ಸೋಮವಾರ, ಆಗಸ್ಟ್ 8, 2022
21 °C
ವಿವಿಧೆಡೆಯಿಂದ ಬರುವ ಗ್ರಾಹಕರು

ಕೊರೊನಾ ಮಧ್ಯೆಯೂ ‘ಬೆಣ್ಣೆ ಇಡ್ಲಿ’ಗೆ ಭಾರಿ ಬೇಡಿಕೆ

ಗಣಂಗೂರು ನಂಜೇಗೌಡ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ಕೊರೊನಾ ಕಾರಣದಿಂದ ಬಹುತೇಕ ವ್ಯಾಪಾರ, ವಹಿವಾಟು ಸ್ಥಗಿತಗೊಂಡು ಮಧ್ಯಮ ವರ್ಗದ ಜನರೂ ಬವಣೆಪಡುತ್ತಿರುವ ವೇಳೆಯಲ್ಲಿ ತಾಲ್ಲೂಕಿನ ದರಸಗುಪ್ಪೆ ಗ್ರಾಮದ ಶಿವಪ್ಪ ಅವರ ಹೋಟೆಲ್‌ನ ಬೆಣ್ಣೆ ಇಡ್ಲಿಗೆ ಬೇಡಿಕೆ ಕಡಿಮೆಯಾಗಿಲ್ಲ.

ಶ್ರೀರಂಗಪಟ್ಟಣ– ಬೀದರ್‌ ಹೆದ್ದಾರಿ ಮಗ್ಗುಲಲ್ಲಿ, ದರಸಗುಪ್ಪೆಯ ಪುಟ್ಟ ಹೋಟೆಲ್‌ನಲ್ಲಿ ಇಡ್ಲಿ ವ್ಯಾಪಾರ ನಿರಂತರವಾಗಿ ನಡೆಯುತ್ತಿದೆ. ಕಟ್ಟುನಿಟ್ಟಿನ ಲಾಕ್‌ಡೌನ್‌ ನಡುವೆಯೂ ಗ್ರಾಹಕರು ಬೆಣ್ಣೆ ಇಡ್ಲಿ ಹುಡುಕಿಕೊಂಡು ಇಲ್ಲಿಗೆ ಬರುತ್ತಿದ್ದಾರೆ.

ಮೈಸೂರು, ಬೆಂಗಳೂರು, ಮಂಡ್ಯ ಹಾಗೂ ಆಸುಪಾಸಿನ ತಾಲ್ಲೂಕುಗಳ ಜನರು ಬೆಣ್ಣೆ ಇಡ್ಲಿ ತಿನ್ನಲೆಂದೇ ದರಸಗುಪ್ಪೆಯ ಶಿವಪ್ಪ ಅವರ ಹೋಟೆಲ್‌ಗೆ ಬರುತ್ತಿದ್ದಾರೆ. ರಸ್ತೆ ಬದಿಯಲ್ಲೇ ನಿಂತು ಎರಡು, ಮೂರು ಪ್ಲೇಟ್‌ ಇಡ್ಲಿ ತಿಂದು ಹೋಗುತ್ತಾರೆ.

ಕೊರೊನಾ ಸೋಂಕು ಕಾಣಿಸಿಕೊಳ್ಳುವುದಕ್ಕೆ ಮುನ್ನ ಇದ್ದ ಬೇಡಿಕೆ ಬೆಣ್ಣೆ ಇಡ್ಲಿಗೆ ಈಗಲೂ ಇದೆ. ಹೆಸರೇ ಇಲ್ಲದ ಈ ಹೋಟೆಲ್‌ನಲ್ಲಿ ಬೆಳಗಿನ ತಿಂಡಿಯಾಗಿ ಇಡ್ಲಿಯನ್ನು ಮಾತ್ರ ತಯಾರಿಸಲಾಗುತ್ತದೆ. ಬೆಳಿಗ್ಗೆ 7.15ರಿಂದ 10 ಗಂಟೆ ವರೆಗೆ ಮಾತ್ರ ಹೋಟೆಲ್‌ ತೆರೆದಿರುತ್ತದೆ. ಹೋಟೆಲ್‌ ತೆರೆಯುವ ಮುನ್ನವೇ ಗ್ರಾಹಕರು ಕಾದು ನಿಲ್ಲುವುದು ಇಲ್ಲಿನ ವಿಶೇಷತೆ. ಸ್ಥಳೀಯರಿಗಿಂತ ನಗರ ಪ್ರದೇಶದ ಜನರೇ ಈ ಹೋಟೆಲ್‌ ಪ್ರಮುಖ ಗ್ರಾಹಕರು. ಈ ಹೋಟೆಲ್‌ ವಾರದ ಎಲ್ಲ ದಿನವೂ ತೆರೆದಿರುತ್ತದೆ.

ಶಿವಪ್ಪ 30 ವರ್ಷಗಳಿಂದ ಇಡ್ಲಿ ತಯಾರಿಸಿ ಮಾರಾಟ ಮಾಡುತ್ತಾರೆ. ಒಂದು ಪ್ಲೇಟ್‌ನಲ್ಲಿ 8 ಇಡ್ಲಿ ಇರುತ್ತವೆ. ಅದಕ್ಕೆ ₹ 40 ಬೆಲೆ ನಿಗದಿ ಮಾಡಲಾಗಿದೆ. ಇಡ್ಲಿಯ ಜತೆಗೆ ಹೆಬ್ಬೆರಳು ಗಾತ್ರದ ಬೆಣ್ಣೆ ಮತ್ತು ಘಮ ಘಮಿಸುವ ಚಟ್ನಿ ಕೊಡುತ್ತಾರೆ. ಕುಚ್ಚುಲಕ್ಕಿ ಮತ್ತು ಬೆಣತಕ್ಕಿಯನ್ನು ಹದವಾಗಿ ರುಬ್ಬಿ ಇಡ್ಲಿ ತಯಾರಿಸಲಾಗುತ್ತದೆ.

ಸದ್ಯ ಪಾರ್ಸೆಲ್‌ ಮಾತ್ರ: ಕೊರೊನಾ ಕಾರಣದಿಂದ ಬೆಣ್ಣೆ ಇಡ್ಲಿಯನ್ನು ಪಾರ್ಸೆಲ್‌ ಮಾಡಿ ಕಳುಹಿಸಲಾಗುತ್ತಿದೆ. ಆದರೂ ಇಲ್ಲಿ ಕೈಗೆ ಸಿಗಬೇಕಾದರೆ ಕನಿಷ್ಠ ಅರ್ಧ ತಾಸು ಕಾಯಲೇಬೇಕು. ಸಿನಿಮಾ, ಧಾರಾವಾಹಿಗಳ ಕಲಾವಿದರು, ರಾಜಕಾರಣಿಗಳು, ಅಧಿಕಾರಿಗಳು ಕೂಡ ಈ ಪುಟ್ಟ ಹೋಟೆಲ್‌ನ ಇಡ್ಲಿಯ ಗ್ರಾಹಕರು.

‘ಈ ಕಡೆ ಬಂದಾಗ ದರಸಗಪ್ಪೆ ಶಿವಪ್ಪನ ಹೋಟೆಲ್‌ ಬೆಣ್ಣೆ ಇಡ್ಲಿ ತಿನ್ನದೇ ಹೋಗುದಿಲ್ಲ. ಕನಿಷ್ಠ ಎರಡು ಪ್ಲೇಟ್‌ ಇಡ್ಲಿ ತಿಂದೇ ಹೋಗುತ್ತೇನೆ. ಬೆಂಗಳೂರಿನ ಸ್ನೇಹಿತರಿಗೆ ಬೆಣ್ಣೆ ಇಡ್ಲಿ ತಿನ್ನಿಸಲೆಂದೇ ಕರೆ ತಂದಿದ್ದೇನೆ’ ಎಂದು ಭಾನುವಾರ ಹೋಟೆಲ್‌ ಮುಂದೆ ರಸ್ತೆ ಬದಿ ನಿಂತು ಇಡ್ಲಿ ತಿನ್ನುತ್ತಿದ್ದ ಮೈಸೂರಿನ ಹಿಮಾಂಶು ಹೇಳಿದರು.

‘ಕೊರೊನಾ ಬರೋಕಿಂತ ಮುಂಚೆ ಪ್ರತಿ ದಿನ ₹ 5ರಿಂದ 6 ಸಾವಿರ ವ್ಯಾಪಾರ ನಡೀತಿತ್ತು. ಈಗ ತುಸು ಕಡಿಮೆ ಆಗದೆ. ಈಗ್ಲೂ ಮೂರು, ನಾಕು ಸಾವಿರ ತಂಕ ಯಾಪಾರ ಆಯ್ತದೆ. ನಗರ ಪ್ರದೇಶದ ಗಿರಾಕಿಗಳು ಒಂದು ದಿನ ಮುಂಚೆಯೇ ಇಡ್ಲಿ ಬೇಕು ಅಂತ ಫೋನ್‌ ಮಾಡ್ತಾರೆ. ನಾನು, ನನ್ ಮಗ ಸುರೇಶ ಇಬ್ರೇ ಎಲ್ಲ ಮಾಡ್ಕೋತೀವಿ. ಹಾಲು ತಂದು ಮೊಸರು ಮಾಡಿ ಬೆಣ್ಣೆನೂ ತೆಗೀತೀವಿ. ಪಾರ್ಸೆಲ್‌ ಕೊಡೋದ್ರಿಂದ ಪ್ಲೇಟ್‌ಗೆ ₹ 5 ರೂಪಾಯ್‌ ಜಾಸ್ತಿ ಮಾಡಿದ್ದೀವಿ, ಅಷ್ಟೆ’ ಎನ್ನುತ್ತಾರೆ ಬೆಣ್ಣೆ ಇಡ್ಲಿ ಹೋಟೆಲ್‌ ಮಾಲೀಕ ಶಿವಪ್ಪ. ಶಿವಪ್ಪ ಅವರ ಸಂಪರ್ಕಕ್ಕೆ ಮೊ: 9972914888.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು