ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ: ಗ್ರಾಮಗಳಲ್ಲಿ ಇಲ್ಲವಾದ ಜಾಗೃತಿ

ಕೋವಿಡ್‌ ಭಯದ ನೆರಳಿನಲ್ಲಿ ಮತ ಸಮರ, ಹರಾಜು; ದೂರು ಕೊಟ್ಟರಷ್ಟೇ ಎಫ್‌ಐಆರ್‌
Last Updated 14 ಡಿಸೆಂಬರ್ 2020, 12:44 IST
ಅಕ್ಷರ ಗಾತ್ರ

ಮಂಡ್ಯ: ಕೋವಿಡ್‌ ಭಯದ ನೆರಳಿನಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗ್ರಾಮೀಣ ಜನರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಇಲ್ಲವಾಗಿವೆ. ‘ಸ್ವೀಪ್‌’ (ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಮತ್ತು ಮತದಾರರ ಭಾಗವಹಿಸುವಿಕೆ) ಚಟುವಟಿಕೆಯೂ ನಡೆಯುತ್ತಿಲ್ಲ.

ಜಿಲ್ಲೆಯಲ್ಲಿ ಒಟ್ಟು ಕೋವಿಡ್‌–19 ರೋಗಿಗಳ ಸಂಖ್ಯೆ 20 ಸಾವಿರದ ಅಂಚಿಗೆ ತಲುಪಿದೆ. ಮುಂದಿನ 2ನೇ ಅಲೆಯ ಭಯವೂ ಜನರಲ್ಲಿದೆ. ಇಂತಹ ಸಂದರ್ಭದಲ್ಲಿ ಬಂದಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜನರು ಯಾವ ರೀತಿಯಿಂದ ಎಚ್ಚರಿಕೆ, ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂಬು ಪ್ರಶ್ನೆಗೆ ಉತ್ತರ ಇಲ್ಲವಾಗಿದೆ.

ಪ್ರತಿ ಬಾರಿ ಬೀದಿನಾಟಕ ಕಲಾವಿದರ ನಾಟಕಾಭಿನಯದ ಮೂಲಕ ಮತದಾನ ಜಾಗೃತಿ ಮೂಡಿಸಲಾಗುತ್ತಿತ್ತು. ಈಗಂತೂ ಕಲಾವಿದರು ಕೆಲವಿಲ್ಲದೇ ಸಂಕಷ್ಟ ಸ್ಥಿತಿ ಅನುಭವಿಸುತ್ತಿದ್ದಾರೆ. ಅವರನ್ನು ಬಳಸಿಕೊಂಡು ಸುರಕ್ಷತೆಯ ಜಾಗೃತಿ ಮೂಡಿಸಬಹುದಾಗಿತ್ತು. ಆದರೆ ಜಿಲ್ಲಾಡಳಿತ ಜಾಗೃತಿಗಾಗಿ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡಿಲ್ಲ. ಸ್ವೀಪ್‌ ಚಟುವಟಿಕೆಯು ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗೆ ಮಾತ್ರ ಸೀಮಿತವಾಗಿದೆ.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ವೀಪ್‌ ಚಟುವಟಿಕೆಗೆ ಪ್ರತ್ಯೇಕ ಅನುದಾನ ಇರುವುದಿಲ್ಲ. ಸಾಮಾನ್ಯವಾಗಿ ಗ್ರಾ.ಪಂ ಚುನಾವಣೆಗಳಲ್ಲಿ ಶೇ 90ಕ್ಕೂ ಹೆಚ್ಚು ಮತದಾನವಾಗುತ್ತದೆ ಹೀಗಾಗಿ ಜಾಗೃತಿ ಕಾರ್ಯಕ್ರಮದ ಅವಶ್ಯಕತೆ ಇರುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಕೋವಿಡ್‌ ಅವಧಿಯಲ್ಲಿ ಮತದಾನ ಪ್ರಕ್ರಿಯೆ ಹೇಗಿರಬೇಕು ಎಂಬ ಬಗ್ಗೆ ಗ್ರಾಮೀಣ ಜನರಿಗೆ ಮಾರ್ಗದರ್ಶನದ ಅವಶ್ಯಕತೆ ಇತ್ತು ಎಂದು ಹಳ್ಳಿಗಳ ಮುಖಂಡರು ಒತ್ತಾಯಿಸುತ್ತಾರೆ.

ನಿಗಾ ಇಲ್ಲ: ಇಲ್ಲಿಯವರೆಗೂ ಜಿಲ್ಲೆಯ ವಿವಿಧ ಹಳ್ಳಿಗಳಲ್ಲಿ ಸದಸ್ಯ ಸ್ಥಾನಗಳು ಬಹಿರಂಗ ಹರಾಜಾಗಿರುವ ಸುದ್ದಿಗಳು ರಾಜ್ಯದಾದ್ಯಂತ ಹರಿದಾಡಿವೆ. ಈಗ ಹಣ ಹಾಗೂ ಮದ್ಯದ ಹೊಳೆಯೇ ಹರಿಯುತ್ತಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ತಡೆಯಲು ಅಧಿಕಾರಿಗಳು ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಅಕ್ರಮದ ಸುದ್ದಿಗಳು ಜಾಲತಾಣಗಳಲ್ಲಿ ಹರಿದಾಡಿದರೆ, ಮಾಧ್ಯಮಗಳಲ್ಲಿ ಬಂದರೆ ಮಾತ್ರ ಪೊಲೀಸರು ಪ್ರಕರಣ ದಾಖಲು ಮಾಡುತ್ತಾರೆ, ಇಲ್ಲದಿದ್ದರೆ ಅದಕ್ಕೂ, ತಮಗೂ ಸಂಬಂಧವೇ ಇಲ್ಲ ಎಂದಿರುತ್ತಾರೆ.

‘ಹಳ್ಳಿಗಳಲ್ಲಿ ನಡೆಯುತ್ತಿರುವ ಎಲ್ಲಾ ಚಟುವಟಿಕೆಗಳು ಸ್ಥಳೀಯ ಪೊಲೀಸ್‌ ಠಾಣೆಯ ಪೊಲೀಸರಿಗೆ ತಿಳಿದಿರುತ್ತದೆ. ಅವರು ನೇರವಾಗಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಯಾರಾದರೂ ದೂರು ಕೊಡಬೇಕು ಎಂಬ ಸಿದ್ದ ಉತ್ತರಕ್ಕೆ ಮೊರೆ ಹೋಗಿದ್ದಾರೆ’ ಎಂದು ರೈತ ಮುಖಂಡ ರಾಮೇಗೌಡ ಆರೋಪಿಸಿದರು.

ಶಿಕ್ಷಕರೇ ಚುನಾವಣಾಧಿಕಾರಿಗಳು: ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು ಅವರಿಗೆ ತರಬೇತಿ ನೀಡಲಾಗಿದೆ. ಅವರು ಚುನಾವಣಾ ಅಕ್ರಮಗಳನ್ನು ತಡೆಯುವಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಬಹುತೇಕ ಚುನಾವಣಾಧಿಕಾರಿಗಳು ಉಪನ್ಯಾಸಕರು ಆಗಿದ್ದಾರೆ. ಸಹಾಯಕ ಚುನಾವಣಾಧಿಕಾರಿಗಳು ಪ್ರೌಢಶಾಲೆ ಶಿಕ್ಷಕರೇ ಆಗಿದ್ದಾರೆ. ಅವರಿಗೆ ಸಾಕಷ್ಟು ಅಧಿಕಾರ ಇದ್ದರೂ ಅದನ್ನು ಚಲಾವಣೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

‘ಗ್ರಾ.ಪಂ ಪಿಡಿಒ, ಗ್ರಾಮಗಳಲ್ಲಿರುವ ಮತದಾನ ಸಾಕ್ಷರ ಕೇಂದ್ರಗಳ ಸಿಬ್ಬಂದಿಗೆ ಜನರಲ್ಲಿ ಅರಿವು ಮೂಡಿಸುವಂತೆ ಸೂಚನೆ ನೀಡಲಾಗಿದೆ. ನಾಮಪತ್ರ ಸಲ್ಲಿಕೆ ಅಂತಿಮಗೊಂಡ ನಂತರ ಜಾಗೃತಿ ಕಾರ್ಯಕ್ರಮ ಚುರುಕಾಗಲಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದರು.

******

ತೋಟದ ಮನೆಯಲ್ಲಿ ಮದ್ಯ ಸಂಗ್ರಹ

ಕಳೆದ ಎರಡು ವಾರಗಳಿಂದ ಜಿಲ್ಲೆಯಾದ್ಯಂತ ಮದ್ಯ ಮಾರಾಟ ಹೆಚ್ಚಳಗೊಂಡಿದೆ. ಮತದಾನದ ಸಮಯದಲ್ಲಿ ಮದ್ಯ ಮಾರಾಟ ಚಟುವಟಿಕೆ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ನಿಗಾವಹಿಸುವ ಹಿನ್ನೆಲೆಯಲ್ಲಿ ಈಗಿನಿಂದಲೇ ಹಳ್ಳಿಗರು ಮದ್ಯ ಸಂಗ್ರಹದಲ್ಲಿ ನಿರತರಾಗುತ್ತಿರುವ ವಿಷಯ ಬೆಳಕಿಗೆ ಬಂದಿದೆ.

‘ತೋಟದ ಮನೆಗಳಲ್ಲಿ, ಮಿಷನ್‌ ಮನೆಗಳಲ್ಲಿ ಮದ್ಯ ಸಂಗ್ರಹ ಮಾಡುತ್ತಿದ್ದಾರೆ. ಈಗ ಪೊಲೀಸರು ಇಂತಹ ಮನೆಗಳ ಮೇಲೆ ದಾಳಿ ಮಾಡಿದರೆ ಅಪಾರ ಪ್ರಮಾಣದ ಅಕ್ರಮ ಮದ್ಯ ಸಂಗ್ರಹವನ್ನು ವಶಕ್ಕೆ ಪಡೆಯಬಹುದು’ ಎಂದು ಮುಖಂಡರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT