ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ನಭಾಗ್ಯ ಅಕ್ಕಿ ಮಾರಿದರೆ ಕ್ರಿಮಿನಲ್‌ ಕೇಸ್‌

ತಮಿಳು ಕಾಲೊನಿ ನಿವಾಸಿಗಳಿಗೆ ಆಹಾರ ಇಲಾಖೆ ಅಧಿಕಾರಿಗಳ ಎಚ್ಚರಿಕೆ
Last Updated 29 ನವೆಂಬರ್ 2019, 13:23 IST
ಅಕ್ಷರ ಗಾತ್ರ

ಮಂಡ್ಯ: ಪಡಿತರ ಕಾರ್ಡ್‌ದಾರರು ಅನ್ನಭಾಗ್ಯ ಯೋಜನೆಯಡಿ ಪಡೆದ ಅಕ್ಕಿಯನ್ನು ಮಾರಾಟ ಮಾಡಿದರೆ ಕಾರ್ಡ್‌ ರದ್ದು ಪಡಿಸಿ ಕ್ರಿಮಿನಲ್‌ ಪ್ರಕರಣ ದಾಖಲು ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದರು.

ಅನ್ನಭಾಗ್ಯ ಅಕ್ಕಿ ಮಾರಾಟ ಮಾರಾಟವಾಗುತ್ತಿರುವ ಬಗ್ಗೆ ‘ಪ್ರಜಾವಾಣಿ’ ಗುರುವಾರ ‘ತಮಿಳುಕಾಲೊನಿ: ಅನ್ನಭಾಗ್ಯ ಅಕ್ಕಿ ಮಾರಾಟ’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಹೋಟೆಲ್‌, ಮೆಸ್‌ ಮಾಲೀಕರು ಕಾಲೊನಿಗೆ ಬಂದು ಅಕ್ಕಿ ಖರೀದಿ ಮಾಡುತ್ತಿದ್ದಾರೆ. ಪ್ರತಿ ಕೆ.ಜಿಗೆ ₹ 15 ದಿಗದಿ ಮಾಡಲಾಗಿದೆ. ಬುಧವಾರ ಟಾಟಾ ಸುಮೊದಲ್ಲಿ ಬಂದ ಕೆಲವರು ಅಕ್ಕಿ ಖರೀದಿಸಿ ಕೊಂಡೊಯ್ಯುವ ಚಿತ್ರದೊಂದಿಗೆ ವರದಿ ಪ್ರಕಟಿಸಲಾಗಿತ್ತು.

ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಕಾಲೊನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಸಿವು ಮುಕ್ತ ರಾಜ್ಯ ರೂಪಿಸಲು ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದೆ. ಈ ಅಕ್ಕಿ ದುರುಪಯೋಗವಾಗಬಾರದು. ಈ ಅಕ್ಕಿಯನ್ನು ಖರೀದಿ ಮಾಡುವವರ ವಿರುದ್ಧವೂ ಕ್ರಿಮಿನಲ್‌ ಪ್ರಕರಣ ದಾಖಲು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮನೆ, ಗುಡಿಸಲುಗಳಿಗೆ ಭೇಟಿ ನೀಡಿದ ಸಿಬ್ಬಂದಿ ಪಡಿತರ ಕಾರ್ಡ್‌ ಪರಿಶೀಲಿಸಿದರು. ಅಕ್ಕಿ ಗುಣಮಟ್ಟ ಹಾಗೂ ಬಳಕೆಯ ಬಗ್ಗೆ ನಿವಾಸಿಗಳನ್ನು ಪ್ರಶ್ನಿಸಿದರು. ದುರುಪಯೋಗವಾಗುವುದು ಕಂಡುಬಂದರೆ ಅಗತ್ಯ ವಸ್ತುಗಳ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

‘ಪ್ರಜಾವಾಣಿ ಪತ್ರಿಕೆ ಇಲಾಖೆಯನ್ನು ಎಚ್ಚರಿಸಿದೆ. ಜಂಟಿ ನಿರ್ದೇಶಕರಾದ ಎಚ್‌.ಕೆ.ಕೃಷ್ಣಮೂರ್ತಿ ಅವರ ಸೂಚನೆ ಮೇರೆಗೆ ತಮಿಳುಕಾಲೊನಿಯಲ್ಲಿ ಪರಿಶೀಲನೆ ನಡೆಸಿದ್ದೇವೆ. ಕಾಲೊಯಲ್ಲಿ 700 ಪಡಿತರ ಕಾರ್ಡ್‌ದಾರರು ಇದ್ದಾರೆ. ಅಕ್ಕಿ ದುರುಪಯೋಗ ಮಾಡಿಕೊಳ್ಳದಂತೆ ಎಚ್ಚರಿಕೆ ನೀಡಿದ್ದೇವೆ. ಮುಂದೆ ಕಾಲೊನಿ ಜನರ ಮೇಲೆ ನಿಗಾ ವಹಿಸುತ್ತೇವೆ’ ಎಂದು ಇಲಾಖೆಯ ಆಹಾರ ನಿರೀಕ್ಷಕ ಬಿ.ವಿ.ರೇವಣ್ಣ ಹೇಳಿದರು. ಸಹಾಯಕ ನಿರ್ದೇಶಕ ಆರ್‌.ಡಿ.ಕುಡುಚಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT