ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನಕೆರೆ ಬಳಿ ಸಂಸದೆ ಸುಮಲತಾ ಮನೆ; ಗರಿಗೆದರಿದ ರಾಜಕೀಯ ಲೆಕ್ಕಾಚಾರ

ಕಾಮಗಾರಿಗೆ ಭೂಮಿಪೂಜೆ, ವರ್ಷದೊಳಗೆ ನಿವಾಸ ಸಿದ್ಧ, ಗರಿಗೆದರಿದ ರಾಜಕೀಯ ಲೆಕ್ಕಾಚಾರ
Last Updated 1 ಸೆಪ್ಟೆಂಬರ್ 2021, 11:50 IST
ಅಕ್ಷರ ಗಾತ್ರ

ಮಂಡ್ಯ: ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯ ಹನಕೆರೆ ಗ್ರಾಮದ ಬಳಿ ಸಂಸದೆ ಸುಮಲತಾ ಭೂಮಿ ಖರೀದಿಸಿದ್ದು ಮನೆ ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿದರು.

ಮಂಡ್ಯ ಹಾಗೂ ಮದ್ದೂರು ನಡುವೆ ತಮ್ಮ ಬೆಂಬಲಿಗ ಶಶಿ ಎಂಬುವವರ ಬಳಿ ಭೂಮಿ ಖರೀದಿಸಿದ್ದು ವಿವಿಧ ಧಾರ್ಮಿಕ ಚಟುವಟಿಕೆಗಳೊಂದಿಗೆ ಮನೆ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಎಲ್ಲವೂ ಅಂದುಕೊಂಡಂತೆ ನಡೆದರೆ ವರ್ಷದೊಳಗೆ ಸಂಸದರ ಮನೆ ನಿರ್ಮಾಣಗೊಳ್ಳಲಿದೆ.

ಕಳೆದ ಲೋಕಸಭಾ ಚುನಾವಣೆ ವೇಳೆ ಅವರು ಮನೆ ನಿರ್ಮಿಸುವುದಾಗಿ ತಿಳಿಸಿದ್ದರು. ಚುನಾವಣೆಯಲ್ಲಿ ಗೆದ್ದು 2 ವರ್ಷಗಳಾದ ನಂತರ ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಭೂಮಿಪೂಜೆ ವೇಳೆ ಅವರ ಬೆಂಬಲಿಗರು, ವಿವಿಧ ಪಕ್ಷಗಳ ಮುಖಂಡರು ಸ್ಥಳಕ್ಕೆ ಭೇಟಿ ನೀಡಿ ಶುಭ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದೆ ಸುಮಲತಾ ‘ನಾನು ರಾಜಕೀಯಕ್ಕೆ ಬರುತ್ತೇನೆ, ಸಂಸದೆ ಆಗುತ್ತೇನೆ ಎಂದು ಕನಸಿನಲ್ಲೂ ಎಣಿಸಿರಲಿಲ್ಲ. ದೇವರು ಇಚ್ಛಿಸಿದಂತೆ ಭವಿಷ್ಯ ನಡೆಯುತ್ತದೆ. ನಮ್ಮ ಯೋಜನೆ ಪ್ರಕಾರ ಜೀವನ ನಡೆಯುವುದಿಲ್ಲ. ಶೀಘ್ರ ಕಾಮಗಾರಿ ಪೂರ್ಣಗೊಳಿಸಲಾಗುವುದು. ಜನರಿಗೆ ಉಪಯೋಗವಾಗುವಂತೆ ಸರಳವಾಗಿ ನಿರ್ಮಾಣ ಮಾಡಲಾಗುವುದು’ ಎಂದರು.

‘ಕಳೆದ 2 ವರ್ಷಗಳಿಂದ ಉತ್ತಮ ಜಾಗಕ್ಕಾಗಿ ಹುಡುಕಾಟ ನಡೆಸುತ್ತಿದ್ದೆವು. ಈಗ ಅಂತಹ ಜಾಗ ಸಿಕ್ಕಿದ್ದು ಭೂಮಿಪೂಜೆ ನೆರವೇರಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ಸಮೀಪವಿರುವ ಕಾರಣ ಜನರ ಜೊತೆ ಸಂಪರ್ಕ ಇಟ್ಟುಕೊಳ್ಳುವುದಕ್ಕೆ ಸಹಾಯವಾಗಲಿದೆ’ ಎಂದರು.

ರಾಜಕೀಯ ಲೆಕ್ಕಾಚಾರ: ಮದ್ದೂರಿಗೆ ಸಮೀಪವಾಗುವಂತೆ ಮನೆ ನಿರ್ಮಾಣ ಮಾಡುತ್ತಿರುವುದಕ್ಕೆ ಜಿಲ್ಲೆಯಾದ್ಯಂತ ರಾಜಕೀಯ ಲೆಕ್ಕಾಚಾರಗಳು ಆರಂಭವಾಗಿವೆ. ಅಂಬರೀಷ್‌ ತವರು ಮದ್ದೂರು ತಾಲ್ಲೂಕಿನ (ದೊಡ್ಡರಸಿನಕೆರೆ) ಜೊತೆ ಸಂಪರ್ಕ ಇಟ್ಟುಕೊಳ್ಳುವುದಕ್ಕಾಗಿ ಅಲ್ಲಿಯೇ ಮನೆ ನಿರ್ಮಾಣ ಮಾಡಲಾಗುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪುತ್ರ ಅಭಿಷೇಕ್‌ ಅಂಬರೀಷ್‌ ಅವರನ್ನು ಮದ್ದೂರು ಕ್ಷೇತ್ರದಿಂದ ಕಣಕ್ಕಿಳಿಸುವುದೇ ಮನೆ ನಿರ್ಮಾಣದ ಉದ್ದೇಶವಾಗಿದೆ ಎಂಬ ಮಾತುಕತೆಗಳು ಗರಿಗೆದರಿವೆ.

ಈ ಕುರಿತು ಮಾತನಾಡಿದ ಸುಮಲತಾ ‘ಯಾರಾರ ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ. ಅವರ ಊಹೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವುದೇ ನನ್ನ ಉದ್ದೇಶವಾಗಿದೆ. ಚುನಾವಣೆ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ಮನೆ ನಿರ್ಮಾಣ ಮಾಡಲಾಗುತ್ತಿದೆ. ರಾಜಕೀಯ ಮಾಡುವುದಕ್ಕಾಗಿ ಮನೆ ನಿರ್ಮಿಸುತ್ತಿಲ್ಲ’ ಎಂದು ಹೇಳಿದರು.

ಸರಳ ಗೌರಿ– ಗಣೇಶ ಹಬ್ಬ: ‘ಕೋವಿಡ್‌ ಇರುವ ಕಾರಣ ಪರಿಸ್ಥಿತಿ ಅರ್ಥ ಮಾಡಿಕೊಂಡು ಗೌರಿ–ಗಣೇಶ ಹಬ್ಬ ಆಚರಣೆ ಮಾಡಬೇಕು. ಜಾತ್ರೆ ರೀತಿಯಲ್ಲಿ ಹಬ್ಬ ಮಾಡಿದರೆ ಮಾತ್ರ ಹಬ್ಬ ಅಲ್ಲ. ಮನೆ, ಮನದಲ್ಲಿ ಗಣೇಶ ಮೂರ್ತಿಯನ್ನು ಕೂರಿಸಿ ಪೂಜೆ ಸಲ್ಲಿಸಬಹುದು. ಕೇರಳದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಸೋಂಕು ತಡೆಗೆ ನಿರ್ಬಂಧ ಅನಿವಾರ್ಯವಾಗಿದೆ’ ಎಂದರು.

ಹೊಸ ಮನೆಯಲ್ಲೇ ವಾಸ

‘ಮಂಡ್ಯ ಮಣ್ಣಿನ ತಿಲಕ ಹಚ್ಚಿ ಅಂಬರೀಷ್‌ ಅವರನ್ನು ಕಳುಹಿಸಿಕೊಟ್ಟಿದ್ದೇವೆ. ಇಲ್ಲಿಯೇ ವಾಸ ಮಾಡಬೇಕು ಎಂಬುದು ನನ್ನ ಹಾಗೂ ಅಭಿಯ ಆಸೆಯಾಗಿತ್ತು. ಅದರಂತೆ ಮನೆ ನಿರ್ಮಾಣಕ್ಕೆ ಚಾಲನೆ ನೀಡಿದ್ದೇವೆ. ಸಂದರ್ಭ ಹೇಗಿರುತ್ತದೆ ಎಂಬ ಬಗ್ಗೆ ಯಾರಿಗೂ ಗೊತ್ತಿಲ್ಲ. ಅಭಿ ಚುನಾವಣೆ ಸ್ಪರ್ಧೆಯ ಬಗ್ಗೆ ಅವನನ್ನೇ ಕೇಳಿ’ ಎಂದು ಸುಮಲತಾ ಹೇಳಿದರು.

ಅಭಿಷೇಕ್‌ ಮಾತನಾಡಿ ‘ಸರಳವಾಗಿ ಒಂದು ಮನೆ ಕಟ್ಟುತ್ತಿದ್ದೇವೆ. ಅಮ್ಮ ಮಾತುಕೊಟ್ಟಂತೆ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಎರಡು ವರ್ಷ ಬಾಡಿಗೆ ಮನೆಯಲ್ಲಿ ಇದ್ದೆವು. ಅಭಿಮಾನಿಗಳ ಜೊತೆ ಇರಬೇಕು, ಅವರ ಜೊತೆಯಲ್ಲೇ ಬೆಳೆಯಬೇಕು. ಜನ ಇಲ್ಲಿಯವರೆಗೂ ಬೆಳೆಸಿದ್ದಾರೆ, ಮುಂದಕ್ಕೂ ಬೆಳೆಸುತ್ತಾರೆ ಎಂಬ ನಂಬಿಕೆ ಇದೆ. ಜನರ ಇಚ್ಛೆ ಏನು ಎಂಬುದು ಮುಂದೆ ಗೊತ್ತಾಗುತ್ತದೆ. ಚುನಾವಣೆ ಸ್ಪರ್ಧೆಯ ಬಗ್ಗೆ ಮತ್ತೆ ಮತ್ತೆ ಮಾತನಾಡುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT