ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕಿನ ಮೇಲೆ ಬಿಎಸ್‌ವೈಗೆ ಈಗ ಪ್ರೀತಿ ಬಂದಿದೆ

ಪ್ರಚಾರ ಸಭೆಯಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ
Last Updated 28 ನವೆಂಬರ್ 2019, 15:10 IST
ಅಕ್ಷರ ಗಾತ್ರ

ಕಿಕ್ಕೇರಿ: 2008ರಲ್ಲಿ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಅವರಿಗೆ ತಾಲ್ಲೂಕಿನ ಮೇಲೆ ಪ್ರೀತಿ ಈಗ ಬಂದಿದೆ. ಅವರ ಮಗ ವಿಜಯೇಂದ್ರ ತಾಲ್ಲೂಕಿನಲ್ಲಿ ಠಿಕಾಣಿ ಹೂಡಿರುವುದು ಏತಕ್ಕೆ ಕಾಣೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಪಟ್ಟಣದಲ್ಲಿನ ಎಪಿ‌ಎಂಸಿ ಆವರಣ ದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜೆಡಿ‌ಎಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‍‘ಬಡವರ ಬಂಧು ಯೋಜನೆಯಡಿ ಬಡ್ಡಿರಹಿತವಾಗಿ ₹10 ಸಾವಿರ ಸಾಲ ಸೌಲಭ್ಯ ಒದಗಿಸಿದ್ದೇನೆ. ಸ್ತ್ರೀಶಕ್ತಿ, ಸ್ವಸಹಾಯ ಸಂಘಗಳಿಗೆ ₹5 ಲಕ್ಷ ವರೆಗೆ ಶೂನ್ಯ ಬಡ್ಡಿಯಲ್ಲಿ ಸಾಲ ನೀಡಿದ್ದೇನೆ. ಮಾಸಾಶನ ಹೆಚ್ಚಳ ಮಾಡಿರುವುದೆಲ್ಲವೂ ಜೆಡಿಎಸ್‌ ಪಕ್ಷದ ಸಾಧನೆಯಲ್ಲವೇ? ಸಂತೇಬಾಚಹಳ್ಳಿ ಬರಗಾಲಪೀಡಿತ ಪ್ರದೇಶದ ರೈತರಿಗೆ ಅನುಕೂಲವಾಗಲು ₹212 ಕೋಟಿ ವೆಚ್ಚದಲ್ಲಿ ಏತನೀರಾವರಿ ಯೋಜನೆಗೆ ಮುಂದಾಗಿದ್ದೆ. ಆದರೆ, ಇದು ತನ್ನ ಸಾಧನೆ ಎಂದು ಯಡಿಯೂರಪ್ಪ ಹೇಳುವುದು’ ನ್ಯಾಯವೇ ಎಂದು ಪ್ರಶ್ನಿಸಿದರು.

ಶಾಸಕ ಪ್ರೀತಂಗೌಡ ಹಾಸನದಲ್ಲಿ ರಾಜಕಾರಣ ಮಾಡದೆ, ದೊಡ್ಡ ಶಾಸಕ ನಂತೆ ವರ್ತಿಸುತ್ತಿದ್ದಾರೆ. ಮುಂದಿನ ದಿನದಲ್ಲಿ ಹಾಸನದಲ್ಲಿ ಅವರ ರಾಜಕೀಯ ಭವಿಷ್ಯವೇ ಇಲ್ಲವಾಗಲಿದೆ ಎಂದರು.

‘ಬಾಂಬೆ ಗಿರಾಕಿಗೆ ಒಳ್ಳೆಯವ ಎಂದು ಟಿಕೆಟ್ ಕೊಟ್ಟೆ. ಆದರೆ, ಆತ ನನ್ನ ಅಕ್ಕನ ಮೇಲೆ ಸುಳ್ಳು ಹೇಳಿದ. ಮನೆಯ ಮಗನಂತೆ ಓಡಾಡಿಕೊಂಡು ಹಣಕ್ಕಾಗಿ ತನ್ನನ್ನೇ ಬಿಜೆಪಿಗೆ ಮಾರಿಕೊಂಡ. ಬಜೆಟ್ ಮಂಡನೆ ಮಾಡಲು ಸಿದ್ಧವಾಗಿದ್ದಾಗ ಮೆಲ್ಲನೆ ಮುಂಬೈಗೆ ಹಾರಿಹೋದ. ಆಸ್ಪತ್ರೆ ಸೇರಿ ಹುಷಾರಿಲ್ಲ ಎಂದು ನಾಟಕವಾಡಿದ. ಸರ್ಕಾರದ ಪತನಕ್ಕೆ ಕಾರಣನಾದ ಹೋಟೆಲ್ ಗಿರಾಕಿಗೆ ತಕ್ಕ ಪಾಠ ಕಲಿಸಲು ಮುಂದಾಗಬೇಕು’ ಎಂದು ಮನವಿ ಮಾಡಿದರು.

ನಾರಾಯಣಗೌಡ ಮಗಳ ಮದುವೆ ಆಗಿ ಒಂದು ವರ್ಷವಾದರೂ ಈಗ ಬೀಗರ ಊಟ ಹಾಕಿಸುತ್ತಿದ್ದಾನೆ ಎಂದು ಕಿಡಿಕಾರಿದರು.

ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ‘ನಾರಾಯಣಗೌಡ ಅಮಾವಾಸ್ಯೆ ದಿನಕೊಟ್ಟ ಸೀರೆ ಬರುವ ಅಮಾವಾಸ್ಯೆಗೆ ಹರಿದುಹೋಗಿದೆ. ರಾಡೊ ವಾಚ್ ಕಂತ್ರಿಯಾಗಿದೆ. ಎಲ್ಲವೂ ಟೋಪಿ ಗಿರಾಕಿಯದ್ದು ಅಲ್ಲವೆ? ಈತ ಕೊಡುವ ಪಾಪದ ಹಣವನ್ನು ಎಡಗೈನಲ್ಲಿ ತಗೊಂಡು, ಬಲಗೈನಲ್ಲಿ ಜೆಡಿ‌ಎಸ್‌ಗೆ ಮತ ಹಾಕಿ’ ಎಂದರು.‌

ಜೆಡಿಎಸ್‌ ಅಭ್ಯರ್ಥಿ ಬಿ.ಎಲ್.ದೇವರಾಜು, ಶಾಸಕರಾದ ಎಚ್.ಡಿ. ರೇವಣ್ಣ, ಸಿ.ಎಸ್. ಪುಟ್ಟರಾಜು, ಅನ್ನದಾನಿ ಶ್ರೀನಿವಾಸ್, ಸಿ.ಎನ್. ಬಾಲಕೃಷ್ಣ, ಡಿ.ಸಿ.ತಮ್ಮಣ್ಣ, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಜಿಪಂ ಸದಸ್ಯರಾದ ರಾಮದಾಸು, ಎಚ್.ಟಿ. ಮಂಜೇಗೌಡ, ಸಿ.ಎನ್. ಪುಟ್ಟಸ್ವಾಮಿ ಗೌಡ, ಎಪಿ‌ಎಂಸಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ಜೆಡಿ‌ಎಸ್ ಹೋಬಳಿ ಘಟಕದ ಅಧ್ಯಕ್ಷ ಕಾಯಿ ಮಂಜೇಗೌಡ, ಜಾನಕಿರಾಂ, ಕೋಟಹಳ್ಳಿ ಶ್ರೀನಿವಾಸ್, ಸುರೇಶ್ ಇದ್ದರು.

ಸಕ್ಕರೆ ಕಾರ್ಖಾನೆ ಆರಂಭಿಸಲಿ: ಸವಾಲ್‌

‘ಮಂಡ್ಯ ಸಕ್ಕರೆ ಕಾರ್ಖಾನೆ ಮುಚ್ಚುವಷ್ಟು ಕೆಡುಕುನಲ್ಲ. ಹೊಸದಾಗಿ ಸಕ್ಕರೆ ಕಾರ್ಖಾನೆ ಜಿಲ್ಲೆಯಲ್ಲಿ ತೆರೆಯಲು ₹450 ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಟ್ಟಿದ್ದೆ. ಜಿಲ್ಲೆ, ತಾಲ್ಲೂಕಿನ ಮೇಲೆ ಮಮತೆ ಇದ್ದರೆ ಮೊದಲು ಈ ಕಾರ್ಖಾನೆ ಆರಂಭಕ್ಕೆ ಯಡಿಯೂರಪ್ಪ ಚಾಲನೆ ನೀಡಲಿ’ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT