ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ: ಒಡೆದ ಕಾಲುವೆ, ನೂರಾರು ಎಕರೆ ಬೆಳೆ ಹಾನಿ

ಜಿಲ್ಲೆಯ ವಿವಿಧೆಡೆ ಭಾರಿ ಮಳೆ: ಕುಸಿದ ಮನೆಗಳು: ಸಂತ್ರಸ್ತ ರೈತರಿಗೆ ಪರಿಹಾರ ನೀಡಲು ಆಗ್ರಹ
Last Updated 6 ಸೆಪ್ಟೆಂಬರ್ 2022, 5:57 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಭಾನುವಾರ ರಾತ್ರಿ ಸುರಿದು ಭಾರಿ ಮಳೆಗೆ ತಾಲ್ಲೂಕಿನ ಹೊಸ ಆನಂದೂರು ಬಳಿ ಕೆಆರ್‌ಎಸ್‌ ಬಲದಂಡೆ ನಾಲೆ (ಆರ್‌ಬಿಎಲ್‌ಎಲ್‌)ಯ ಏರಿ ಒಡೆದು ಕೃಷಿ ಜಮೀನು ಮುಳುಗಡೆಯಾಗಿದೆ.

ನಾಲೆಯ ಜತೆಗೆ ಬೆಳಗೊಳ ಬಳಿ ಹರಿಯುವ ಅಡ್ಡಹಳ್ಳ ಉಕ್ಕಿ ಹರಿದಿದೆ. ಬೆಳಗೊಳ, ಮಜ್ಜಿಗೆಪುರ ಮತ್ತು ಹೊಸ ಆನಂದೂರು ವ್ಯಾಪ್ತಿಯಲ್ಲಿ 100 ಎಕರೆಯಷ್ಟು ಭತ್ತ ಇತರ ಬೆಳೆಗಳಿಗೆ ಹಾನಿಯಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಿಶಾಂತ್‌ ಕೀಲಾರ ತಿಳಿಸಿದ್ದಾರೆ.

ಕೆಲವೆಡೆ ಕೃಷಿ ಜಮೀನುಗಳು ಕೊರೆದು ಹೋಗಿವೆ. ಬೆಳೆಗಳ ಮೇಲೆ ಮರಳು ಮತ್ತು ಕೆಸರು ತುಂಬಿಕೊಂಡಿದೆ. ಅಡಿಕೆ, ತೆಂಗು, ಬಾಳೆ ತೋಟಗಳು ಕೂಡ ಜಲಾವೃತವಾಗಿವೆ. ಅಡ್ಡಹಳ್ಳಕ್ಕೆ ಹೊಂದಿಕೊಂಡಿರುವ ಮೈಸೂರು ತಾಲ್ಲೂಕು ಕುಂಬಾರಕೊಪ್ಪಲು ರೈತರಿಗೆ ಸೇರಿದ ಬೆಳೆಗಳಿಗೂ ಹಾನಿಯಾಗಿದೆ.

ಮೈಸೂರು ಬಳಿಯ ಕೂರ್ಗಳ್ಳಿ ಕೆರೆ, ಹೆಬ್ಬಾಳ ಕೆರೆ ಒಡೆದು ಅಪಾರ ಪ್ರಮಾಣದ ನೀರು ಹರಿದು ಬಂದಿದೆ. ಬೆಳಗೊಳದ ಜಲಭಾಗ್‌ ಬಳಿ ಮಂಗಳವಾರ ಮಧ್ಯಾಹ್ನದ ವರೆಗೂ ಭತ್ತದ ಗದ್ದೆಯಲ್ಲಿ ಮೂರು ಅಡಿಗಳಷ್ಟು ನೀರು ನಿಂತಿತ್ತು. ಕಾವೇರಿ ನೀರಾವರಿ ನಿಗಮದ ಎಂಜಿನಿಯರ್‌ ಮಂಜುನಾಥ್‌ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದರು.

ಮಳೆ ಬೀಳುವ ಸೂಚನೆ ಕಂಡ ತಕ್ಷಣ ಆರ್‌ಬಿಎಲ್‌ಎಲ್‌ ನಾಲೆಯಲ್ಲಿ ನೀರು ನಿಲ್ಲಿಸಿದ್ದರೆ ಈ ಅವಘಡ ತಪ್ಪಿಸಬಹುದಿತ್ತು. ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರು ನಷ್ಟ ಅನುಭವಿಸಿದ್ದಾರೆ. ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಬೆಳಗೊಳ ಗ್ರಾಮದ ರೈತರಾದ ಸುನಿಲ್‌, ವಿಷಕಂಠು ಒತ್ತಾಯಿಸಿದರು.

ಮನೆ ಕುಸಿತ: ತಾಲ್ಲೂಕಿನ ಲಾಲಿಪಾಳ್ಯ ಗ್ರಾಮದಲ್ಲಿ ಗಾಯತ್ರಿ ಅವರಹೆಂಚಿನ ಮನೆ ಮಳೆಯಿಂದಾಗಿ ಕುಸಿದು ಬಿದ್ದಿದೆ. ಮನೆಯ ಮತ್ತೊಂದು ಪಾರ್ಶ್ವದಲ್ಲಿ ಮಲಗಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಪಾತ್ರೆಗಳು, ಧವಸ– ಧಾನ್ಯ, ಬಟ್ಟೆಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ಗ್ರಾ.ಪಂ. ಸದಸ್ಯ ಮೋಹನಕುಮಾರ್‌ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನೆ ಕಳೆದುಕೊಂಡಿರುವ ಸಂತ್ರಸ್ತ ಮಹಿಳೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT