ಬಿಸಿ ಗಾಳಿ ಮತ್ತು ರಭಸದ ಮಳೆಯಿಂದ ಬೆಳೆಗೆ ರಕ್ಷಣೆ ಸಿಗುತ್ತದೆ. ತೇವಾಂಶ ಬೇಗ ನಶಿಸುವುದಿಲ್ಲ. ಪಾಲಿಹೌಸ್‌ (ಗ್ರೀನ್‌ ಹೌಸ್‌) ಪದ್ದತಿಗಿಂತ ನೆಟ್‌ ಹೌಸ್‌ (ಬಲೆ ಮನೆ) ಪದ್ದತಿಯಲ್ಲಿ ಖರ್ಚೂ ಕಡಿಮೆ. ಪಾಲಿಹೌಸ್‌ಗೆ ಮಾಡುವ ಖರ್ಚಿನ ಅರ್ಧ ಹಣದಲ್ಲಿ ನೆಟ್‌ ಹೌಸ್‌ ಸಿದ್ದವಾಗುತ್ತದೆ.

‘ಶ್ರೀರಂಗಪಟ್ಟಣ ಸಮೀಪ ಕಾವೇರಿ ಕನ್ಯಾ ಗುರುಕುಲದಲ್ಲಿ ವೇದಾಂತ ಕಲಿಯಲು ಹೈದರಾಬಾದ್‌ನಿಂದ ಕುಟುಂಬ ಸಹಿತ ಬಂದಿದ್ದು, ಗುರುಕುಲದ ಆಚಾರ್ಯ ಡಾ.ಕೆ.ಕೆ. ಸುಬ್ರಮಣಿ ಅವರ ಸಲಹೆಯಂತೆ ಪರದೆ ಪದ್ದತಿಯಲ್ಲಿ ಇಂಗ್ಲಿಷ್‌ ಸೌತೆ ಬೆಳೆಯಲು ಶುರು ಮಾಡಿದ್ದೇನೆ. ಬೀಜ ನಾಟಿ ಮಾಡಿದ 30 ದಿನಗಳಿಗೆ ಫಲ ಸಿಕ್ಕಿದೆ’ ಎನ್ನುತ್ತಾರೆ ರೈತ ರಾಜಕುಮಾರ್‌ ಚೌಹಾಣ್‌.

ಮೊದಲನೇ ಕೊಯ್ಲಿನಲ್ಲಿ 200 ಕೆ.ಜಿ ಸೌತೆ ಸಿಕ್ಕಿತ್ತು. 6ನೇ ಕೊಯ್ಲಿಗೆ 800 ಕೆ.ಜಿ. ಸಿಕ್ಕಿದೆ. ಈ ತಳಿಯ ಗಿಡ ಫಲಕ್ಕೆ ಬಂದ ನಂತರ ಮೂರು ತಿಂಗಳವರೆಗೂ ಬಾಳಿಕೆ ಬರುತ್ತದೆ. ಎರಡು ಎಕರೆಯಲ್ಲಿ ಸೌತೆ ಬೆಳೆಯಲು ₹12 ಲಕ್ಷದ ವರೆಗೆ ಖರ್ಚಾಗಿದೆ. ಇದೇ ಬೆಲೆ ಸಿಕ್ಕಿದರೆ, ಖರ್ಚು ಕಳೆದು ₹5ರಿಂದ ₹8 ಲಕ್ಷದವರೆಗೂ ಲಾಭ ಸಿಗುತ್ತದೆ’ ಎಂಬ ನಿರೀಕ್ಷೆ ಅವರದ್ದು. ಸಂಪರ್ಕಕ್ಕೆ ಮೊ: 7901255428

‘ನೆಟ್‌ ಹೌಸ್‌ ಪದ್ಧತಿ ಉತ್ತಮ’

‘ಪಾಲಿಹೌಸ್‌ ಒಳಗೆ ಹೆಚ್ಚು ಶಾಖ ಇದ್ದು ಅದು ಯೂರೋಪಿನ ಹವಾಗುಣಕ್ಕೆ ಸೂಕ್ತ. ಆದರೆ ಇಲ್ಲಿನ ವಾತಾವರಣಕ್ಕೆ ಅದು ಅಷ್ಟಾಗಿ ಹೊಂದಿಕೊಳ್ಳುವುದಿಲ್ಲ. ಬಿಸಿ ವಾತಾವರಣದಲ್ಲಿ ಕೆಲಸ ಮಾಡಲು ಕೂಲಿ ಕಾರ್ಮಿಕರು ಹಿಂದೇಟು ಹಾಕುತ್ತಾರೆ. ಬಲೆ ಪದ್ಧತಿಯಲ್ಲಿ ಒಂದು ಬಾರಿ ಬಲೆ ಅಳವಡಿಸಿದರೆ 5 ವರ್ಷಗಳಿಗೂ ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಹಾಗಾಗಿ ಪಾಲಿಹೌಸ್‌ಗಿಂತ ನೆಟ್‌ ಹೌಸ್‌ ಪದ್ಧತಿಯಲ್ಲಿ ಖರ್ಚು ಕಡಿಮೆ ಲಾಭ ಜಾಸ್ತಿ’ ಎನ್ನುವುದು ತಳಿ ವಿಜ್ಞಾನಿಯೂ ಆಗಿರುವ ಕಾವೇರಿ ಕನ್ಯಾ ಗುರುಕುಲದ ಮುಖ್ಯಸ್ಥ ಡಾ.ಕೆ.ಕೆ. ಸುಬ್ರಮಣಿ ಅವರ ಮಾತು.

ಇಂಗ್ಲಿಷ್‌ ಸೌತೆ ಬೆಳೆಯ ನಡುವೆ ರಾಜಕುಮಾರ್ ಚೌಹಾಣ್‌
ಇಂಗ್ಲಿಷ್‌ ಸೌತೆ ಬೆಳೆಯ ನಡುವೆ ರಾಜಕುಮಾರ್ ಚೌಹಾಣ್‌
ಕೊಯ್ಲು ಮಾಡಿರುವ ಇಂಗ್ಲಿಷ್‌ ಸೌತೆ
ಕೊಯ್ಲು ಮಾಡಿರುವ ಇಂಗ್ಲಿಷ್‌ ಸೌತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT