ಮಂಗಳವಾರ, ಮಾರ್ಚ್ 28, 2023
30 °C
ಸಾವಿನ ಪ್ರಕರಣ ಬೆನ್ನು ಹತ್ತಿದ ಮಂಡ್ಯ ಪೂರ್ವ ಠಾಣೆ ಪೊಲೀಸರು; ತಪ್ಪೊಪ್ಪಿಕೊಂಡ ಪತ್ನಿ

ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಉಪ ಪ್ರಾಂಶುಪಾಲರೊಬ್ಬರ ಸಾವಿನ ಪ್ರಕರಣದ ರಹಸ್ಯವನ್ನು ಬೆನ್ನತ್ತಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಹಿನ್ನೆಲೆಯಲ್ಲಿ ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ನಗರದ ಗುತ್ತಲು ರಸ್ತೆಯ ನಿವಾಸಿ, ತಗ್ಗಹಳ್ಳಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಅಲ್ತಾಫ್ ಮೆಹದಿ ಅವರ ಸಾವಿನ ರಹಸ್ಯ ಭೇದಿಸುವಲ್ಲಿ ನಗರದ ಪೂರ್ವ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಪತ್ನಿಯೇ ತನ್ನ ಪ್ರಿಯಕರನ ಜತೆಗೂಡಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ವಿಷಯ ತನಿಖೆಯಿಂದ ತಿಳಿದು ಬಂದಿದೆ.

ಜೂನ್‌ 29ರಂದು ನಗರದ ಗುತ್ತಲು ರಸ್ತೆಯ ಸಫ್ದರಿಯಾ ಮಸೀದಿ ಬಳಿ ಅಲ್ತಾಫ್ ಮೆಹದಿ ಅವರ ಶವ ಅನುಮಾನಾಸ್ಪದವಾಗಿ ಸಿಕ್ಕಿತ್ತು.

ರಾತ್ರಿ ಶೌಚಾಲಯಕ್ಕೆ ಹೊರಗಡೆ ಬಂದ ಸಂದರ್ಭದಲ್ಲಿ ಹೃದಯಾ ಘಾತದಿಂದ ಮೃತಪಟ್ಟಿದ್ದಾರೆ ಎಂದು ಪತ್ನಿ ರಿಜ್ವಾನಾ ಬೇಗಂ ತಿಳಿಸಿದ್ದರು. ಆದರೆ ಮೃತ ದೇಹದ ಮೇಲೆ ಗಾಯದ ಗುರುತುಗಳಿದ್ದರಿಂದ ಕುಟುಂಬಸ್ಥರು ಕೊಲೆ ಶಂಕೆ ವ್ಯಕ್ತಪಡಿಸಿದ್ದರು. ನಗರದ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಕರೆ ವಿವರಗಳ ಮಾಹಿತಿ ಆಧರಿಸಿ ತನಿಖೆ ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ರಿಜ್ವಾನಾ ಬೇಗಂ ಅವರೊಂದಿಗೆ ದಾವಣಗೆರೆ ಜಿಲ್ಲೆಯ ರೆಹಮತ್‌ ಉಲ್ಲಾನೊಂದಿಗೆ ಅಕ್ರಮ ಸಂಬಂಧ ಇರುವ ವಿಷಯ ಬೆಳಕಿಗೆ ಬಂದಿದೆ.

ವಿಚಾರಣೆ ನಡೆಸಿದಾಗ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೂರ್ವ ಪೊಲೀಸ್‌ ಠಾಣೆ ಎಸ್‌ಐ ವೈ.ಎನ್‌. ರವಿಕುಮಾರ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.