ಶುಕ್ರವಾರ, ಸೆಪ್ಟೆಂಬರ್ 17, 2021
30 °C
75ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅವರ ಸಂದೇಶ

ಐಕ್ಯತೆ, ಸಾಮರಸ್ಯ, ಸಮಗ್ರತೆಯೇ ಗುರಿ: ಕೆ.ಸಿ.ನಾರಾಯಣಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ ಪ್ರಾಣ ಕಳೆದುಕೊಂಡ ಮಹನೀಯರನ್ನು ಸ್ಮರಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಐಕ್ಯತೆ, ಸಮಗ್ರತೆ ಹಾಗೂ ಸಾಮರಸ್ಯಕ್ಕಾಗಿ ಎಲ್ಲರೂ ದುಡಿಯಬೇಕಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 75ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಅನೇಕ ಹಿರಿಯರ ತ್ಯಾಗ, ಬಲಿದಾನ, ದೇಶಭಕ್ತಿಯ ಪರಿಣಾಮವಾಗಿ ನಾವು ಇಂದು ಸ್ವಾತಂತ್ರ್ಯ ಎಂಬ ಸ್ವರ್ಗದಲ್ಲಿದ್ದೇವೆ. ಈ ಪವಿತ್ರ ದಿನದಂದು ದೇಶಕ್ಕಾಗಿ ಬಲಿದಾನಗೈದ ಅಸಂಖ್ಯ ವೀರಚೇತನಗಳಿಗೆ ನಮನ ಸಲ್ಲಿಸಬೇಕಾದುದು ನಮ್ಮ ಆದ್ಯ ಕರ್ತವ್ಯವಾಗಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಆದರ್ಶಗಳನ್ನು ಯುವಜನರು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

‘ಮದ್ದೂರಿನ ಶಿವಪುರದಲ್ಲಿ ನಡೆದ ಧ್ವಜ ಸತ್ಯಾಗ್ರಹ ಮಂಡ್ಯ ಜಿಲ್ಲೆಯಲ್ಲಿ ನಡೆದ ಬಲುದೊಡ್ಡ ಹೋರಾಟವಾಗಿದೆ. ಈ ಹೋರಾಟದಲ್ಲಿ ಪಾಲ್ಗೊಂಡಿದ್ದ ಎಚ್‌.ಕೆ.ವೀರಣ್ಣಗೌಡ, ಟಿ.ಸಿ.ಸಿದ್ದಲಿಂಗಯ್ಯ, ಎಚ್‌.ಸಿ.ದಾಸಪ್ಪ, ಇಂಡುವಾಳು ಹೊನ್ನಯ್ಯ, ಹೊನಗಾನಹಳ್ಳಿ ಪುಟ್ಟಣ್ಣ, ಕರಡಹಳ್ಳಿ ಕೃಷ್ಣಪ್ಪಗೌಡ, ತಿರುಮಲೇಗೌಡ, ಯಶೋಧರ ದಾಸಪ್ಪ, ಬಳ್ಳಾರಿ ಸಿದ್ದಮ್ಮ, ಎ.ಜಿ.ಬಂದೀಗೌಡ ಅವರು ಸ್ಮರಣೀಯರು’ ಎಂದು ಹೇಳಿದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೃಷಿಕರ ಮಕ್ಕಳ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿವೇತನ, ಹಿರಿಯ ನಾಗರಿಕರಿಗೆ, ವಿಧವೆಯರಿಗೆ ಅಂಗವಿಕಲರಿಗೆ ಪಿಂಚಣಿ ಹೆಚ್ಚಳ ಮಾಡುವ ಮೂಲಕ ಅವರ ಬದುಕು ಬೆಳಗಿಸುವ ಪ್ರಯತ್ನ ಮಾಡಿದ್ದಾರೆ. ಮಂಡ್ಯ ಜಿಲ್ಲೆಗೆ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಇಲ್ಲಿಯವರೆಗೆ ಒಟ್ಟು 2.63 ಲಕ್ಷ ರೈತ ಫಲಾನುಭವಿಗಳಿಗೆ ₹ 50.43 ಕೋಟಿ ಸಹಾಯಧನ ಬಂದಿದೆ’ ಎಂದರು.

‘ಕೃಷಿ ಯಾಂತ್ರೀಕರಣ ಕಾರ್ಯಕ್ರಮದಡಿ ₹ 33.64 ಕೋಟಿ ವೆಚ್ಚದಲ್ಲಿ 19, 511 ರೈತರಿಗೆ ಯಂತ್ರೋಪಕರಣ ವಿತರಣೆ ಮಾಡಲಾಗಿದೆ. ₹ 1,781 ಕೋಟಿ ವೆಚ್ಚದ ಶಾಶ್ವತ ಕುಡಿಯುವ ನೀರಿನ ಜಲಧಾರೆ ಯೋಜನೆಯನ್ನು ಸರ್ಕಾರ ಮಂಜೂರು ಮಾಡಿದ್ದು ಜಿಲ್ಲೆಯ 7 ತಾಲ್ಲೂಕಿನ 1,024 ಗ್ರಾಮಗಳಿಗೆ ಹಾಗೂ ಪಟ್ಟಣಗಳಿಗೆ ಅನುಕೂಲವಾಗಲಿದೆ. 2023ರ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ’ ಎಂದರು.

‘ಕೋವಿಡ್‌–19 ಮೊದಲನೇ ಹಾಗೂ 2ನೇ ಅಲೆಯಿಂದ ಸಂಕಷ್ಟಕ್ಕೆ ಒಳಗಾದ ಬೆಳೆಗಾರರಿಗೆ ಜಿಲ್ಲೆಯ ಒಟ್ಟು 4,040 ರೈತರಿಗೆ ₹ 2.11 ಕೋಟಿ ಸಹಾಯಧನ ವಿತರಣೆ ಮಾಡಲಾಗಿದೆ. ಜಿಲ್ಲೆಯಲ್ಲಿ 1.43 ಲಕ್ಷ ಅಂತ್ಯೋದಯ ಫಲಾನುಭವಿಗಳು, 4.32 ಲಕ್ಷ ಬಿಪಿಎಲ್‌ ಪಡಿತರ ಚೀಟಿಯ ಫಲಾನುಭವಿಗಳಿದ್ದು ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ’ ಎಂದರು.

‘ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯ 8 ವಿದ್ಯಾರ್ಥಿಗಳು 626ಕ್ಕೆ 625 ಅಂಕ ಪಡೆದಿರುವುದು ಹೆಮ್ಮೆಯ ವಿಚಾರ. ಕೆ.ಆರ್‌.ಪೇಟೆ ತಾಲ್ಲೂಕಿನಲ್ಲಿ 3 ಹಿಂದುಳಿದ ವರ್ಗಗಳ ವಸತಿ ನಿಲಯ ನಿರ್ಮಾಣಕ್ಕೆ ₹ 5,76 ಕೋಟಿ ಹಣ ಬಿಡುಗಡೆಯಾಗಿದೆ ಪರಶಿಷ್ಟ  ಜಾತಿ– ವರ್ಗಗಳ ವಿದ್ಯಾರ್ಥಿಗಳಿಗೆ ಕಳೆದ ಸಾಲಿನಲ್ಲಿ ₹ 5.65 ಕೋಟಿ ಪ್ರೋತ್ಸಾಹಧನ ಬಿಡುಗಡೆಯಾಗಿದೆ’ ಎಂದರು.

‘ಹನಿ ನೀರಾವರಿಗಾಗಿ ಜಿಲ್ಲೆಯಲ್ಲಿ ಒಟ್ಟು ₹ 45.23 ಕೋಟಿ ಸಹಾಯಧನ ಬಿಡುಗಡೆಯಾಗಿದ್ದು ಇದರಿಂದ 9,282 ರೈತರಿಗೆ ಅನುಕೂಲವಾಗಲಿದೆ. ಜಿಲ್ಲೆಯಲ್ಲಿ ಸಾಮಾಜಿಕ ಭದ್ರತೆ ಯೋಜನೆಯಡಿ ₹ 3.31 ಲಕ್ಷ ಜನರಿಗೆ ₹ 26.51 ಕೋಟಿ ಪಿಂಚಣಿ ನೀಡಲಾಗಿದೆ’ ಎಂದರು.

‘ಕಳೆದ ಒಂದು ವರ್ಷದಲ್ಲಿ ಸ್ವಚ್ಛ ಭಾರತ ಮಿಷನ್‌ ಅಡಿ ಒಟ್ಟು 2,902 ಶೌಚಾಲಯ ರಹಿತ ಕುಟುಂಬಗಳಿಗೆ ಶೌಚಾಲಯ ನಿರ್ಮಿಸಿ ಪ್ರೋತ್ಸಾಹಧನ ವಿತರಣೆ ಮಾಡಲಾಗಿದೆ. ಕೆ.ಆರ್‌.ಪೇಟೆ ತಾಲ್ಲೂಕಿನ ಬೂಕನಕೆರೆಯಲ್ಲಿ ₹ 113 ಕೋಟಿ ವೆಚ್ಚದಲ್ಲಿ ಫುಡ್‌ಪಾರ್ಕ್‌ ನಿರ್ಮಾಣ ಮಾಡಲಾಗುತ್ತಿದೆ’ ಎಂದರು.

ಆಕರ್ಷಕ ಪಥ ಸಂಚಲನ ಗಮನ ಸೆಳೆಯಿತು. ಸಮಾರಂಭದಲ್ಲಿ ಶಾಸಕರಾದ ಎಂ.ಶ್ರೀನಿವಾಸ್‌, ಕೆ.ಟಿ.ಶ್ರೀಕಂಠೇಗೌಡ, ಎನ್.ಅಪ್ಪಾಜಿಗೌಡ, ನಗರ ಸಭೆ ಅಧ್ಯಕ್ಷ ಎಚ್‌.ಎಸ್‌.ಮಂಜು, ಮುಡಾ ಅಧ್ಯಕ್ಷ ಶ್ರೀನಿವಾಸ್‌, ಜಿಲ್ಲಾಧಿಕಾರಿ ಎಸ್‌.ಅಶ್ವತಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ವಿ.ರಾಮ್‌ ಪ್ರಸಾತ್‌ ಮನೋಹರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅಶ್ವಿನಿ ಇದ್ದರು.

ಇಲ್ಲವಾದ ಮಕ್ಕಳ ಸಂಭ್ರಮ

ಕೋವಿಡ್‌– 19 ಕರಿನೆರಳಿನಲ್ಲಿ ನಡೆದ ಸ್ವತಂತ್ರ್ಯೋತ್ಸವದಲ್ಲಿ ಮಕ್ಕಳ ಸಂಭ್ರಮ ಮಾಯವಾಗಿತ್ತು. ಕೋವಿಡ್‌ಗೂ ಮೊದಲು ವಿವಿಧ ಶಾಲೆಗಳ ಮಕ್ಕಳು ಸಂಭ್ರಮದಿಂದ ಸಮವಸ್ತ್ರ ತೊಟ್ಟು ಜಿಲ್ಲಾ ಕ್ರೀಡಾಂಗಣಕ್ಕೆ ಹಾಜಾರಾಗುತ್ತಿದ್ದರು.

ಪ್ರತಿವರ್ಷ ಮಕ್ಕಳ ಸಾಂಸ್ಕೃತಿಕ ಉತ್ಸವಗಳು ಗಮನ ಸೆಳೆಯುತ್ತಿದ್ದವು. ಆದರೆ ಈ ಬಾರಿ 2 ನೃತ್ಯಗಳಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು. ಸಾತಂತ್ರ್ಯೋತ್ಸವದಲ್ಲಿ ಸಾಂಸ್ಕೃತಿಕ ವಾತಾವರಣ ಮಾಯವಾಗಿ ಕೇವಲ ಅಧಿಕಾರಿಗಳ ಉತ್ಸವವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.