ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗೀತದಿಂದ ಜನರ ಹೃದಯ ಗೆದ್ದ ಹಂಸಲೇಖ: ಐಜಿ ರವಿಕಾಂತೇಗೌಡ

ನಾಲ್ವಡಿ ಪ್ರಶಸ್ತಿ ಪ್ರದಾನ: ಐಜಿ ರವಿಕಾಂತೇಗೌಡ ಅಭಿಮತ
Published 30 ಜೂನ್ 2024, 15:37 IST
Last Updated 30 ಜೂನ್ 2024, 15:37 IST
ಅಕ್ಷರ ಗಾತ್ರ

ಮಂಡ್ಯ: ‘ಸಮಾಜದಲ್ಲಿ ಆಹಾರದ ರಾಜಕಾರಣ ಹಾಗೂ ಮತೀಯ ರಾಜಕಾರಣ ವಿರೋಧಿಸಿದ ಸಂಗೀತ ಬ್ರಹ್ಮ ಹಂಸಲೇಖ ಅವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರಶಸ್ತಿ ನೀಡುತ್ತಿರುವುದು ಸರಿಯಾಗಿದೆ’ ಎಂದು ಬೆಂಗಳೂರು ಕೇಂದ್ರ ವಲಯ ಐಜಿ ಬಿ.ಆರ್‌. ರವಿಕಾಂತೇಗೌಡ ಶ್ಲಾಘಿಸಿದರು.

ನಗರದ ರೈತ ಸಭಾಂಗಣದಲ್ಲಿ ಕರ್ನಾಟಕ ಸಂಘ, ಎಂ.ಎಲ್‌. ಶ್ರೀಕಂಠೇಗೌಡ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಲ್ವಡಿ ಕುರಿತು ಅವರು ಮಾತನಾಡಿದರು.

ಜನಕೇಂದ್ರಿತ ಸಂಗೀತಗಾರಾಗಿರುವ ಹಂಸಲೇಖ ಅವರು ಎಲ್ಲರನ್ನು ತಮ್ಮ ಹಾಡಿನ ಮೂಲಕ ಒಟ್ಟುಗೂಡಿಸಿ ಕರೆದುಕೊಂಡು ಹೋಗುವ ಕೆಲಸ ಮಾಡಿದವರು. ಸಂಗೀತದ ಶಕ್ತಿ ಮೂಲಕವೇ ಜನರ ಹೃದಯ ಗೆದ್ದರು, ಸಂಗೀತಕ್ಕೆ ಸಾಹಿತ್ಯವನ್ನು ಅಚ್ಚುಕಟ್ಟಾಗಿ ಬರೆಯುವ ಕೆಲವೇ ಕೆಲವರಲ್ಲಿ ಇವರು ಕೂಡ ಒಬ್ಬರು ಎನ್ನವುದನ್ನು ನಾನು ಕಂಡುಕೊಂಡೆ ಎಂದು ತಿಳಿಸಿದರು.

ರಾಜಪ್ರಭುತ್ವವನ್ನು ಒಪ್ಪಿಕೊಳ್ಳದ ಕೆಲವು ರಾಜರು, ಪ್ರಜೆಗಳ ಪರವಾಗಿ ಮತ್ತು ಸಾಮಾಜಿಕ ನ್ಯಾಯದ ಪರವಾಗಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರೊಬ್ಬ ಜನಕೇಂದ್ರಿತ ಆಡಳಿತಗಾರರಾಗಿದ್ದರು. ಜೊತೆಗೆ ಸಾಮಾಜಿಕ ಬಂಡಾಯಗಾರರೂ ಆಗಿದ್ದರು ಎಂದರು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ‘ಪ್ರಜಾಪ್ರಭುತ್ವ ಹೇಗಿರಬೇಕು ಎನ್ನುವುದನ್ನು ನಾಲ್ವಡಿ ಅವರು ತಮ್ಮ ಆಡಳಿತದ ಮೂಲಕ ತೋರಿಸಿಕೊಟ್ಟರು. ಕೆಂಪೇಗೌಡ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸರಿಸಾಟಿಯಾದ ಆಡಳಿತಗಾರರು ಮತ್ತೊಬ್ಬರಿಲ್ಲ’ ಎಂದು ಶ್ಲಾಘಿಸಿದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ‘ಹಂಸಲೇಖ ಅವರು ಸಂಗೀತ ಲೋಕಕ್ಕೆ ಬಡತನದ ಬೇಗೆಯಲ್ಲಿ ಬೆಂದ ಪ್ರತಿಭೆಗಳನ್ನು ಪರಿಚಯಿಸಿದ್ದಾರೆ. ದೇಸಿ ಸಂಗೀತ ಪ್ರತಿಭೆಗಳನ್ನು ನಾಡಿಗೆ ಕೊಡುಗೆಯಾಗಿ ನೀಡುತ್ತಿರುವ ಅವರಿಗೆ ನಾಲ್ವಡಿ ಹೆಸರಿನ ಪ್ರಶಸ್ತಿ ದೊರಕುತ್ತಿರುವುದು ಮಂಡ್ಯ ಜಿಲ್ಲೆಯ ಸೌಭಾಗ್ಯ. ಇವರು ನಮ್ಮ ಕನ್ನಂಬಾಡಿ ಅವರು ಎನ್ನುವುದಕ್ಕೆ ಹೆಮ್ಮೆ ಎನಿಸುತ್ತದೆ’ ಎಂದು ಸ್ಮರಿಸಿದರು.

ಇದೇ ಸಂದರ್ಭದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ, ಲತಾ ಹಂಸಲೇಖ ದಂಪತಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕೊಮ್ಮೇರಹಳ್ಳಿ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ, ಶಾಸಕ ಪಿ.ರವಿಕುಮಾರ್‌, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ. ಜಯಪ್ರಕಾಶಗೌಡ, ಮುಖಂಡರಾದ ಕೆ.ಟಿ.ಶ್ರೀಕಂಠೇಗೌಡ, ವಿ.ನಾಗರಾಜ್ ಭೈರಿ, ತಗ್ಗಹಳ್ಳಿ ವೆಂಕಟೇಶ್, ಪ್ರೊ.ಶಂಕರೇಗೌಡ, ಪಿ.ಲೋಕೇಶ್ ಚಂದಗಾಲು ಭಾಗವಹಿಸಿದ್ದರು.

‘ರಾಜಪ್ರಭುತ್ವ ಕಾಲದಲ್ಲಿ ಪ್ರಜಾಪ್ರಭುತ್ವ ಪರಿಚಯಿಸಿದ ನಾಲ್ವಡಿ’

ಬೆಂಗಳೂರು ಕೇಂದ್ರ ವಲಯ ಐಜಿ ಬಿ.ಆರ್‌. ರವಿಕಾಂತೇಗೌಡ ಮಾತನಾಡಿ ‘ನಾಲ್ವಡಿ ಅವರು ಪ್ರಜಾಪ್ರತಿನಿಧಿ ಸಭೆಯ ಮೂಲಕ ಪ್ರಜಾಪ್ರಭುತ್ವವನ್ನು ಪರಿಚಯಿಸಿದರಲ್ಲದೆ ಮೇಲ್ಮನೆ ಕೆಳಮನೆಯ ಪರಿಕಲ್ಪನೆಯನ್ನು ಹುಟ್ಟುಹಾಕಿದವರು. ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯಗೊಳಿಸಿದರು. ಶಾಲೆಗಳಲ್ಲಿ ಅಸ್ಪೃಶ್ಯತೆಯನ್ನು ದೂರ ಮಾಡಿದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ನಾಲ್ವಡಿಯವರ ಜೊತೆಗಿದ್ದ ಮಹಾಪುರುಷನ ಹೆಸರನ್ನೇ ಮರೆತು ಬಿಟ್ಟಿದ್ದೇವೆ. ನಾಲ್ವಡಿ ಅವರಿಗೆ ಪ್ರತಿಯೊಂದು ಕೆಲಸದಲ್ಲೂ ಅವರ ಬೆನ್ನೆಲುಬಾಗಿ ನಿಂತಿದ್ದವರು ಕಂಠೀರವ ನರಸಿಂಹರಾಜದತ್ತ ಒಡೆಯರ್. ಅವರಿಗೆ ಆಡಳಿತದಲ್ಲಿ ಸಲಹೆ-ಮಾರ್ಗದರ್ಶನ ಮಾಡುತ್ತಿದ್ದರು. ಅವರಿಬ್ಬರ ನಡುವಿನ ಬಾಂಧವ್ಯ ಬಿಡಿಸಲಾಗದ ಬೆಸುಗೆಯಂತಿತ್ತು ಇವರನ್ನು ನೆನೆಯಬೇಕಿದೆ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT