ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಂಡವಪುರ: ದಲಿತರಿಗೆ ಕ್ಷೌರ ನಿರಾಕರಣೆ– ವಿಡಿಯೊ ವೈರಲ್‌

Last Updated 28 ಅಕ್ಟೋಬರ್ 2021, 13:34 IST
ಅಕ್ಷರ ಗಾತ್ರ

ಪಾಂಡವಪುರ: ತಾಲ್ಲೂಕಿನ ಕಣಿವೆಕೊಪ್ಪಲು ‌ಗ್ರಾಮದ ಕಟಿಂಗ್‌ ಶಾಪ್‌ನಲ್ಲಿ ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಿದ ವಿಡಿಯೊ ದೃಶ್ಯವೊಂದು ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಗ್ರಾಮದ ಸ್ನೇಹಜೀವಿ ಮೆನ್ಸ್‌ ಬ್ಯೂಟಿ ಪಾರ್ಲರ್‌ನಲ್ಲಿ ಘಟನೆ ನಡೆದಿದೆ. ಕ್ಷೌರ ಮಾಡಲು ನಿರಾಕರಿಸಿದ ಅಂಗಡಿ ಮಾಲೀಕನನ್ನು ದಲಿತ ಯುವಕರು ಪ್ರಶ್ನೆ ಮಾಡುತ್ತಾರೆ. ‘ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ಕಾರಣ ಕಟಿಂಗ್‌ ಮಾಡುತ್ತಿಲ್ಲ’ ಎಂದು ಅಂಗಡಿ ಮಾಲೀಕ ಉತ್ತರಿಸುತ್ತಾನೆ.

‘ಸಮಸ್ಯೆಯನ್ನು ದೊಡ್ಡದು ಮಾಡುವುದಕ್ಕೆ ಮೊದಲು ಯಾವುದೇ ತಾರತಮ್ಯ ಮಾಡದೇ ದಲಿತರಿಗೂ ಕಟಿಂಗ್‌, ಶೇವಿಂಗ್‌ ಮಾಡಬೇಕು. ಇಲ್ಲದಿದ್ದರೆ ನಮ್ಮ ಸಮುದಾಯದ ಮುಖಂಡರನ್ನು ಕರೆಸಿ ಅಂಗಡಿ ಮುಂದೆ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡುತ್ತಾರೆ.

ಈ ಸಂದರ್ಭದಲ್ಲಿ ಕ್ಷೌರ ಮಾಡಿಸಿಕೊಳ್ಳುತ್ತಿದ್ದ ಗ್ರಾಹಕನೊಬ್ಬ ‘ಯಾರನ್ನು ಕರೆಸುತ್ತೀರಾ ಕರೆಸಿ, ಹಿಂದಿನಿಂದಲೂ ಕಟಿಂಗ್‌, ಶೇವಿಂಗ್‌ ಮಾಡಿದ್ದಾರಾ’ ಎಂದು ಉತ್ತರಿಸುತ್ತಾನೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್‌ಸ್ಪೆಕ್ಟರ್‌ ಸಂಧಾನ: ಘಟನೆ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಪಾಂಡವಪುರ ಠಾಣೆ ಇನ್‌ಸ್ಪೆಕ್ಟರ್‌ ಕೆ.ಪ್ರಭಾಕರ್‌ ಗ್ರಾಮಕ್ಕೆ ಭೇಟಿ ನೀಡಿ ಸಂಧಾನ ನಡೆಸಿದ್ದಾರೆ. ಅಂಗಡಿ ಮಾಲೀಕನಿಗೆ ಬುದ್ಧಿ ಹೇಳಿ ಮುಂದೆ ಎಲ್ಲರಿಗೂ ಕ್ಷೌರ ಮಾಡುವಂತೆ ಸೂಚಿಸಿದ್ದಾರೆ.

ಸ್ಥಳದಲ್ಲೇ ದಲಿತ ಯುವಕರಿಗೆ ಕ್ಷೌರ ಮಾಡಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT